ಹಾಸನ, ಫೆ.02: ಹಾಸನ ಹೊರವಲಯದ ಬುಸ್ತೇನಹಳ್ಳಿ ಗ್ರಾಮದ ನಿರ್ಜನ ಪ್ರದೇಶವಾದ ಹಾಸನ-ಬೆಂಗಳೂರು (Hassan-Bengaluru) ರೈಲ್ವೆ ಟ್ರ್ಯಾಕ್ ಬಳಿ ಅಂದಾಜು 40 ವರ್ಷ ಪ್ರಾಯದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೇಲ್ನೋಟಕ್ಕೆ ಮೃತ ವ್ಯಕ್ತಿ ಕೂಲಿ ಕಾರ್ಮಿಕ ಅಥವಾ ಕುರಿಗಾಹಿ ಎಂದು ಶಂಕಿಸಲಾಗಿದ್ದು, ಎರಡು ದಿನಗಳ ಹಿಂದೆ ಆತನನ್ನು ರಾತ್ರಿ ವೇಳೆಯಲ್ಲಿ ಜೊತೆಗೆ ಕರೆತಂದಿರುವ ಹಂತಕರು, ಮೃತದೇಹ ಪತ್ತೆಯಾಗಿರುವ ಸ್ಥಳದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಹುಶಃ ಮೃತ ವ್ಯಕ್ತಿಗೆ ಕಂಠಪೂರ್ತಿ ಕುಡಿಸಿ ಅಮಲಿನಲ್ಲಿದ್ದವನ ಮೇಲೆ ಬಾಟಲ್ನಿಂದ ಹಲ್ಲೆ ಮಾಡಿ, ಬಳಿಕ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.
ಎರಡು ದಿನಗಳ ಬಳಿಕ ಅಂದರೆ ಇಂದು ಸ್ಥಳೀಯರು ಜಮೀನಿನ ಬಳಿ ಬಂದಾಗ ಮೃತದೇಹ ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಹಾಸನ ಬಡಾವಣೆ ಠಾಣೆ ಪೊಲೀಸರು ಪರೀಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಹಾಸನದ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಜೊತೆಗೆ ಬಂದವರು ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡು ಬಳಿಕ ಹತ್ಯೆ ನಡೆದಿರಬಹುದು ಅಥವಾ ಕೊಲೆಮಾಡಲೆಂದೇ ಕರೆತಂದು ಕಂಠಪೂರ್ತಿ ಕುಡಿಸಿ ಬಳಿಕ ಹತ್ಯೆ ಮಾಡಿರಬಹುದು. ಹೀಗೆ ಹಲವು ಅನುಮಾನಗಳ ಬೆನ್ನೇರಿ ಪೊಲೀಸರು ತನಿಖೆ ಕೈಗೊಂಡಿದ್ದು, ಮೊದಲು ಕೊಲೆಯಾದ ವ್ಯಕ್ತಿ ಯಾರು ಎನ್ನುವ ಗುರುತಿಗಾಗಿ ಪತ್ತೆಗಿಳಿದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತೆ ಬಡಾವಣೆಯೊಂದು ಸಿದ್ದಗೊಂಡಿದ್ದು, ರಾತ್ರಿಯಾದರೆ ನಿರ್ಜನ ಪ್ರದೇಶವಾಗುವ ಈ ಸ್ಥಳದಲ್ಲಿ ಪುಂಡರ ಅಟ್ಟಹಾಸ ಇರುತ್ತದೆ. ಕತ್ತಲಾಗುತ್ತಲೆ ಹತ್ತಾರು ಜನರು ಮದ್ಯದ ಬಾಟಲ್ನೊಂದಿಗೆ ಇಲ್ಲಿಗೆ ಬರುತ್ತಾರೆ. ಹೇಳಿ ಕೇಳಿ ರೈಲ್ವೆ ಹಳಿಗಳ ಪ್ರದೇಶ, ಯಾರೂ ಈ ಕಡೆ ಬರುವುದಿಲ್ಲ ಎಂದು ಕುಡುಕರು, ಗಾಂಜಾ ಹೊಡೆಯೋರು ಎಲ್ಲರೂ ಇತ್ತಕಡೆ ಬರುತ್ತಾರೆ. ಹಾಗಾಗಿಯೇ ಈ ಕೊಲೆ ನಡೆದಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಹೀಗೆ ಆದ್ರೆ, ಹೊಲ ಗದ್ದೆಗಳ ಬಳಿಗೆ ಸ್ಥಳೀಯರು ಬರೋದು ಹೇಗೆ ಎಂಬ ಪ್ರಶ್ನೆ ಸ್ಥಳೀಯರು ಮಾಡಿದ್ದಾರೆ.
ಸದ್ಯ ನಡೆದಿರುವ ಕೊಲೆ ಪ್ರಕರಣವನ್ನು ಪೊಲೀಸರು ಆದಷ್ಟು ಬೇಗನೆ ಪತ್ತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಮೃತ ವ್ಯಕ್ತಿಯ ಬಲಗೈ ಮೇಲೆ ಲಕ್ಷ್ಮಿ ಎಂಬ ಹೆಸರಿನ ಹಚ್ಚೆ ಇದ್ದು, ಘಟನಾ ಸ್ಥಳದಲ್ಲಿ ಎಣ್ಣೆ ಸೇವಿಸಿದ ಪ್ಲಾಸ್ಟಿಕ್ ಗ್ಲಾಸ್ ಗಳು, ಒಡೆದು ಹೋದ ಬಿಯರ್ ಬಾಟಲ್ ಪತ್ತೆಯಾಗಿದ್ದು, ಸ್ಥಳದಲ್ಲಿ ಎಣ್ಣೆ ಪಾರ್ಟಿ ಮಾಡಿದ ಬಳಿಕ ಕೊಲೆ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಮೃತ ವ್ಯಕ್ತಿಯ ಜೊತೆಗೆ ಬಂದ ಪರಿಚಿತರೇ ಯಾರೋ ಕೊಲೆ ಮಾಡಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಕೂಡ ಸ್ಥಳೀಯನಲ್ಲದ ವ್ಯಕ್ತಿಯನ್ನ ಇಲ್ಲಿಗೆ ಕರೆತಂದು ಹತ್ಯೆಮಾಡಿದ್ದಾರಾ, ಅಥವಾ ಎಣ್ಣೆ ಪಾರ್ಟಿ ವೇಳೆ ನಡೆದ ಕಲಹದಲ್ಲಿ ನಡೆದ ಗಲಾಟೆಯಲ್ಲಿ ಕೊಲೆ ನಡೆದು ಹೋಯ್ತಾ? ಹೀಗೆ ಹಲವು ಅನುಮಾನಗಳು ಎದುರಾಗಿದ್ದು ಆರೋಪಿಗಳ ಬಂಧನದ ಬಳಿಕ ಸತ್ಯ ತಿಳಿಯಲಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕಿಕ್ಲ್ ಮಾಡಿ