ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಬದಲಿಸುತ್ತಿದ್ದ ಅಡ್ಡೆಗಳ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಪಾಕ್ ಗುಪ್ತಚರ ಇಲಾಖೆಗೆ ಕರೆ ಮಾಡಲು ಬಳಸಿದ್ದ 58 ಸಿಮ್ ಬಾಕ್ಸ್ ಹಾಗೂ 2,144 ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಭಾರತೀಯ ಸೇನೆಯ ಮಾಹಿತಿ ಪಡೆಯಲು ಪಾಕಿಸ್ತಾನದ ಐಎಸ್ಐನಿಂದಲೂ ಕರೆಗಳು ಬಂದಿದ್ದವು. ಬೆಂಗಳೂರಿನ ನಾಲ್ಕು ಕಡೆ ಆರೋಪಿ ಸಿಮ್ಬಾಕ್ಸ್ ಇರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಸಿಸಿಬಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಭುವನೇಶ್ವರಿನಗರ, ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಸೇರಿದಂತೆ ನಾಲ್ಕು ಕಡೆ ಆರೋಪಿಯು ಸಿಮ್ಬಾಕ್ಸ್ ಇರಿಸಿದ್ದ. ಸೇನೆಯ ಬೆಂಗಳೂರು ಸದರ್ನ್ ಕಮಾಂಡ್ನ ವಿಶೇಷ ತಂಡ ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಕಾರಿನ ಗಾಜು ಒಡೆದು ಲ್ಯಾಪ್ಟಾಪ್ ಕಳವು
ಬೆಂಗಳೂರು: ಚಂದ್ರಾಲೇಔಟ್ನ ಶೆರ್ಲಾಕ್ ಬಾರ್ ಬಳಿ ಕಾರಿನ ಗಾಜು ಒಡೆದು ₹ 74 ಸಾವಿರ ನಗದು ಮತ್ತು ಲ್ಯಾಪ್ಟಾಪ್ ಅನ್ನು ಕಳವು ಮಾಡಲಾಗಿದೆ. ಈ ಸಂಬಂಧ ಅಮೋಘ ಎನ್ನುವವರು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಸ್ತೆ ಬದಿ ಕಾರು ನಿಲ್ಲಿಸಿ ಕೆಲಸದ ನಿಮಿತ್ತ ತೆರಳಿದ್ದಾಗ ಘಟನೆ ಕಳವು ಮಾಡಲಾಗಿದೆ.
ರಸ್ತೆಯಲ್ಲೇ ಚೂರಿ ಇರಿತ: ವ್ಯಕ್ತಿ ಸಾವು
ದಾವಣಗೆರೆ: ವ್ಯಕ್ತಿಯೊಬ್ಬರನ್ನು ನಡುರಸ್ತೆಯಲ್ಲಿಯೇ ಮನಬಂದಂತೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ವೃತ್ತದಲ್ಲಿ ನಡೆದಿದೆ. ನಲ್ಲೂರು ಗ್ರಾಮದ ಜಾಕೀರ್ ಕೊಲೆಯಾದವರು. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಲೀಂ ಎಂಬಾತ ಕೊಲೆ ಆರೋಪಿ ಎಂದು ಚನ್ನಗಿರಿ ಪೊಲೀಸರು ತಿಳಿಸಿದ್ದಾರೆ. ಜನರು ನೋಡುತ್ತಿದ್ದಂತೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಕೊಲೆಯ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದ್ದಾರೆ. ಕಣ್ಣೆದುರೇ ಭೀಕರ ಕೊಲೆ ನಡೆಯುತ್ತಿದ್ದರೂ ತಡೆಯಲು ಯಾರೂ ಪ್ರಯತ್ನಿಸಿಲ್ಲ.
ಅನ್ನದ ಗಂಜಿ ಬಿದ್ದು ಐವರಿಗೆ ಗಾಯ
ರಾಯಚೂರು: ಅಂಗನವಾಡಿಯಲ್ಲಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳಿಗೆ ಗಾಯವಾಗಿರುವ ಘಟನೆ ರಾಯಚೂರಿನ ಮಂಗಳವಾರಪೇಟೆ ಅಂಗನವಾಡಿಯಲ್ಲಿ ನಡೆದಿದೆ. ಮೂರು ವರ್ಷದ ಹಿಬಾ, ಅರ್ಹಾನ್, ಮೊಹಮ್ಮದ್ ಜಾಹಿದ್, ಶೇಕ್ ಅದ್ನಾನ್, ಬಿಬಿ ಮರಿಯಮ್ ಗಾಯಗೊಂಡವರು. ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಅನ್ನದ ಗಂಜಿ ಬಸಿಯುತ್ತಿದ್ದಾಗ ಆಟವಾಡುತ್ತಾ ಬಂದ ಮಕ್ಕಳು ಡಿಕ್ಕಿ ಹೊಡೆದಾಗ ಅನ್ನದ ಪಾತ್ರೆ ಜಾರಿಬಿದ್ದು ಗಂಜಿ ಚೆಲ್ಲಿತ್ತು. ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಮತ್ತು ಗಾಯಗೊಂಡ ಮಕ್ಕಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Tue, 21 June 22