ಕಳೆದ ವಾರವಷ್ಟೇ ತಾಯಿಯೊಬ್ಬಳು ತನ್ನ ಎರಡು ಪುಟ್ಟ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿತ್ತು. ಇದಾದ ಸರಿಯಾಗಿ ಒಂದು ವಾರಕ್ಕೆ ಮತ್ತೊಂದು ಆಘಾತಕಾರಿ ಘಟನೆಗೆ ವಿದ್ಯಾಕಾಶಿ ಧಾರವಾಡ ಸಾಕ್ಷಿಯಾಗಿದೆ. ಆದರೆ ಈ ಸಲ ಕೊಲೆಯಾಗಿದ್ದು ತಾಯಿಯಾಗಿದ್ದರೆ, ತಾಯಿಯನ್ನೇ ಕೊಂದ ಕ್ರೂರ ಮಗರಾಯನೂ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ನಡೆದಿದ್ದು ತಾಯಿಯ ಬಳಿಯಿದ್ದ ಹಣ ಹಾಗೂ ಜಾಗಕ್ಕೋಸ್ಕರ. ಮನೆಯ ಮುಂದೆ ಪೊಲೀಸ್ ಅಧಿಕಾರಗಳ ಓಡಾಟ; ಮನೆಯ ಮುಂದು ಉರುಳಾಡಿ ಅಳುತ್ತಿರೋ ಮಹಿಳೆಯರು; ಅವರನ್ನು ಸಂತೈಸುತ್ತಿರೋ ಹಿರಿಯರು; ಪುಟ್ಟಮಕ್ಕಳ ದುಃಖಕ್ಕೆ ಹೆಗಲಾದ ಮಹಿಳೆಯರು – ಇಂಥ ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದು ಧಾರವಾಡ ನಗರದ (Dharwad) ಕೋಳಿಕೇರಿ ಬಡಾವಣೆಯ ಉಡುಪಿ ಓಣಿ. ಅಂದಹಾಗೆ ಇಲ್ಲಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರೋ (Murder) ಈಕೆಯ ಹೆಸರು ಶಾರದಾ ಭಜಂತ್ರಿ, ವಯಸ್ಸು 60 ವರ್ಷ. ಆಕೆಯ ಶವದ ಪಕ್ಕದಲ್ಲಿಯೇ ನೇಣಿಗೆ ಶರಣಾದವನು (Suicide) ಆಕೆಯ ಹಿರಿಯ ಮಗ ರಾಜೇಶ ಭಜಂತ್ರಿ (36). ಶಾರದಾಳ ಪತಿ ಹನುಮಂತಪ್ಪ ನಿವೃತ್ತ ಸೈನಿಕರಾಗಿದ್ದವರು, ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಪಿಂಚಣಿ ಹಣ ಶಾರದಾಗೆ ಬರುತ್ತಿತ್ತು. ಅದರಲ್ಲಿ ಸಾಕಷ್ಟು ಹಣವನ್ನು ಶಾರದಾ ತನ್ನ ಮಗ ರಾಜೇಶನಿಗೆ ನೀಡುತ್ತಿದ್ದರು. ಆದರೂ ಮಗ ಮತ್ತೆ ಮತ್ತೆ ಜಗಳವಾಡುತ್ತಲೇ ಇದ್ದ (father’s money and land).
ಎರಡು ದಿನಗಳ ಹಿಂದಷ್ಟೇ ರಾಜೇಶನ ಪತ್ನಿ ತನ್ನ ಎರಡು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದಳು. ಇಂಥ ಸಂದರ್ಭದಲ್ಲಿ ತನ್ನ ಇನ್ನೊಬ್ಬ ಮಗನ ಮನೆಯಲ್ಲಿ ವಾಸವಾಗಿರುತ್ತಿದ್ದ ತಾಯಿ ಶಾರದಾ ಅಡುಗೆ ತೆಗೆದುಕೊಂಡು ಬಂದು, ರಾಜೇಶನಿಗೆ ನೀಡಿ, ಅಲ್ಲಿಯೇ ಉಳಿದುಕೊಳ್ಳುತ್ತಿದ್ದಳು. ಶನಿವಾರ ರಾತ್ರಿಯೂ ಅದೇ ಆಗಿದೆ.
ಹೀಗೆ ಅಡುಗೆ ತಂದ ತಾಯಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಆಕೆಯ ತಲೆಗೆ ರಾಡ್ನಿಂದ ಹೊಡೆದಿದ್ದಾನೆ. ಆಕೆಗೆ ಬಿದ್ದ ಜೋರಾದ ಏಟಿಗೆ ಆಕೆ ಅಲ್ಲಿಯೇ ಜೀವ ಬಿಟ್ಟಿದ್ದಾಳೆ. ಅದನ್ನು ಊಹಿಸಿರದಿದ್ದ ರಾಜೇಶ ಭಯಗೊಂಡು ತಾನು ಕೂಡ ಅಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಇನ್ನು ಈ ಕುಟುಂಬಕ್ಕೆ ಸೇರಿದ ಸುಮಾರು 4 ಗುಂಟೆ ಜಮೀನು ಇದೇ ಪ್ರದೇಶದಲ್ಲಿದೆ. ಅದನ್ನು ಮಾರಾಟ ಮಾಡಿ ಎಲ್ಲರೂ ಹಣ ಹಂಚಿಕೊಳ್ಳೋದಾಗಿ ಮಾತುಕತೆಯಾಗಿತ್ತು. ಆದರೆ ಅದಕ್ಕೆ ರಾಜೇಶನ ವಿರೋಧವಿತ್ತು. ತನಗೆ ಆ ಜಾಗೆ ಕೊಟ್ಟರೆ ಅಲ್ಲಿ ಮನೆ ಕಟ್ಟಿಕೊಳ್ಳೋದಾಗಿ ಹೇಳುತ್ತಿದ್ದ. ಈ ವಿಚಾರವಾಗಿಯೂ ನಿನ್ನೆ ತಾಯಿಯೊಂದಿಗೆ ಜಗಳವಾಗಿದೆ. ಈ ವೇಳೆಯೇ ರಾಜೇಶ ತಾಯಿಗೆ ರಾಡ್ ನಿಂದ ತಲೆಗೆ ಹೊಡೆದು, ಕೊಲೆ ಮಾಡಿದ ಬಳಿಕ ಭಯಭೀತನಾಗಿ ತಾನು ಅಲ್ಲೇ ಇದ್ದ ಪತ್ನಿಯ ಸೀರೆ ತೆಗೆದುಕೊಂಡು ನೇಣಿಗೆ ಶರಣಾಗಿದ್ದಾನೆ.
ಇದನ್ನೂ ಓದಿ: ನಿಶಾನಿ ಬೆಟ್ಟದಲ್ಲಿ ಕಾಡಾನೆ ದಾಳಿಗೆ ವೃದ್ಧ ಸಾವು: ಶವ ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ ಚಾರಣಿಗರು
ಇನ್ನು ರಾಜೇಶನ ಮಾನಸಿಕ ಆರೋಗ್ಯದ ಬಗ್ಗೆಯೂ ಸಾಕಷ್ಟು ಮಾತುಗಳಿವೆ. ಇದೇ ಕಾರಣಕ್ಕೆ ಪದೇ ಪದೇ ಪತ್ನಿಯೊಂದಿಗೂ ಆತ ಜಗಳವಾಡುತ್ತಿದ್ದನಂತೆ. ಅಲ್ಲದೇ ಪದೇ ಪದೇ ಪತ್ನಿ ಶೀಲದ ಬಗ್ಗೆಯೂ ಶಂಕೆ ವ್ಯಕ್ತಪಡಿಸಿ, ಜಗಳವಾಡುತ್ತಿದ್ದನಂತೆ. ಇಂಥ ರಾಜೇಶ ಕೊನೆಗೆ ತನ್ನ ತಾಯಿಯನ್ನೇ ಕೊಂದು ತಾನೂ ನೇಣಿಗೆ ಶರಣವಾಗಿದ್ದು ಅಲ್ಲಿಗೆ ಇಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ. ಇದೀಗ ದೂರು ದಾಖಲಿಸಿಕೊಂಡಿರೋ ನಗರ ಠಾಣೆ ಪೊಲೀಸರು, ಈಗ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಕೇಳಿದಾಗಲೆಲ್ಲ ಸಾಕಷ್ಟು ಹಣ ಕೊಡುತ್ತಿದ್ದ ತಾಯಿ ತನ್ನದೇ ಮಗನಿಂದ ಕೊಲೆಯಾಗಿದ್ದು ಒಂದು ಕಡೆಯಾದರೆ, ತಮ್ಮದಲ್ಲದ ತಪ್ಪಿಗಾಗಿ ತಂದೆಯನ್ನು ಕಳೆದುಕೊಂಡಿರೋ ಪುಟ್ಟಮಕ್ಕಳ ಸಂಕಟ ಮತ್ತೊಂದು ಕಡೆ. ಒಟ್ಟಿನಲ್ಲಿ ಒಂದು ಕ್ಷಣದ ಸಿಟ್ಟು ಏನೆಲ್ಲ ಮಾಡಬಹುದು ಅನ್ನೋದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ