ಡಿಸೆಂಬರ್ 31ರಿಂದ ಸಾರಿಗೆ ಮುಷ್ಕರ: ಬೆಂಬಲ ನೀಡುವಂತೆ ಡ್ರೈವರ್, ಕಂಡಕ್ಟರ್ ಪ್ರಯಾಣಿಕರಿಗೆ ಕರಪತ್ರ ಹಂಚಿದ ಸಾರಿಗೆ ಮುಖಂಡರು
ಡಿಸೆಂಬರ್ 31 ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಶಕ್ತಿ ಯೋಜನೆಯ ಬಾಕಿ ಹಣ ಬಿಡುಗಡೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಸಾರಿಗೆ ಸಂಘಟನೆಗಳ ಮುಖಂಡರು, ಪ್ರಯಾಣಿಕರು ಮತ್ತು ನೌಕರರಿಗೆ ಕರಪತ್ರ ವಿತರಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 19: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯ ಸಮಿತಿ ಸೇರಿದಂತೆ, ಒಟ್ಟು ಆರು ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಡಿಸೆಂಬರ್ 31 ರಿಂದ ಸಾರಿಗೆ ಮುಷ್ಕರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಮುಷ್ಕರ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬುಧವಾರದಿಂದಲೇ ಸಾರಿಗೆ ನೌಕರರ ಸಂಘಟನೆಗಳು ಸಕ್ರಿಯವಾಗಿವೆ. ಡಿಸೆಂಬರ್ 31 ರಿಂದ ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳು ಸಂಚಾರ ಮಾಡುವುದು ಅನುಮಾನವಾಗಿದೆ.
‘ಜನವರಿ ಒಂದರಿಂದ ಬಸ್ ಸಂಚಾರ ಇರುವುದಿಲ್ಲ, ಸಹಕರಿಸಿ’ ಎಂದು ಪ್ರಯಾಣಿಕರಿಗೆ ಮತ್ತು ಸಾರಿಗೆ ನೌಕರರಿಗೆ ಬುಧವಾರ ಕರಪತ್ರ ಹಂಚಿಕೆ ಮಾಡಲಾಗಿದೆ. ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್, ಡಿಪೋ-7 ವೋಲ್ವೋ ಬಸ್ ಡಿಪೋ, ಡಿಪೋ- 13 ಕತ್ರಿಗುಪ್ಪೆ, ಡಿಪೋ-20 ಬನಶಂಕರಿ ಸೇರಿದಂತೆ ಬಿಎಂಟಿಸಿ ಬಸ್ ಡಿಪೋಗಳಿಗೆ ತೆರಳಿ ಡಿಸೆಂಬರ್ 31 ರಿಂದ ಯಾರೂ ಕರ್ತವ್ಯ ನಿರ್ವಹಿಸಬಾರದು ಎಂದು ಕಂಡಕ್ಟರ್, ಡ್ರೈವರ್, ಮೆಕಾನಿಕ್ಗಳಿಗೆ ಸಾರಿಗೆ ಮುಖಂಡರು ಕರಪತ್ರ ಹಂಚಿದ್ದಾರೆ.
ಈ ವೇಳೆ ಮಾತನಾಡಿದ ಸಾರಿಗೆ ಮುಖಂಡರು, ಶಕ್ತಿ ಯೋಜನೆಯ ಬಾಕಿ ಹಣವೇ ಎರಡು ಸಾವಿರ ಕೋಟಿ ರೂಪಾಯಿಯಷ್ಟು ಇದೆ. ಅದನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಶಕ್ತಿ ಯೋಜನೆ: ಸರ್ಕಾರ ನಿಗಮಗಳಿಗೆ ಬಿಡುಗಡೆ ಮಾಡಬೇಕಿರುವ ಬಾಕಿ ಹಣ ವಿವರ
- ಕೆಎಸ್ಆರ್ಟಿಸಿ -714.39 ಕೋಟಿ ರೂ.
- ಬಿಎಂಟಿಸಿ – 290.97 ಕೋಟಿ ರೂ.
- ಎನ್ಡಬ್ಲ್ಯುಕೆಆರ್ಟಿಸಿ – 408.42 ಕೋಟಿ ರೂ.
- ಕೆಕೆಆರ್ಟಿಸಿ – 347.86 ಕೋಟಿ ರೂ.
- ಒಟ್ಟು ಮೊತ್ತ – 1761.64 ಕೋಟಿ ರುಪಾಯಿ ರೂ.
ಸರ್ಕಾರಕ್ಕೆ ಮುಷ್ಕರದ ನೋಟಿಸ್ ನೀಡಿರುವ ಸಮಿತಿ
ಮುಷ್ಕರ ನಡೆಸುವ ಬಗ್ಗೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 9 ರಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ನೋಟಿಸ್ ನೀಡಿದೆ. ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ, ಮುಷ್ಕರ ಮಾಡುವ ಮನ್ನ 21 ದಿನಗಳ ಕಾಲ ಮುಂಚಿತವಾಗಿ ನೋಟಿಸ್ ನೀಡಬೇಕು. ಆ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರಕ್ಕೆ ನೋಟಿಸ್ ನೀಡಿದೆ .ಆರು ಸಾರಿಗೆ ನೌಕರರ ಸಂಘಟನೆಗಳು ಸೇರಿ ಮುಷ್ಕರಕ್ಕೆ ಕರೆ ನೀಡಿದೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಮುಷ್ಕರಕ್ಕೆ ದಿನಾಂಕ ನಿಗದಿ: ಬಸ್ ಸಂಚಾರ ಬಂದ್ ಯಾವಾಗಿನಿಂದ ನೋಡಿ
ಒಟ್ಟಿನಲ್ಲಿ, ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಾರಿಗೆ ಮುಷ್ಕರ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ಸಿಎಂ ಸಿದ್ದರಾಮಯ್ಯ ಜಂಟಿ ಕ್ರಿಯಾ ಸಮಿತಿ ಜೊತೆಗೆ ಮಾತುಕತೆಗೆ ಮುಂದಾಗಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:24 am, Thu, 19 December 24