ಲಕ್ನೋ: ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ (Gayatri Prajapati) ಹಾಗೂ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಉತ್ತರಪ್ರದೇಶದ ಸಮಾಜವಾದಿ ಪಕ್ಷದ (Samajwadi Party) ಮುಖಂಡ ಹಾಗೂ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಸೇರಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ (Life Sentence) ಹಾಗೂ ತಲಾ 2 ಲಕ್ಷ ರೂ. ದಂಡ ವಿಧಿಸಲಾಗಿದೆ. ಲಕ್ನೋ ವಿಶೇಷ ಕೋರ್ಟ್‌ನಿಂದ ಗಾಯತ್ರಿ ಪ್ರಜಾಪತಿ ಅವರಿಗೆ ಜೈಲು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ. ನಿನ್ನೆ ಮೂವರು ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿದ್ದ ಕೋರ್ಟ್ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಚಿತ್ರಕೂಟದ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಮಗಳ ಮೇಲೂ ಅತ್ಯಾಚಾರ (Gang Rape) ನಡೆಸಲು ಯತ್ನಿಸಿದ್ದರಿಂದ 2017ರಲ್ಲಿ ಗಾಯತ್ರಿ ಪ್ರಜಾಪತಿಯನ್ನು ಬಂಧಿಸಲಾಗಿತ್ತು.
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಮತ್ತು ಇತರ ಇಬ್ಬರಿಗೆ ಲಕ್ನೋದ ವಿಶೇಷ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಅಖಿಲೇಶ್ ಯಾದವ್ ಅವರ ಕ್ಯಾಬಿನೆಟ್‌ನ ಪ್ರಮುಖ ಸದಸ್ಯ, ಸಾರಿಗೆ ಮತ್ತು ಗಣಿಗಾರಿಕೆ ಸಚಿವಾಲಯಗಳ ಖಾತೆಗಳನ್ನು ಹೊಂದಿದ್ದ ಪ್ರಜಾಪತಿಯನ್ನು ಮಾರ್ಚ್ 2017ರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಮತ್ತು ಆಕೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಸಚಿವರ ವಿರುದ್ಧ ಎಫ್‌ಐಆರ್ ಅನ್ನು ಗೌತಂಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. 2017ರ ಫೆಬ್ರವರಿ 18ರಂದು ಎಫ್‌ಐಆರ್ ದಾಖಲಾದ ನಂತರ, ಸಚಿವರನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಅವರು ಅಂದಿನಿಂದ ಜೈಲಿನಲ್ಲಿದ್ದರು.
ಅಕ್ಟೋಬರ್ 2014ರಿಂದ ಸಚಿವರು ಮತ್ತು ಅವರ ಸಹಚರರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದರು. ಆರೋಪಿಗಳು ಜುಲೈ 2016ರಲ್ಲಿ ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ನಂತರ ಅವರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದರು. ಗಾಯತ್ರಿ ಪ್ರಜಾಪತಿ ಜೊತೆಗೆ ಆಶಿಶ್ ಶುಕ್ಲಾ ಮತ್ತು ಅಶೋಕ್ ತಿವಾರಿ ಕೂಡ ಶಿಕ್ಷೆಗೆ ಗುರಿಯಾಗಿದ್ದಾರೆ. ಶುಕ್ಲಾ ಅವರು ಅಮೇಥಿಯಲ್ಲಿ ಮಾಜಿ ಕಂದಾಯ ಗುಮಾಸ್ತರಾಗಿದ್ದರೆ, ತಿವಾರಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಗನ ಅಪ್ರಾಪ್ತ ಪ್ರಿಯತಮೆಯ ಮೇಲೆ ತಂದೆ ಅತ್ಯಾಚಾರ! ಸಂತ್ರಸ್ತೆ ತಾಯಿಯಿಂದ ದೂರು ದಾಖಲು
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್