ಮೈಸೂರು: ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಅರಣ್ಯ ವೀಕ್ಷಕ ಮೈಸೂರಿನ (Mysore) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಚೇತನ್ (23) ಮೃತ ವ್ಯಕ್ತಿ. ಹುಣಸೂರು ತಾಲೂಕಿನ ಯಶೋಧರಪುರ ಗ್ರಾಮದಲ್ಲಿ ಕಾರೊಂದು ವೀಕ್ಷಕ ಚೇತನ್ಗೆ ಡಿಕ್ಕಿ ಹೊಡೆದು ಬಳಿಕ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಯಶೋಧರಪುರದಲ್ಲಿ ಕಾರು ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದೆ. ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದೇವಸ್ಥಾನದ ಮುಂಭಾಗದ ಕಲ್ಲಿನ ಕಂಬ ಬಿದ್ದು ವ್ಯಕ್ತಿ ಸಾವು
ಯಾದಗಿರಿ: ದೇವಸ್ಥಾನದ ಮುಂಭಾಗದ ಕಲ್ಲಿನ ಕಂಬ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಉಳ್ಳೇಸುಗೂರು ಗ್ರಾಮದಲ್ಲಿ ನಡೆದಿದೆ. ಉಳ್ಳೇಸುಗೂರು ಗ್ರಾಮದಲ್ಲಿ ದೇವಪ್ಪ(40) ಮೃತ ದುರ್ದೈವಿ.
ಶ್ರಾವಣ ಮಾಸ ಹಿನ್ನೆಲೆ ಪ್ರತಿ ದಿನ ಗ್ರಾಮದ ಆಂಜನೇಯ ದೇಗುಲದ ಮುಂದೆ ಭಜನೆ ಮಾಡುತ್ತಿದ್ದರು. ಎಂದಿನಂತೆ ಇಂದು ಕೂಡ ಬಜನೆ ಮಾಡುವಾಗ ದೇವಪ್ಪ ಮೈಮೇಲೆ ಕಲ್ಲಿನ ಕಂಬ ಬಿದ್ದಿದೆ. ಪರಿಣಾಮ ದೇವಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಹಾವೇರಿ: ಬೈಕ್ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೊಂಡೋಜಿ ಕ್ರಾಸ್ ಬಳಿ ನಡೆದಿದೆ. ಕೆಂಚಪ್ಪ ದೊಡ್ಡಮಾಸ್ತಿ (50) ಮೃತ ಬೈಕ್ ಸವಾರ. ಅಪಘಾತದ ನಂತರ ಕಾರು ರಸ್ತೆ ಪಕ್ಕದ ಅರಣ್ಯ ಪ್ರದೇಶಕ್ಕೆ ಹೋಗಿ ನಿಂತಿದೆ. ಸ್ಥಳದಲ್ಲೇ ಕಾರು ಬಿಟ್ಟು ಕಾರು ಚಾಲಕ ಪರಾರಿಯಾಗಿದ್ದಾನೆ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ಯಾಸ್ ಸೋರಿಕೆಯಿಂದ ಹೊತ್ತಿ ಉರಿದ ಓಮ್ನಿ ವ್ಯಾನ್
ಬೆಳಗಾವಿ: ಗ್ಯಾಸ್ ಲೀಕೇಜ್ ನಿಂದ ಒಮಿನಿ ಕಾರ್ ಹೊತ್ತಿ ಉರಿದ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಶಿವಾಜಿ ಸರ್ಕಲ್ನಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಶಿವಾಜಿ ವೃತ್ತದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಸಂಬಂಧ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿರುಗಾಳಿ ಸಹಿತ ಮಳೆಗೆ ಕಾರು ಪಲ್ಟಿ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಲ್ಟಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.