ಸೆನ್ಸೇಷನಲ್ ಕ್ರೈಮ್ ಕತೆಗಳು: ಮೂರನೇ ಪತಿಯಿಂದ ಸಿಗುವ ಆಸ್ತಿ ಎರಡನೇ ಪತಿಯ ಮಗಳಿಗೆ ಆಸ್ತಿ ಸಿಗುವಂತಾಗಲು ಆಕೆ ಮೊದಲ ಪತಿಯಿಂದ ಪಡೆದ ಮಗಳನ್ನು ಕೊಂದುಬಿಟ್ಟಳು!
ಈ ಪ್ರಕರಣದಲ್ಲಿ ಐ ಎನ್ ಎಕ್ಸ್ ಮೀಡಿಯ ನಿರ್ವಹಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಲವು ಸಂಕೀರ್ಣ ಹಣಕಾಸಿನ ವ್ಯವಹಾರಗಳು ಸಹ ಸೇರಿದ್ದವು. ಕೋಟ್ಯಾಂತರ ಹಣ ಶೀನಾ ಬೋರಾಳ ವಿದೇಶೀ ಬ್ಯಾಂಕೊಂದರಲ್ಲಿನ ಖಾತೆಯಲ್ಲಿ ಜಮಾ ಆಗಿದ್ದವು.
ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ತನಿಖಾಧಿಕಾರಿಗಳನ್ನು 7-8 ವರ್ಷಗಳವರೆಗೆ ತಲೆ ಕೆರಕೊಳ್ಳುವುದಷ್ಟೇ ಅಲ್ಲ, ತಲೆಗೂದಲು ಕಿತ್ತುಕೊಳ್ಳುವಂತೆ ಮಾಡಿದ ಪ್ರಕರಣದ ಬಗ್ಗೆ ಹೇಳುತ್ತಿದ್ದೇವೆ. ಇದನ್ನು ಶತಮಾನದ ಅತ್ಯಂತ ನಿಗೂಢ ಪ್ರಕರಣಗಳಲ್ಲೊಂದು ಅಂತ ಪರಿಗಣಿಸಲಾಗಿದೆ. ಏಪ್ರಿಲ್ 24, 2012 ರಂದು ಮುಂಬೈ ಮೆಟ್ರೋ ವನ್ ನಲ್ಲಿ (Metro One) ಎಕ್ಸಿಕ್ಯೂಟಿವ್ ಅಗಿ ಕೆಲಸ ಮಾಡುತ್ತಿದ್ದ ಶೀನಾ ಬೋರಾ (Sheena Bora) ಕಣ್ಮರೆಯಾದವಳು ಮತ್ಯಾವತ್ತೂ ಕಣ್ಣಿಗೆ ಬೀಳಲಿಲ್ಲ. ಮುಂಬೈ ಪೊಲೀಸರು ಆಗಸ್ಟ್ 2015ರಲ್ಲಿ ಇಂದ್ರಾಣಿ ಮುಖರ್ಜಿ (Indrani Mukherjea), ಸಂಜೀವ್ ಖನ್ನಾ ಮತ್ತು ಶ್ಯಾಂವರ್ ರೈ-ಮೂವರನ್ನು ಪ್ರಕರಣದಲ್ಲಿ ಶಂಕಿತರೆಂದು ಬಂಧಿಸಿದ ಬಳಿಕ ಸದರಿ ಪ್ರಕರಣ ಜಗತ್ತಿಗೆ ಗೊತ್ತಾಯಿತು. ಕೇಂದ್ರ ತನಿಖಾ ದಳ ಇಂದ್ರಾಣಿಯ ಪತಿ ಮತ್ತು ಮಾಧ್ಯಮ ದೊರೆ ಪೀಟರ್ ಮುಖರ್ಜಿಯನ್ನು ನಂತರ ಬಂಧಿಸಿತು.
ಅಸಲಿಗೆ ನಡೆದಿದ್ದೇನು?
ವೃತ್ತಿಯಲ್ಲಿ ಡ್ರೈವರ್ ಆಗಿದ ಶ್ಯಾಂವರ್ ರೈನನ್ನು ಆಗಸ್ಟ್ 21, 2015 ರಂದು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣವೊಂದರಲ್ಲಿ ಬಂಧಿಸಿತ್ತು. ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಅವನಲ್ಲಿ ಅಕ್ರಮ ಶಸ್ತ್ರಾಸ್ತ್ರಗಳಿದಿದ್ದು ಪತ್ತೆಯಾಯಿತು. ಪೊಲೀಸರು ಅವನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಅವನೊಂದು ಭಯಾನಕ ಸಂಗತಿಯನ್ನು ಪೊಲೀಸರ ಎದುರು ಬಿಚ್ಚಿಟ್ಟ.
ಐ ಎನ್ ಎಕ್ಸ್ ಮೀಡಿಯಾದ ಸಂಸ್ಥಾಪಕಿ ಮತ್ತು ಸಮಾಜದಲ್ಲಿ ಗಣ್ಯವ್ಯಕ್ತಿ ಎನಿಸಿಕೊಂಡಿರುವ ಇಂದ್ರಾಣಿ ಮುಖರ್ಜಿ 2012ರಲ್ಲಿ ತನ್ನ ಅಣ್ಣನ ಮಗಳನ್ನು ಅಪಹರಿಸಿ ಕೊಂದ ನಂತರ ಅವಳ ದೇಹವನ್ನು ಕಾಡೊಂದರಲ್ಲಿ ಬಿಸಾಡಿದಳು ಎಂದು ಅವನು ಹೇಳಿದ. ಅವನು ನೀಡಿದ ವಿವರಣೆಗೆ ಹೋಲುವ ದೇಹವೊಂದು ರಾಯ್ಗಡ್ ಜಿಲ್ಲೆಯ ಪೆನ್ ತೆಹ್ಸೀಲ್ ನಲ್ಲಿ ಕೆಲ ವರ್ಷಗಳ ಹಿಂದೆ ಪತ್ತೆಯಾಗಿತ್ತು ಎಂದು ಸ್ಥಳೀಯ ಪೊಲೀಸರು ಹೇಳಿದ್ದರು.
ಡ್ರೈವರ್ ಮಗಳಲ್ಲ ಇಂದ್ರಾಣಿಯ ಸ್ವಂತ ಮಗಳು!
ಆದರೆ ತನಿಖೆ ಮುಂದುವರಿದಾಗ ಕೊಲೆಯಾದ ಶೀನಾ ಬೋರಾ ಹೆಸರಿನ ಯುವತಿ ಡ್ರೈವರ್ ರೈನ ಅಣ್ಣನ ಮಗಳು ಅಲ್ಲ ಬದಲಿಗೆ ಇಂದ್ರಾಣಿಗೆ ತನ್ನ ಮೊದಲ ಗಂಡನಿಂದ ಹುಟ್ಟಿದ ಮಗಳೆನ್ನುವ ಆಘಾತಕಾರಿ ವಿಷಯ ಬಯಲಾಯಿತು. ನೆರೆಹೊರೆಯ ಜನ ಎಲ್ಲಿ ನಿಮ್ಮ ಮಗಳು ಕಾಣ್ತಿಲ್ಲ, ಅಂತ ಕೇಳಿದಾಗ ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದಾಳೆ ಅಂತ ಇಂದ್ರಾಣಿ ಹೇಳುತ್ತಿದ್ದಳಂತೆ.
ಇಂದ್ರಾಣಿ ಮತ್ತು ಅವಳ ಎರಡನೇ ಗಂಡ ಸಂಜೀವ ಖನ್ನಾ ಸೇರಿ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸುವ ಹಾಗೆ ಶೀನಾ ಬೋರಾಳ ಕೊಲೆಯನ್ನು ರೈ ಓಡಿಸುತ್ತಿದ್ದ ಕಾರಿನ ಹಿಂಬದಿ ಸೀಟಿನಲ್ಲಿ ಮಾಡಿದ್ದರು. ಪೊಲೀಸರು ಎದುರು ರೈ ಕೊಲೆ ನಡೆದಿದ್ದನ್ನು ಖಚಿತಪಡಿಸಿದ. ಸಂಜೀವ ಖನ್ನಾ, ಶೀನಾಳ ಕೊಲೆಯಲ್ಲಿ ತನ್ನ ಪಾತ್ರವಿರುವುದನ್ನು ಒಪ್ಪಿಕೊಂಡ. ಆದರೆ ಪ್ರಕರಣ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಮಾತ್ರ ತಾನು ಅಪರಾಧ ನಡೆಸಿಲ್ಲ, ತನ್ನ ಮಗಳ ಅಮೆರಿಕದಲ್ಲಿ ಓದುತ್ತಿದ್ದಾಳೆ ಅಂತ ಕೊನೆವರೆಗೆ ಹೇಳುತ್ತಲೇ ಇದ್ದಳು.
ಅಷ್ಟಕ್ಕೂ ಮಗಳನ್ನೇ ಕೊಲ್ಲುವ ಹೀನ ಬುದ್ಧಿ ಇಂದ್ರಾಣಿಯಲ್ಲಿ ಯಾಕೆ ಹುಟ್ಟಿತ್ತು?
ಪ್ರಕರಣದ ತನಿಖೆ ನಡೆಸಿದ ಸಿಬಿಐ ಕೋರ್ಟಿಗೆ ಸಲ್ಲಿಸಿದ ವರದಿಯ ಪ್ರಕಾರ; ಶೀನಾ ಏನಾದರೂ ಇಂದ್ರಾಣಿಯ ಮೂರನೇ ಪತಿ ಪೀಟರ್ ಮುಖರ್ಜಿಯ ಮೊದಲ ಹೆಂಡತಿಯ ಮಗ ರಾಹುಲ್ ಮುಖರ್ಜಿಯನ್ನು ಮದುವೆಯಾದರೆ, ತಾನು ಎರಡನೇ ಪತಿಯಿಂದ ಪಡೆದ ಮಗಳು ವಿಧೀಗೆ ಆಸ್ತಿಯ ಹೆಚ್ಚಿನ ಭಾಗ ಸಿಗಲಾರದು, ಪೀಟರ್ ನಿಂದ ತನಗೆ ದಕ್ಕಬಹುದಾದ ಆಸ್ತಿಯನ್ನೆಲ್ಲ ಶೀನಾಳ ಪಾಲಾಗುತ್ತದೆ ಮತ್ತು ವಿಧೀ ಬೀದಿ ಪಾಲಾಗುತ್ತಾಳೆ ಅನ್ನೋದು ಅವಳ ಎಣಿಕೆಯಾಗಿತ್ತು.
ಹಾಗಾಗೇ, ಇಂದ್ರಾಣಿ ಶೀನಾಳನ್ನು ಮುಗಿಸುವ ಸಂಚು ರೂಪಿಸಿದಳು. ಈ ಪ್ರಕರಣದಲ್ಲಿ ಐ ಎನ್ ಎಕ್ಸ್ ಮೀಡಿಯ ನಿರ್ವಹಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಲವು ಸಂಕೀರ್ಣ ಹಣಕಾಸಿನ ವ್ಯವಹಾರಗಳು ಸಹ ಸೇರಿದ್ದವು. ಕೋಟ್ಯಾಂತರ ಹಣ ಶೀನಾ ಬೋರಾಳ ವಿದೇಶೀ ಬ್ಯಾಂಕೊಂದರಲ್ಲಿನ ಖಾತೆಯಲ್ಲಿ ಜಮಾ ಆಗಿದ್ದವು.
ವರದಿಯೊಂದರ ಪ್ರಕಾರ ಶೀನಾ ಮೂರು ಬೆಡ್ ರೂಮಿನ ಫ್ಲ್ಯಾಟೊಂದನ್ನು ಕೊಡಿಸುವಂತೆ ತನ್ನಮ್ಮ ಇಂದ್ರಾಣಿಯ ದುಂಬಾಲು ಬಿದ್ದಿದ್ದಲ್ಲದೆ ಬ್ಲ್ಯಾಕ್ ಮೇಲ್ ಸಹ ಮಾಡುತ್ತಿದ್ದಳು. ಶೀನಾ ನಾಪತ್ತೆಯಾದ ಅವಳ ಎಲ್ಲ ವ್ಯವಹಾರಗಳನ್ನು ಇಂದ್ರಾಣಿ ನೋಡಿಕೊಳ್ಳಲಾರಂಭಿಸಿದ್ದಳು.
ಪ್ರಕರಣ ಈಗೇನಾಗಿದೆ?
ಫೆಬ್ರುವರಿ 2017ರಲ್ಲಿ ಇಂದ್ರಾಣಿ, ಸಂಜೀವ ಖನ್ನಾ, ಶ್ಯಾಂವರ್ ರೈ-ಮೂವರೊಂದಿಗೆ ಪೀಟರ್ ಮುಖರ್ಜಿಯನ್ನೂ ಜೈಲಿಗೆ ಹಾಕಲಾಯಿತು. ಪೀಟರ್, ಶೀನಾ ಕೊಲೆಯಾಗಿರುವ ಸುದ್ದಿ ಕೇಳಿ ಆಘಾತ ವ್ಯಕ್ತಪಡಿಸಿ ಇದರಲ್ಲಿ ತನ್ನ ಪಾತ್ರವೇನೂ ಇಲ್ಲ ಅಂತ ಹೇಳಿದನಾದರೂ ಸಿಬಿಐ ಅಧಿಕಾರಿಗಳು ಅವನನ್ನು ಸಹ ವಶಕ್ಕೆ ಪಡೆದರು.
ಆದರೆ ಶೀನಾಳ ಸಾವು ಹೇಗೆ ಸಂಭವಿಸಿತು ಅನ್ನೋದು ಇಂದಿಗೂ ಮಿಸ್ಟರಿಯಾಗಿ ಉಳದಿದೆ. ಶೀನಾ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಸಂಜಯ ಠಾಕೂರ್, ಶೀನಾಳ ಬೆಂದ ದೇಹ ಅರೆ-ಕೊಳೆತ ಸ್ಥಿತಿಯಲ್ಲಿದ್ದಿದ್ದರಿಂದ ಸಾವಿನ ಕಾರಣ ಪತ್ತೆ ಮಾಡುವುದು ದುಸ್ಸಾಧ್ಯವಾಗಿತ್ತು ಎಂದು ಹೇಳಿದ್ದರು.
ಪೀಟರ್ ಮತ್ತು ಇಂದ್ರಾಣಿ ಡಿವೋರ್ಸ್ ಪಡೆದುಕೊಂಡರು!
ಪ್ರಕರಣದಲ್ಲಿ 50ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಕೋರ್ಟಿನ ಮುಂದೆ ಹಾಜರುಪಡಿಸಲಾಗಿತ್ತು. ಶ್ಯಾಂವರ್ ರೈ ಪ್ರಕರಣದ ಅಪ್ರೂವರ್ ಆಗಿಬಿಟ್ಟಿದ್ದ. ಅಕ್ಟೋಬರ್ 2019 ರಲ್ಲಿ ಇಂದ್ರಾಣಿ ಮತ್ತು ಪೀಟರ್ ಬೇರ್ಪಡಲು ನಿರ್ಧರಿಸಿದಾಗ ಮುಂಬೈ ಫ್ಯಾಮಿಲಿ ಕೋರ್ಟ್ ಅವರಿಗೆ ಡಿವೋರ್ಸ್ ಒದಗಿಸಿತು. ಮಾರ್ಚ್ 2020 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಪೀಟರ್ ಮುಖರ್ಜಿಗೆ ಜಾಮೀನು ನೀಡಿತು. ಜುಲೈ 2021 ರಲ್ಲಿ ಇದೇ ನ್ಯಾಯಾಲಯ ಇಂದ್ರಾಣಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಅದಾದ ಒಂದು ತಿಂಗಳು ನಂತರ ಸಿಬಿಐ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿತು.
ಏತನ್ಮಧ್ಯೆ, ಇಂದ್ರಾಣಿ ಜಾಮೀನು ಕೋರಿ ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಲೇ ಇದ್ದಳು. ಅಪೆಕ್ಸ್ ಕೋರ್ಟ್ ಸಿಬಿಐ ಮತ್ತು ಮಹಾರಾಷ್ಟ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತು. ಆಕೆ ನಡೆಸಿದ್ದು ಹೀನ ಕೃತ್ಯ, ಹಾಗಾಗಿ ಜಾಮೀನಿಗೆ ಅನರ್ಹಳು ಅಂತ ಉತ್ತರಿಸಿತು.
ಇಂದ್ರಾಣಿ ಈಗಾಗಲೇ ಆರೂವರೆ ವರ್ಷಗಳನ್ನು ಜೈಲಲ್ಲಿ ಕಳೆದಿದ್ದಾಳೆ ಎಂದು ಹೇಳಿದ ಸುಪ್ರೀಮ್ ಕೋರ್ಟ್ ಮಾರ್ಚ್ 18, 2022 ರಂದು ಆಕೆಗೆ ಜಾಮೀನು ನೀಡಿತು.