ಕೊಲೆ ಆರೋಪಿಯ ಪತ್ತೆಗೆ ಆತನ ಚಪ್ಪಲಿ ಡಿಸೈನ್ ಕಾರಣವಾಯ್ತು! ಸೈ ಎನಿಸಿಕೊಂಡ ಹೆಣ್ಣೂರು ಪೊಲೀಸರು
ಘಟನಾ ಸ್ಥಳದಲ್ಲಿ ಮೃತ ವ್ಯಕ್ತಿಯ ರಕ್ತ ತುಳಿದು ಓಡಾಡಿರುವ ಚಪ್ಪಲಿ ಹೆಜ್ಜೆ ಗುರುತು ಪತ್ತೆಯಾಗಿತ್ತು. ಮುಂದೆ ತನಿಖೆ ನಡೆಸುವುದು ಹೇಗೆಂದು ಪೊಲೀಸರು ಯೋಚಿಸುತ್ತಿದ್ದರು. ಸ್ವಲ್ಪ ತಲೆಬಿಸಿ ಮಾಡಿಕೊಂಡಿದ್ದರು.
ಬೆಂಗಳೂರು: ಮಲಗುವ ಜಾಗಕ್ಕೆ ಚಿಂದಿ ಆಯುವವರ ನಡುವೆ ನಡೆದ ಜಗಳ ಓರ್ವನ ಕೊಲೆಯೊಂದಿಗೆ ಅಂತ್ಯಗೊಂಡಿತ್ತು. ಆದರೆ ಕೊಲೆಯ ಮೂಲ ಹುಡುಕಿ ಅಪರಾಧಿಯ ಹುಡುಕಾಟಕ್ಕೆ ಹೊರಟ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೂ ಮೃತ ವ್ಯಕ್ತಿಯ ರಕ್ತ ತುಳಿದು ಓಡಾಡಿದ್ದ ಆರೋಪಿ ಚಪ್ಪಲಿಯ ಹೆಜ್ಜೆ ಗುರುತಿನ ಆಧಾರದ ಮೇಲೇ ಆತ ಸಿಕ್ಕಿಬಿದ್ದಿದ್ದಾನೆ. ಇಂತಹ ಕುತೂಹಲಕಾರಿ ಪ್ರಕರಣವನ್ನು ಪತ್ತೆಹಚ್ಚಿ ಹೆಣ್ಣೂರು ಪೊಲೀಸ್ ಠಾಣೆಯ ಪೊಲೀಸರು ಸೈ ಎನಿಸಿಕೊಂಡಿದ್ದಾರೆ.
ಕಲಬುರ್ಗಿ ಮೂಲದ ಅಶೋಕ ಬಾಬುಸಾಬ್, ಪಾಳ್ಯದ ಬಿಡಿಎ ಪಾರ್ಕ್ನಲ್ಲಿ ಮಲಗುತ್ತಿದ್ದ. ಆರೋಪಿ ಸತೀಶ್ ಸಹ ಇದೇ ಪಾರ್ಕ್ನಲ್ಲಿ ಮಲಗುತ್ತಿದ್ದ. ಮೇ 15 ರಂದು ಮಲಗುವ ಜಾಗಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದು ಹೊಡೆದಾಟವೂ ಆಗಿತ್ತು. ಗಲಾಟೆ ವೇಳೆ ಅಶೋಕ್ ತಲೆಗೆ ಮಚ್ಚಿನಿಂದ 12 ಬಾರಿ ಕೊಚ್ಚಿ ಕೊಲೆ ಮಾಡಿದ್ದ ಸತೀಶ್ ನಂತರ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹೆಣ್ಣೂರು ಪೊಲೀಸರು ಆರೋಪಿಯ ಪತ್ತೆಗೆ ಶೋಧ ನಡೆಸಿದ್ದರು.
ಪೊಲೀಸರ ತನಿಖೆ ವೇಳೆ ಮೃತ ಅಶೋಕ್ ಹಾಗೂ ಆರೋಪಿ ಸತೀಶ್ ಇಬ್ಬರು ಚಿಂದಿ ಆಯುವವರು. ಇಬ್ಬರು ಸಹ ಮೊಬೈಲ್ ಪೋನ್ ಬಳಕೆ ಮಾಡುತ್ತಿರಲಿಲ್ಲ ಎಂಬುದು ಬೆಳಕಿಗೆ ಬಂದಿತ್ತು. ಅಲ್ಲದೇ, ಕೊಲೆಯಾದ ಸ್ಥಳದಲ್ಲಿ ಖಾಕಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಘಟನಾ ಸ್ಥಳದಲ್ಲಿ ಮೃತ ವ್ಯಕ್ತಿಯ ರಕ್ತ ತುಳಿದು ಓಡಾಡಿರುವ ಚಪ್ಪಲಿ ಹೆಜ್ಜೆ ಗುರುತು ಪತ್ತೆಯಾಗಿತ್ತು. ಮುಂದೆ ತನಿಖೆ ನಡೆಸುವುದು ಹೇಗೆಂದು ಪೊಲೀಸರು ಯೋಚಿಸುತ್ತಿದ್ದರು. ಸ್ವಲ್ಪ ತಲೆಬಿಸಿ ಮಾಡಿಕೊಂಡಿದ್ದರು.
ಇದೇ ವೇಳೆ, ಪೊಲೀಸರಿಗೆ ಹೆಜ್ಜೆ ಗುರುತಿನ ಆಧಾರದ ಮೇಲೆ ತನಿಖೆ ಮುಂದುವರೆಸಿದರೆ ಹೇಗೆ ಎಂದು ನಿರ್ಧರಿಸಿ ಅದೇ ದಾರಿಯಲ್ಲಿ ಕಾರ್ಯೋನ್ಮುಖರಾದರು. ಪಾರ್ಕ್ನಲ್ಲಿ ಮಲಗಲು ಬರುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿದರು. ಪಾರ್ಕ್ಗೆ ಮಲಗಲು ಬರುವವವರ ಚಪ್ಪಲಿಯನ್ನು ನೀರಿನಲ್ಲಿ ತೊಳೆದು ಮರಳಿನ ಮೇಲೆ ಹೆಜ್ಜೆ ಇರಿಸಿ ಗುರುತುಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ಹೀಗೆ ಸುಮಾರು 50 ಮಂದಿಯ ಹೆಜ್ಜೆ ಗುರುತನ್ನು ಪರಿಶೀಲಿಸಿದರು. ಸತೀಶ್ನ ಚಪ್ಪಲಿ ಡಿಸೈನ್ಗೂ ಮೃತ ವ್ಯಕ್ತಿಯ ರಕ್ತ ತುಳಿದು ಓಡಾಡಿದ ಚಪ್ಪಲಿ ಡಿಸೈನ್ಗೂ ಹೋಲಿಕೆಯಾಗಿ ಕೊಲೆಯಾದ ಸ್ಥಳದಲ್ಲಿ ಇದ್ದ ಹೆಜ್ಜೆ ಸತೀಶ್ ಎಂಬಾತನದೇ ಎಂದು ದೃಢಪಟ್ಟಿತು. ನಂತರ ಸತೀಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿತು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ
ಜನಸ್ನೇಹಿ ಆಡಳಿತ ನೀಡುವುದು ನನ್ನ ಉದ್ದೇಶ: ಮೈಸೂರು ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್
(Hennur Police arrest murder accused by his slippers design in Bengaluru)