ಗದಗ: ಅಪ್ರಾಪ್ತೆಯೋರ್ವಳನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿ, ಜೀವ ಬೆದರಿಕೆ ಹಾಕಿದ್ದ ಆರೋಪ ಸಾಬೀತಾದ ಹಿನ್ನೆಲೆ ಗದಗ (Gadag) ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಜೊತೆಗೆ 50 ಸಾವಿರ ರೂಪಾಯಿ ದಂಡ ಕಟ್ಟುವಂತೆಯೂ ಆದೇಶಿಸಿದೆ.
ಪ್ರಕರಣದ ಅಪರಾಧಿಯಾಗಿರುವ ಸವದತ್ತಿ ತಾಲೂಕಿನ ತೆರದಕೊಪ್ಪ ಗ್ರಾಮದ ಮೌಲಾಸಾಬ ಇಮಾಮಸಾಬ ದೊಡ್ಡಮನಿ ಅಪ್ರಾಪ್ತ ಬಾಲಕಿಗೆ ಪ್ರಾಣ ಬೆದರಿಕೆ ಹಾಕಿ ಒತ್ತಾಯಪೂರ್ವಕವಾಗಿ ಸವದತ್ತಿ ತಾಲೂಕಿನ ಮುನವಳ್ಳಿಗೆ ಕರೆದುಕೊಂಡು ಹೋಗಿ, ಅಲ್ಲಿಂದ ಬೈಕ್‌ನಲ್ಲಿ ಹತ್ತಿಸಿಕೊಂಡು ನರಗುಂದ-ಮುನವಳ್ಳಿ ರಸ್ತೆಯ ಸಿಂದೋಗಿ ಕ್ರಾಸ್ ಬಳಿಯ ಮನೆಗೆ ಕರೆದುಕೊಂಡು ಹೋಗಿದ್ದ. ನಂತರ ಅವಳನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಯಾರಿಗಾರದೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಇದನ್ನೂ ಓದಿ: ಮಂಗಳೂರು: ಅಪ್ರಾಪ್ತ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಅಪರಾಧ 152/2018, ಕಲಂ 376(ಎಬಿ) ಐಪಿಸಿ ಕಲಂ 5(ಎಚ್) ಪೋಕ್ಸೋ ಕಾಯ್ದೆ 2012 ಪ್ರಕಾರ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಶ್ರೀನಿವಾಸ ಸಿ ಮೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 2018ರ ಜುಲೈ 27 ರಂದು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸದ್ಯ ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಕಲಂ 366ರ ಅಡಿ 5 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, ಕಲಂ 506ರ ಅಡಿ 3 ವರ್ಷ ಜೈಲುಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ, ಕಲಂ 376 (ಎಬಿ) ರೆ/ವಿ ಕಲಂ 5 (ಎಚ್)(ಎಂ), ಪೋಕ್ಸೋ ಕಾಯ್ದೆಯಡಿ 25 ವರ್ಷ ಜೈಲು ಹಾಗೂ 50 ಸಾವಿರ ರೂ ದಂಡ ಕಟ್ಟಲು ಆದೇಶ ನೀಡಲಾಗಿದೆ.
ಒಂದು ವೇಳೆ ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಎರಡು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿಯವರು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ಅವರು ವಾದ ಮಂಡಿಸಿದ್ದರು.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ