ಹೊಸಪೇಟೆ: ನಗರದ ಗುತ್ತಿಗೆದಾರ ಹನುಮಂತಪ್ಪ ಅವರ ಮನೆಗೆ ಬುಧವಾರ (ಜೂನ್ 15) ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ನೆಹರು ಕಾಲೊನಿಯಲ್ಲಿರುವ ನಿವಾಸ, ಕುಡುತಿನಿ ಗ್ರಾಮದ ಕಲ್ಯಾಣ ಮಂಟಪದ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು. ಬೆಂಗಳೂರು, ಬಳ್ಳಾರಿ, ಹೊಸಪೇಟೆಯಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇವರು ಹಲವು ಸರ್ಕಾರಿ ಮತ್ತು ಖಾಸಗಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು.
ಎಸಿಬಿ ಬಲೆಟೆ ಟೈಪಿಸ್ಟ್
ಕಲಬುರಗಿ: ಸಾರಿಗೆ ಇಲಾಖೆ (ಆರ್ಟಿಒ) ಕಚೇರಿಯ ಟೈಪಿಸ್ಟ್ ಪರ್ವೇಜ್ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ದಾಳಿಯ ವೇಳೆ ಎಂ.ಬಿ.ನಗರ ಠಾಣೆಯ ಹೆಡ್ ಕಾನ್ಸ್ಟೆಬಲ್ ಬಂದೇನವಾಜ್ ಹಾಗೂ ಆರ್ಟಿಒ ಬ್ರೋಕರ್ ಶಿವರಾಜ್ ಹೋಳ್ಕರ್ ಪರಾರಿಯಾಗಿದ್ದಾರೆ. ಎಸಿಬಿ ಟ್ರೇಜರರ್ ಅಫ್ತಾಬ್ ವಸೀಮ್ ಜಹಿರುದ್ದಿನ್ ಬಳಿ ಹಣ ಪಡೆಯುವಾಗ ಪರ್ವೇಜ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಅಪ್ರಾಪ್ತೆಯ ಮೇಲೆ ಅತ್ಯಾಚಾರ
ಬಾಗಲಕೋಟೆ: ಜಿಲ್ಲೆಯ ಗ್ರಾಮವೊಂದರಲ್ಲಿ ಅಪ್ರಾಪ್ತೆಯ ಮೇಲೆ 35 ವರ್ಷದ ವ್ಯಕ್ತಿ ಅತ್ಯಾಚಾರ ನಡೆಸಿದ್ದಾನೆ. ಸಂತ್ರಸ್ತೆಯ ತಂದೆ ಮೇಲೆ ಆರೋಪಿಯ ಕುಟುಂಬ ಸದಸ್ಯರು ಹಲ್ಲೆಯನ್ನೂ ನಡೆಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರುವ ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲು ಮಾಡಿದ್ದಾರೆ.
ವಾಹನ ಕಳ್ಳನ ಬಂಧನ
ಬೆಂಗಳೂರು: ಮನೆಗಳ ಮುಂದೆ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಜಶೇಖರ ಎಂದು ಗುರುತಿಸಲಾಗಿದೆ. ಆರೋಪಿಯಿಂದ ₹ 2.70 ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನ ಹಾಗೂ ಒಂದು ಟಾಟಾ ಏಸ್ ಗೂಡ್ಸ್ ವಾಹನ ವಶಪಡಿಸಿಕೊಳ್ಳಲಾಗಿದೆ. ರಾಜಗೋಪಾಲ ನಗರ, ಬ್ಯಾಡರಹಳ್ಳಿ ಸೇರಿದಂತೆ ವಿವಿಧೆಡೆ ನಡೆದಿದ್ದ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದ ಪತಿ
ದಾವಣಗೆರೆ: ತಾಯಿ ಮಗು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮನೋಜ್ ಕುಮಾರ್ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ವ್ಯಕ್ತವಾಗಿದೆ. ಈತ ಮತ್ತೋರ್ವ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ. ಅವರಿಬ್ಬರು ಜೊತೆಗಿರುವ ಪೋಟೊಗಳನ್ನು ಪತ್ನಿಗೆ ಕಳಿಸುತ್ತಿದ್ದ. ಈತನ ಕಿರುಕುಳ ಸಹಿಸಲಾಗದೆ ಜಗಳೂರು ಪಟ್ಟಣದಲ್ಲಿ ಪತ್ನಿ ಲಿಖಿತಾ ಹಾಗೂ ಅವಳ ಒಂಬತ್ತು ತಿಂಗಳ ಮಗು ನೇಣಿಗೆ ಶರಣಾಗಿದ್ದರು. ಲಿಖಿತಾ ಪಾಲಕರಿಂದ ಮನೋಜ್ ಕುಮಾರ ವಿರುದ್ಧ ಜಗಳೂರು ಠಾಣೆಯಲ್ಲಿ ವರದಕ್ಷಿಣೆ ಕಿರುಕಳ ಹಾಗೂ ಮಾನಸಿಕ ಹಿಂಸೆ ಪ್ರಕರಣ ದಾಖಲಾಗಿದೆ. ದಾವಣಗೆರೆ ನಗರ ಪಾಲಿಕೆಯಲ್ಲಿ ಎಂಜಿನಿಯರ್ ಆಗಿರುವ ಮನೋಜ್ ಕುಮಾರ್ ಸದ್ಯ ತಲೆಮರೆಸಿಕೊಂಡಿದ್ದಾನೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ