ತಾಯಿಯಂತೆ ಸಾಕಿ ಸಲಹಿದಾಕೆ ಮೇಲೆಯೇ ಅತ್ಯಾಚಾರ ಎಸಗಿ ಕೊಂದ 17 ವರ್ಷದ ಹುಡುಗ
ಅನಾಥನಾದ ಆತನನ್ನ ಆಕೆ ತಾಯಿಯಂತೆ ಸಾಕಿ ಸಲಹಿದ್ದಳು. ಅಕ್ಕರೆಯಿಂದ ಪ್ರೀತಿ ತೋರಿ ಜೋಪಾನ ಮಾಡಿದ್ಲು. ಅಮ್ಮನಿಲ್ಲದ ಕೊರಗು ನೀಗಿಸಿ ಶಾಲೆಗೂ ಕಳುಹಿಸುತ್ತಿದ್ದಳು. ಆದ್ರೆ, 17 ವರ್ಷದ ಬಾಲಕನ ಮನಸ್ಥಿತಿಯೇ ಬೇರೆಯಾಗಿತ್ತು. ಮಹಿಳೆ ಮಗನಂತೆ ನೋಡಿಕೊಂಡೆ ಇವನು ಆಕೆಯ ಮೇಲೆಯೇ ಅತ್ಯಾಚಾರ ಎಸಗಿ ಬಳಿಕ ಕೊಂದಿದ್ದಾನೆ. ಕೊಲೆಮಾಡಿ ಆಕೆಯ ಮೊಬೈಲ್ ಗೆ ತನ್ನ ಸಿಮ್ ಹಾಕಿಕೊಂಡು ಆರಾಮಾಗಿದ್ದವನನ್ನು ಕಡೆಗೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈತನ ಕಾಮುಕತೆ ಬೆಳಕಿಗೆ ಬಂದಿದೆ.

ಹಾಸನ, (ಸೆಪ್ಟೆಂಬರ್ 19): ಇದೇ ಸೆಪ್ಟೆಂಬರ್ 15ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆತೋಟದಲ್ಲಿ ಮಹಿಳೆಯೊಬ್ಬಳ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಸುಗೂಸಿನಲ್ಲೇ ಅಪ್ಪ ಅಮ್ಮನ ಕಳೆದುಕೊಂಡವನಿಗೆ ತಾಯಿಯಂತೆ ಪ್ರೀತಿ ತೋರಿ ಅಕ್ಕೆರೆಯಿಂದ ಆರೈಕೆ ಮಾಡಿದಾಕೆಯ ಮೇಲೆಯೇ 17ರ ಅಪ್ರಾಪ್ತ ಬಾಲಕ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಒಂಬತ್ತು ತಿಂಗಳು ಒಡಲಲ್ಲಿ ಎನ್ನುವುದು ಬಿಟ್ಟರೆ ಪಾಪಿಗೆ ತಾಯಿಯ ಎಲ್ಲಾ ಪ್ರೀತಿ ವಾತ್ಸಲ್ಯ ನೀಡಿದ್ದಳು. ಆದ್ರೆ, ಅವನು ಮಾತ್ರ ಮಗನಂತೆ ಇರದೇ ಕಾಮುಕನಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಸೆ.15ರಂದು ಕೂಲಿ ಕೆಲಸಕ್ಕೆ ಹೊಗಿದ್ದ 45 ವರ್ಷದ ಮಹಿಳೆ ಸಂಜೆಯಾದರೂ ಮನೆಗೆ ಬಂದಿಲ್ಲ. ಏನಾಯ್ತು ಎಂದು ಕರೆಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು. ಗ್ರಾಮಸ್ಥರು ಆತಂಕದಲ್ಲೇ ಇರುವಾಗ ಮರುದಿನ ಪಕ್ಕದೂರಿನ ಬಾಳೆ ತೋಟದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೈ ಮೇಲೆ ಗಾಯದ ಗುರುತು ಇದ್ದಿದ್ದರಿಂದ ಸಹಜವಾಗಿಯೇ ಅನುಮಾನ ಮೂಡಿದ್ದು ಜಾವಗಲ್ ಪೊಲೀಸರು ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ವ್ಯಕ್ತಿಯೊಬ್ಬರು, ಮಹಿಳೆ ಹಾಗೂ ಆಕೆ ಮಗನಂತೆ ಸಾಕಿದ್ದ ಅಪ್ರಾಪ್ತ ಬಾಲಕ ಜಗಳವಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಇದೇ ಸುಳಿವು ಆದರಿಸಿ ಪೊಲೀಸರು ತನಿಖೆ ನಡೆಸಿದಾಗ ಅಪ್ಪ ಅಮ್ಮನಿಲ್ಲದ ಆ ಪಾಪಿಗೆ ತಾಯಿಯಂತೆ ಸಾಕಿ ಸಲಹಿ, ಕೈತುತ್ತುನೀಡಿ ಪ್ರೀತಿ ಮಾಡಿದ್ದ ಅಮ್ಮನಂತೆ ಜೋಪಾನ ಮಾಡುತ್ತಿದ್ದ ಮಹಿಳೆ ಮೇಲೆಯೇ ಅತ್ಯಾಚಾರ ಎಸಗಿ ಕೊಲೆಮಾಡಿರೋದು ಬಯಲಾಗಿದೆ.
ಇದನ್ನೂ ಓದಿ: ತನ್ನ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಯಿತೆಂದು ಪ್ರಾಣ ಕಳೆದುಕೊಂಡ ಕಾಲೇಜು ವಿದ್ಯಾರ್ಥಿ
17 ವರ್ಷಗಳ ಹಿಂದೆ ತಮ್ಮ ಪಕ್ಕದೂರಿನ ವ್ಯಕ್ತಿಯೊಬ್ಬರು ಅನಾಥ ಮಗುವನ್ನ ತಂದು ಸಾಕೋಕೆ ಶುರುಮಾಡಿದಾಗ ಅವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದ ಮೃತ ಮಹಿಳೆ ತನ್ನ ಮಗನಂತೆ ಆತನಿಗೂ ಪ್ರೀತಿ ತೋರಿಸುತ್ತಿದ್ದರು. ಅಮ್ಮನಿಲ್ಲ ಎನ್ನೋ ಕೊರಗು ಬಾರದಂತೆ ತಾನೇ ತಾಯಿಯಾಗಿ ಅಕ್ಕರೆ ತೋರಿದ್ದಳು. ಶಾಲೆಗೆ ಕಳಿಸೋದು, ಕೈತುತ್ತು ನೀಡೋದು ಎಲ್ಲವನ್ನು ಮಾಡಿ ಅಮ್ಮನಾಗಿದ್ದಳು. ಆದ್ರೆ ಆಕೆ ಬಗ್ಗೆ ಈ ಪಾಪಿಗೆ ಅದೇನು ಸಿಟ್ಟಿತ್ತೋ ಏನೋ ಸೆ. 15ರಂದು ಏಕಾಂಗಿಯಾಗಿ ಸಿಕ್ಕ ಆಕೆಯನ್ನ ಹುಡಿದು ಮುಕ್ಕಿದ್ದಾನೆ. ಚೀರಾಡಿದ್ರು ಬಿಡದೆ, ಪೈಶಾಚಿಕ ಕೃತ್ಯ ಎಸಗಿ ನೀಚತನ ಪ್ರದರ್ಶನ ಮಾಡಿದ್ದಾನೆ.
ಈ ಕೃತ್ಯವನ್ನ ಅವನೊಬ್ಬನೇ ಮಾಡಿಲ್ಲ ಅವನಿಗೆ ಯಾರೋ ಸಹಾಯ ಮಾಡಿದ್ದಾರೆ ತನಿಖೆಯಾಗಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ. ಕೂಲಿ ಮಾಡುತ್ತಿದ್ದರೂ ಕೂಡ ಸ್ವಾಭಿಮಾನದ ಜೀವನ ನಡೆಸುತ್ತಿದ್ದಳು. ಗಂಡನಿಲ್ಲದಿದ್ದರೂ ಗಂಡಸಿನಂತೆ ಹೋರಾಟ ಮಾಡುತ್ತಾ ಮಗನಿಗೆ ಒಂದು ಮನೆ ಕಟ್ಟಬೇಕು ಎನ್ನುವ ದೊಡ್ಡ ಕನಸು ಕಂಡಿದ್ದಳು.ಆದ್ರ, ಅವನಿಂದಲೇ ಹೀಗೆ ಭೀಕರವಾಗಿ ಕೊಲೆಯಾಗಿದ್ದಾಳೆ.
ಒಟ್ಟಿನಲ್ಲಿ ಅಪ್ರಾಪ್ತನ ಕೃತ್ಯ ಊರಿಗೆ ಊರನ್ನೆ ಬೆಚ್ಚಿಬೀಳಿಸಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಗ್ರಾಮಾಸ್ಥರ ಆಗ್ರಹವಾಗಿದೆ.



