ಪ್ರಧಾನಿ ಮೋದಿ ಅನುಮೋದಿಸಿದ ಸಂಸ್ಥೆ ಎಂದು ನಂಬಿಸಿ ಬೆಂಗಳೂರಿನ ಉದ್ಯಮಿಗೆ ಆರು ಲಕ್ಷ ವಂಚನೆ
ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದಿಸಿರುವ ಸಂಸ್ಥೆ ನಮ್ಮದು ಎಂದು ನಂಬಿಸಿ ವ್ಯಕ್ತಿಯೊಬ್ಬ ಬೆಂಗಳೂರಿನ ಉದ್ಯಮಿಗೆ ಆರು ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಜನವರಿ 27 ರಂದು ವಂಚನೆಗೊಳಗಾದ ಜಿ ಹರೀಶ್ ಕಶ್ಯಪ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೆಂಗಳೂರು, ಜ.30: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅನುಮೋದಿಸಿರುವ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿ ವ್ಯಕ್ತಿಯೊಬ್ಬ ಬೆಂಗಳೂರಿನ (Bengaluru) ಉದ್ಯಮಿಯೊಬ್ಬರಿಗೆ 6.28 ಲಕ್ಷ ರೂಪಾಯಿ ವಂಚಿಸಿದ್ದಾರೆ. ಜನವರಿ 27 ರಂದು ವಂಚನೆ ಪ್ರಕರಣ ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಸಂತ್ರಸ್ತರನ್ನು ಚಿಕ್ಕಲಸಂದ್ರ ನಿವಾಸಿ ಜಿ ಹರೀಶ್ ಕಶ್ಯಪ್ (44) ಎಂದು ಗುರುತಿಸಲಾಗಿದೆ. ದತ್ತ ಪ್ರಸಾದ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ 2023ರ ಅಕ್ಟೋಬರ್ 25 ರಂದು ಪದ್ಮನಾಭ ನಗರದ ಗೋಕುಲ್ ವೆಜ್ ಹೋಟೆಲ್‌ಗೆ ಕಶ್ಯಪ್ ಮತ್ತು ಇತರ ಹಲವರನ್ನು ಆಹ್ವಾನಿಸಿದ್ದಾನೆ.
ಹೊಸ ಇಂಧನ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸೆನೀ ಟ್ರೇಡರ್ಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ತಾನು ನಡೆಸುತ್ತಿದ್ದೇನೆ ಎಂದು ಪ್ರಸಾದ್ ಹೇಳಿಕೊಂಡಿದ್ದಾನೆ. ನಂತರ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಜನರಿಗೆ ಮನವಿ ಮಾಡಿದ್ದಾನೆ.
ಇದನ್ನೂ ಓದಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ಪಡೆದು ಕಾಂಗ್ರೆಸ್ ಯುವ ನಾಯಕಿಯಿಂದ ವಂಚನೆ ಆರೋಪ
ನಂತರ ಕಶ್ಯಪ್ ಸೇರಿದಂತೆ ಹಲವರು ಪ್ರಸಾದ್ ಸೂಚಿಸಿದ ಖಾತೆಗಳಿಗೆ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿದ್ದಾರೆ. ಕೆಲವು ದಿನಗಳ ನಂತರ, ಹೂಡಿಕೆಗಳು ಹೆಚ್ಚಿನ ಆದಾಯವನ್ನು ತಂದುಕೊಟ್ಟವು. ಆದರೆ ಮೊತ್ತವನ್ನು ಹಿಂದಿರುಗಿಸದೆ ಪ್ರಸಾದ್ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಗಿ ಸುದ್ದಿಸಂಸ್ಥೆ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕಶ್ಯಪ್ ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66ಡಿ (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವ್ಯಕ್ತಿಗತವಾಗಿ ವಂಚನೆ) ಮತ್ತು 66ಸಿ (ಗುರುತಿನ ಕಳ್ಳತನ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಯನ್ನು ಪ್ರೇರೇಪಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ