ಕೌಟುಂಬಿಕ ಕಲಹ, ಪತಿಗೆ ಹಣದ ದಾಹ; ಮಾರಕಾಸ್ತ್ರದಿಂದ ಹೊಡೆದು ಪತ್ನಿಯ ಕೊಲೆ, ಕತ್ತು ಹಿಸುಕಿ ಮಗುವಿನ ಹತ್ಯೆಗೆ ಯತ್ನ
ತನಗೇ ಅದೇ ಯುವತಿ ಬೇಕೆಂದು ಹಠಕ್ಕೆ ಬಿದ್ದು ಮದುವೆಯಾಗಿದ್ದ ಆತ, ತಮ್ಮ ಸಂಬಂಧಿಕರ ವಿರೋಧದ ನಡುವೆಯೂ ಆತನಿಗೆ ತಮ್ಮ ಮಗಳನ್ನ ಕೊಟ್ಟು ವಿವಾಹ ಮಾಡಿಕೊಟ್ಟಿದ್ದರು. ಹೀಗೆ ತಾನೇ ಇಷ್ಟಪಟ್ಟು ಮದುವೆಯಾಗಿದ್ದ ಆತ, ಮೂರು ವರ್ಷಗಳ ಸಂಸಾರ ನಡೆಸಿದ್ದ. ಆದರೀಗ ಹಣದ ದಾಹಕ್ಕೆ ಬಿದ್ದಿದ್ದ ಆತ, ಪತ್ನಿಯ ಜೊತೆ ಜಗಳ ಮಾಡುತ್ತಿದ್ದ. ಆ ಜಗಳ ವಿಕೋಪಕ್ಕೆ ಹೋಗಿ, ಮಗುವಿನ ಮೇಲೆ ಹಲ್ಲೆ ನಡೆಸಿ, ಪತ್ನಿಯನ್ನ ಕೊಂದು ಪರಾರಿಯಾಗಿದ್ದಾನೆ.
ಮಂಡ್ಯ: ಕೌಟುಂಬಿಕ ಕಲಹ ಹಾಗೂ ಹಣದ ದಾಹಕ್ಕೆ ಬಿದ್ದ ಪತಿಯೊಬ್ಬ ತನ್ನ ಪತ್ನಿಯನ್ನ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಜೊತೆಗೆ ಮುದ್ದಾದ ಒಂದೂವರೆ ವರ್ಷದ ಗಂಡು ಮಗುವನ್ನು ಕೂಡ ಕತ್ತು ಹಿಸುಕಿ ಹತ್ಯೆ ಮಾಡಲು ಮುಂದಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಹೊಸಯರಗನಹಳ್ಳಿ ಗ್ರಾಮದ ಹೊರವಲಯಲ್ಲಿರೋ ಒಂಟಿ ಮನೆಯಲ್ಲಿ ನಡೆದಿದೆ. ವರ್ಷಿತಾ(24) ಎಂಬ ಗೃಹಣಿ ಕೊಲೆಯಾದ ದುರ್ದೈವಿ. ಒಂದೂವರೆ ವರ್ಷದ ಆರ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಇನ್ನು ಘಟನೆ ನಂತರ ಆರೋಪಿ ಗೌತಮ್ ಪರಾರಿಯಾಗಿದ್ದಾನೆ.
ಮೂರು ವರ್ಷದ ಕೆಳಗೆ ಮದುವೆಯಾಗಿದ್ದ ಜೋಡಿ
ಮೂರು ವರ್ಷಗಳ ಹಿಂದೆ ಮದುವೆಯಾಗಿ, ಗೌತಮ್ ಹಾಗೂ ಆತನ ಪತ್ನಿ ವರ್ಷಿತಾ ಗ್ರಾಮದ ಹೊರವಲಯದಲ್ಲಿರುವ ತಮ್ಮದೇ ಜಮೀನಿನಲ್ಲಿ ಪುಟ್ಟದಾದ ಮನೆಮಾಡಿಕೊಂಡು ಒಂದೂವರೆ ವರ್ಷದಿಂದ ಬದುಕು ಸಾಗಿಸುತ್ತಿದ್ದರು. ಆರಂಭದಲ್ಲಿ ಪತ್ನಿಯ ಜೊತೆಗೆ ಚೆನ್ನಾಗಿಯೇ ಇದ್ದ ಗೌತಮ್, ಹಣಕಾಸಿನ ವಿಚಾರದಲ್ಲಿ ಪತ್ನಿಯ ಜೊತೆಗೆ ಜಗಳ ತೆಗೆಯುತ್ತಿದ್ದ. ಆ ಜಗಳ ವಿಕೋಪಕ್ಕೆ ತಿರುಗಿ ನಿನ್ನೆ(ಜು.6) ಆಕೆಯ ಮೇಲೆ ಮಾರಕಾಸ್ತರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದ. ಅಷ್ಟೇ ಅಲ್ಲದೇ ತನ್ನದೇ ಮಗು ಒಂದೂವರೆ ವರ್ಷ ಆರ್ಯ ಎಂಬ ಕಂದನನ್ನೂ ಕೊಲ್ಲಲು ಯತ್ನಿಸಿರೊ ಆತ, ಮಗುವಿನ ಕತ್ತು ತಿರುಗಿಸಿದ್ದ. ಬಳಿಕ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ ವಿಚಾರವನ್ನ ತನ್ನ ತಂದೆಗೆ ಪೋನ್ ಮಾಡಿ ತಿಳಿಸಿ, ಅಲ್ಲಿಂದ ಪರಾರಿಯಾಗಿದ್ದ.
ಇದನ್ನೂ ಓದಿ:ಜೈನಮುನಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್; ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ರಾ ಆರೋಪಿಗಳು?
ಮದುವೆಯಾಗುವುದಿದ್ದರೆ ವರ್ಷಿತಾಳನ್ನೇ ಎಂದು ಹಠಕ್ಕೆ ಬಿದ್ದು ಮದುವೆಯಾಗಿದ್ದ ಆರೋಪಿ ಗೌತಮ್
ಇನ್ನು ಈ ಗೌತಮ್ಗೆ ಯಾವುದೇ ಕೆಲಸ ಇರಲಿಲ್ಲ. ಉಂಡಾಡಿ ಗುಂಡನ ಹಾಗೆ ತಿರುಗಿಕೊಂಡಿದ್ದ. ಇತನ ಜೊತೆ ಮದುವೆಗೆ ವರ್ಷಿತಾಳ ಸಂಬಂಧಿಕರು ಒಪ್ಪಲಿಲ್ಲ. ಊರಿನಲ್ಲಿ ಯಾವಾಗ ತಾನು ವರ್ಷಿತಾಳನ್ನ ಮದುವೆಯಾಗುವುದಕ್ಕೆ ಅವರ ಸಂಬಂಧಿಕರ ವಿರೋಧವಿದೆ ಎಂಬುದನ್ನ ಅರಿತ ಗೌತಮ್ ಮತ್ತು ಅವರ ತಂದೆ ವರ್ಷಿತಾಳ ಹೆತ್ತವರ ಮೇಲೆ ಒತ್ತಡ ತಂದಿದ್ದರು. ಈ ವೇಳೆ ಗೌತಮ್ ಮದುವೆಯಾಗುವುದಿದ್ದರೆ ವರ್ಷಿತಾಳನ್ನೇ ಎಂದು ಹಠಕ್ಕೆ ಬಿದ್ದಿದ್ದ. ಒಂದು ಕಡೆ ವರ್ಷಿತಾಳ ತಂದೆಗೆ ಆರೋಗ್ಯ ಹದಗೆಟ್ಟಿದ್ದು. ಮತ್ತೊಂದು ಕಡೆಗೆ ಗೌತಮ್ ಒತ್ತಾಯಕ್ಕೆ ಮಣಿದು ಸಂಬಂಧಿಕರ ವಿರೋಧದ ನಡುವೆಯೂ ಗೌತಮ್ ಜೊತೆಗೆ ಮದುವೆ ಮಾಡಿಸಿದ್ದರು.
ತೋಟದ ಮನೆಯಲ್ಲಿ ವಾಸವಿದ್ದ ಪತಿ-ಪತ್ನಿ, ಮಗು
ಇನ್ನು ಆರೋಪಿ ಗೌತಮ್, ಹೊಸಯರಗನಹಳ್ಳಿ ಬಳಿಯಲ್ಲಿ ತಮ್ಮ ತಾತನಿಗೆ ಸೇರಿದ 8 ಎಕರೆ ಜಮೀನಿನಲ್ಲಿ ತೋಟದ ಮನೆಯನ್ನ ಕಟ್ಟಿಕೊಂಡಿದ್ದ. ಆರೋಪಿ ಗೌತಮ್ ಪತ್ನಿ, ಮಗನ ಜೊತೆಗೆ ಅಲ್ಲಿಯೇ ವಾಸವಾಗಿದ್ದ. ಜೊತೆಯಲ್ಲಿ ತಾತ ಅಜ್ಜಿಯೂ ಇದ್ದರು. ಜೀವನೋಪಾಯಕ್ಕಾಗಿ ಕುರಿ, ಮೇಕೆ ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿದ್ದ. ಎಲ್ಲವನ್ನೂ ಸರಿಯಾಗಿ ನಿರ್ವಹಿಸಿಕೊಂಡು ಹೋಗಿದ್ದರೆ, ಒಳ್ಳೆಯ ಜೀವನ ಮಾಡಬಹುದಿತ್ತು. ಆದರೆ, ಬೈಕ್ನಲ್ಲಿ ಓಡಾಡಿಕೊಂಡಿರೊ ಶೋಕಿ ಜೀವನಕ್ಕೆ ಹೊಂದಿಕೊಂಡಿದ್ದ ಆತ, ಸದ್ಯ ಪತ್ನಿಯನ್ನ ಕೊಂದು ಪರಾರಿಯಾಗಿದ್ದಾನೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಕೆಆರ್ಎಸ್ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ