ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಮುಷ್ಕರಕ್ಕೆ ದಿನಾಂಕ ನಿಗದಿ: ಬಸ್ ಸಂಚಾರ ಬಂದ್ ಯಾವಾಗಿನಿಂದ ನೋಡಿ
ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ 38 ತಿಂಗಳ ಅರಿಯರ್ಸ್ ಹಣ ನೀಡಿಲ್ಲ. ಜನವರಿಯಲ್ಲೇ ಸಂಬಳ ಹೆಚ್ಚಳ ಮಾಡಬೇಕಿತ್ತು. ಆದರೆ ನವೆಂಬರ್ ಬಂದರೂ ಈ ಬಗ್ಗೆ ಯಾವುದೇ ಸುಳಿವಿಲ್ಲ. ಈ ಹಿನ್ನೆಲೆಯಲ್ಲಿ ಜಂಟಿ ಕ್ರಿಯಾ ಸಮಿತಿ ಬೆಳಗಾವಿ ಅಧಿವೇಶನದಲ್ಲಿ ಸಿಎಂಗೆ ನೋಟಿಸ್ ನೀಡುವ ಮೂಲಕ ಸಾರಿಗೆ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು, ನವೆಂಬರ್ 25: ಡಿಸೆಂಬರ್ 31 ರಿಂದ ಸಾರಿಗೆ ಮುಷ್ಕರಕ್ಕೆ ಈಗಾಗಲೇ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ. ಡಿಸೆಂಬರ್-9 ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ‘ಬೆಳಗಾವಿ ಚಲೋ’ ಮಾಡಿ ಅಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ನೀಡಲಾಗುತ್ತದೆ. ‘ಕೈಗಾರಿಕಾ ವಿವಾದ ಕಾಯಿದೆ’ ಸೆಕ್ಷನ್- 22 ರ ಪ್ರಕಾರ ಮುಷ್ಕರಕ್ಕೂ ಮುನ್ನ 21 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಈ ಹಿನ್ನೆಲೆಯಲ್ಲಿ ಡಿಸೆಂಬರ್- 9 ರಂದು ಸಿಎಂಗೆ ನೋಟಿಸ್ ಕೊಟ್ಟು ಡಿಸೆಂಬರ್- 31 ರಿಂದ ಸಾರಿಗೆ ಮುಷ್ಕರ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಆರು ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟ ಸೇರಿ ಜಂಟಿ ಕ್ರಿಯಾ ಸಮಿತಿ ಮಾಡಿಕೊಂಡಿದ್ದು, ಆ ಆರು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಸಿಎಂ ಸಿದ್ದರಾಮಯ್ಯನವರು ಉಡಾಫೆ ಮಾಡಿದರೆ ಬಸ್ ಸಂಚಾರ ಸ್ಥಗಿತಗೊಳ್ಳಲಿವೆ. ಈ ಹಿಂದೆಯೂ ಮೂರು ದಿನ ಮುಷ್ಕರ ಮಾಡಿದ ಮೇಲೆ ಸಿದ್ದರಾಮಯ್ಯ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದರು ಎಂದು ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಸರ್ಕಾರಕ್ಕೆ ಸಾರಿಗೆ ನೌಕರರ ಎಚ್ಚರಿಕೆ
ಕೆಎಸ್ಆರ್ಟಿಸಿ ಮುಷ್ಕರ ಹೇಗೆ ನಡೆಯುತ್ತದೆ ಎಂಬುದು ನಿಮಗೆ ಗೊತ್ತಿದೆ. ನಮ್ಮನ್ನು ಕರೆದು ಹವಾ ತೋರಿಸಿ ಮುಷ್ಕರ ವಾಪಸ್ಸು ಪಡೆಯಲು ಆಗದು. ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಮುಷ್ಕರ ನಿರ್ಧಾರ ಹಿಂಪಡೆಯುತ್ತೇವೆ. ನಮ್ಮ ಜಂಟಿ ಕ್ರಿಯಾ ಸಮಿತಿಯ ಎಲ್ಲಾ ಸಂಘಟನೆಗಳು ಒಪ್ಪಿಗೆ ಸೂಚಿಸಿವೆ. ನಮ್ಮ ಎಲ್ಲಾ ನೌಕರರು ಮುಷ್ಕರಕ್ಕೆ ಸಿದ್ಧರಾಗಲು ಸಮಾವೇಶ ಮಾಡುತ್ತೇವೆ. ಎಲ್ಲರಲ್ಲೂ ತಿಳಿವಳಿಕೆ ಮೂಡಿಸುತ್ತೇವೆ. ಬಹಳ ಯಶಸ್ವಿಯಾಗಿ ಮುಷ್ಕರ ಆಗಲಿದೆ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಸರ್ಕಾರಕ್ಕೆ ಸಾರಿಗೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
38 ತಿಂಗಳ ಅರಿಯರ್ಸ್ ಬಾಕಿ, ವೇತನ ಹೆಚ್ಚಳವೂ ಇಲ್ಲ
ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ, ಬಿಎಂಟಿಸಿ, ಸೇರಿದಂತೆ ನಾಲ್ಕು ನಿಗಮದ ನೌಕರರಿಗೆ 38 ತಿಂಗಳ ಅರಿಯರ್ಸ್ ಬಾಕಿ ಹಣ ಬಿಡುಗಡೆ ಮಾಡಿಲ್ಲ. 2024 ಜನವರಿಯಿಂದ ನೌಕರರಿಗೆ ಸಂಬಳ ಹೆಚ್ಚಳ ಮಾಡಬೇಕಿತ್ತು. ಆದರೆ ನವೆಂಬರ್ ತಿಂಗಳು ಬಂದರೂ ಇನ್ನೂ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿಲ್ಲ. ಅರಿಯರ್ಸ್ ಹಣವೇ 1750 ಕೋಟಿ ರುಪಾಯಿ ನೀಡಬೇಕಿದೆ. ಗ್ರಾಚ್ಯುಟಿ ಹಣ ಸುಮಾರು 399.29 ಕೋಟಿ ರುಪಾಯಿ ನೀಡಬೇಕಿದೆ. ಈ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ.
ಪ್ರಯಾಣಿಕರು ಹೇಳುವುದೇನು?
ಸಾರಿಗೆ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಯಾಣಿಕರು, ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಇಲ್ಲಾಂದರೆ ನಮ್ಮ ಜೀವನ ಕಷ್ಟ. ದಯವಿಟ್ಟು ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲಿ ಎಂದಿದ್ದಾರೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ, ಬಿಎಂಟಿಸಿ ಮುಷ್ಕರಕ್ಕೆ ಸಿದ್ಧತೆ: ಬೇಡಿಕೆ ಈಡೇರಿಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೌಕರರು
ಒಟ್ಟಿನಲ್ಲಿ ಎರಡು ಪ್ರಮುಖವಾದ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರು ಡಿಸೆಂಬರ್ನಲ್ಲಿ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರ ನಡೆಯುವುದು ಬಹತೇಕ ಖಚಿತವಾಗಿದೆ. ಆದರೆ ಸಿಎಂ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಾರಾ ಅಥವಾ ಮುಖಂಡರ ಜೊತೆಗೆ ಮಾತುಕತೆಗೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 am, Mon, 25 November 24