
ಬೆಂಗಳೂರು, ಸೆಪ್ಟೆಂಬರ್ 20: ಜಗತ್ತು ಹೆಚ್ಚಿನ ತಾಂತ್ರಿಕ ಪ್ರಗತಿ ಹೊಂದುತ್ತಿದ್ದಂತೆ ಅದನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇತ್ತೀಚಿಗಷ್ಟೆ ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಸೈಬರ್ ಅಪರಾಧದ ಜಾಲಕ್ಕೆ ಸಿಲುಕಿದ್ದರು. ಆರ್ಡರ್ ತಲುಪಿಸಲು ಒಂದು ಸಂಖ್ಯೆಗೆ ಕರೆ ಮಾಡಿ ಎಂದು ಹೇಳಿ ಅವರ ಫೋನ್ಗಳನ್ನು ಹ್ಯಾಕ್ ಮಾಡಲಾಗಿತ್ತು. ಅವರ ಸಂಬಂಧಿಕರಿಂದ UPI ಮೂಲಕ ಹಣ ಪಡೆದು ವಂಚಿಸಿದ್ದರು. ಈಗ ಹಿರಿಯ ಐಎಎಸ್ ಅಧಿಕಾರಿ ಮೇಜರ್ ಮಣಿವಣ್ಣನ್ಗೆ ಕೂಡ ಇದೇ ರೀತಿ ಸಂಕಷ್ಟ ಎದುರಾಗಿದೆ. ಅವರ ಹೆಸರಿನಲ್ಲಿ ಫೇಸ್ ಬುಕ್ ಖಾತೆಯನ್ನು ತೆಗೆದು, ಫರ್ನಿಚರ್ ಮಾರಾಟದ ಹೆಸರಿನಲ್ಲಿ ಅವರ ಆಪ್ತರನ್ನು ವಂಚಿಸಲಾಗಿದೆ.
ಬೆಂಗಳೂರಿನ ಹಿರಿಯ ಐಎಎಸ್ ಅಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ಗೆ ನಕಲಿ ಫೇಸ್ಬುಕ್ ಅಕೌಂಟ್ ಕಾಟ ಶುರುವಾಗಿದೆ. ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಸೈಬರ್ ವಂಚನೆ ಮಾಡಲಾಗುತ್ತಿದೆ. ಒಂದಲ್ಲ, ಎರಡಲ್ಲ ,ನಾಲ್ಕಕ್ಕೂ ಹೆಚ್ಚು ನಕಲಿ ಖಾತೆಯನ್ನು ಈ ವಂಚಕರು ತೆರೆದಿದ್ದಾರೆ. ಎಲ್ಲಾ ಖಾತೆಗಳಲ್ಲಿಯೂ ಮಣಿವಣ್ಣನ್ ಅವರ ಹೆಸರು, ಫೂಟೋ ಬಳಸಲಾಗಿದೆ. ಈ ಖಾತೆಗಳಿಂದ ಮಣಿವಣ್ಣನ್ ಹೆಸರಿನಲ್ಲಿ ಅವರ ಆಪ್ತರಿಗೆ , ಸ್ನೇಹಿತರಿಗೆ ಮೆಸೇಜ್ ಮಾಡುತ್ತಾರೆ. ನಮ್ಮ ಸ್ನೇಹಿತರು ಸಿ.ಆರ್.ಪಿ.ಎಫ್ ನಲ್ಲಿ ಕೆಲಸ ಮಾಡಯತ್ತಿದ್ದಾರೆ. ಅವರ ವರ್ಗಾವಣೆ ಆಗುತ್ತಿದೆ. ಹೀಗಾಗಿ ಅವರ ಮನೆಯ ಫರ್ನಿಚರ್ ಮಾರಾಟ ಮಾಡಬೇಕೆಂದಿದ್ದಾರೆ. ನಾನು ಒಮ್ಮೆ ನೋಡಿದ್ದೇನೆ. ನಿಮಗೆ ಬೇಕಾದರೆ ನೀವು ಖರೀದಿಸಬಹುದು ಎಂದು ತರಾವರಿ ಮಸೇಜ್ಗಳನ್ನು ಕಳುಹಿಸುತ್ತಾರೆ. ನಿಮ್ಮ ನಂಬರ್ ಕಳುಹಿಸಿ ನನ್ನ ಸ್ನೇಹಿತರೇ ನಿಮಗೆ ಕರೆ ಮಾಡುತ್ತಾರೆ ಎಂದು ನಂಬಿಸಿ ಇಲ್ಲಿಯ ವರೆಗೂ ಇಬ್ಬರು ವ್ಯಕ್ತಿಗಳಿಗೆ ಮೋಸ ಮಾಡಿದ್ದಾರೆ. ಈ ಕುರಿತು ಕೇಸ್ ದಾಖಲಿಸಿಕೊಂಡ ಸೈಬರ್ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ ಹ್ಯಾಕರ್ ಜಾಲಕ್ಕೆ ಸಿಲುಕಿ ಉಪೇಂದ್ರ ಪುತ್ರ ಆಯುಷ್ ಕಳೆದುಕೊಂಡ ಹಣ ಎಷ್ಟು?
ಇದು ಇತ್ತೀಚಿಗೆ ನಡೆದ ಘಟನೆಯಾದರೂ ಮಣಿವಣ್ಣನ್ ಇಂತದ್ದೇ ಸಮಸ್ಯೆ ಮುಂಚೆಯೂ ಎದುರಿಸಿದ್ದಾರೆ. ಕಳೆದ 9 ತಿಂಗಳಿನಲ್ಲಿ ಇದು 2 ನೇ ಪ್ರಕರಣವಾಗಿದ್ದು, ಮೊದಲನೇ ಪ್ರಕರಣ 9 ತಿಂಗಳ ಹಿಂದೆಯೇ ಪೊಲೀಸರ ಗಮನಕ್ಕೆ ಬಂದಿತ್ತು. 9 ತಿಂಗಳ ಹಿಂದೆಯೂ ಖದೀಮರು ಹೀಗೆಯೇ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದರು. ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿತ್ತು. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಯಾವ ಕ್ರಮವೂ ಆಗಿರಲಿಲ್ಲ. ಆಗ ಕೇಸ್ ಆಗುತ್ತಿದ್ದಂತೆ ಅಕೌಂಟ್ ಡಿಆ್ಯಕ್ಟಿವೇಟ್ ಮಾಡಿದ್ದ ವಂಚಕರು ಈಗ ಮತ್ತೆ ಅದೇ ಹಾದಿ ಹಿಡಿದಿದ್ದಾರೆ. ಆರೋಪಿಗಳ ಪತ್ತೆ ಮಾಡಿ ಅಕೌಂಟ್ ಡಿಆ್ಯಕ್ಟಿವೇಟ್ ಮಾಡುವಂತೆ ಪೊಲೀಸರಲ್ಲಿ ಮಣಿವಣ್ಣನ್ ಮನವಿಮಾಡಿಕೊಂಡಿದ್ದಾರೆ.
ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:18 am, Sat, 20 September 25