ಕಲಬುರಗಿ: ಅರ್ಧಂಬರ್ಧ ಮಣ್ಣು ಮುಚ್ಚಿದ ಸ್ಥಿತಿಯಲ್ಲಿರುವ ಮಹಿಳೆಯ ಶವ, ಮತ್ತೊಂದಡೆ ಪೊಲೀಸರ ಪರಿಶೀಲನೆ, ಕಂಗಾಲಾಗಿರುವ ಕುಟುಂಬದವರು. ಇಂತಹದೊಂದು ದೃಶ್ಯಗಳು ಕಂಡುಬಂದಿದ್ದು ಕಲಬುರಗಿ (Kalaburagi) ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಕನೂರು ಗ್ರಾಮದಲ್ಲಿ. ಹೌದು ಕುಕುನೂರು ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಮಹಿಳೆಯನ್ನ ತಲೆ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಮಹಿಳೆಯ ಕತ್ತು ಮತ್ತು ಕಿವಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು, ನಂತರ ಶವವನ್ನು ಜಮೀನಿನಲ್ಲಿಯೇ ಇದ್ದ ಮಣ್ಣಿನಿಂದ ಮುಚ್ಚಿ ಪರಾರಿಯಾಗಿದ್ದಾನೆ. ಇನ್ನು ಕೊಲೆಯಾದ ಮಹಿಳೆಯ ಹೆಸರು ಗುರುಬಸಮ್ಮ. 56 ವರ್ಷದ ಗುರುಬಸಮ್ಮ, ಗ್ರಾಮದ ಹೊರವಲಯದಲ್ಲಿರುವ ತನ್ನ ಕೃಷಿ ಜಮೀನಿಗೆ ಪ್ರತಿನಿತ್ಯ ಹೋಗುತ್ತಿದ್ದಳಂತೆ.
ಅದರಂತೆ ನಿನ್ನೆ(ಮೇ.14) ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮನೆಯಿಂದ ಜಮೀನಿಗೆ ಹೋಗಿ ಬರೋದಾಗಿ ಹೇಳಿ, ಹೋಗಿದ್ದಳಂತೆ. ಆದ್ರೆ, ಸಂಜೆಯಾದ್ರು ಕೂಡ ಗುರುಬಸಮ್ಮ ಮನೆಗೆ ಬಂದಿರಲಿಲ್ಲವಂತೆ. ಹೀಗಾಗಿ ಕುಟುಂಬದವರು, ಗುರುಬಸಮ್ಮಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಗ್ರಾಮದ ತುಂಬೆಲ್ಲಾ ಹುಡುಕಾಡಿದ್ದಾರೆ. ಸಂಬಂಧಿಕರ ಮನೆಗೆ ಹೋಗಿರಬಹುದೆಂದು ವಿಚಾರಿಸಿದ್ದಾರೆ. ಆದ್ರೆ, ಎಲ್ಲಿಯೂ ಗುರುಬಸಮ್ಮ ಬಂದಿಲ್ಲಾ ಅನ್ನೋ ಮಾಹಿತಿ ತಿಳಿದಾಗ, ಜಮೀನಿಗೆ ಹೋಗಿ ನೋಡಿದ್ದಾರೆ. ಆದ್ರೆ ಅಲ್ಲಿಯೂ ಕೂಡ ಆರಂಭದಲ್ಲಿ ಗುರುಬಸಮ್ಮ ಕಂಡಿಲ್ಲಾ. ಆದ್ರೆ ಜಮೀನಿನ ಅನೇಕ ಕಡೆ ಟಾರ್ಚ್ ಹಾಕಿ ನೋಡಿದಾಗ, ಕಾಲುಗಳು ಮಾತ್ರ ಕಂಡಿವೆ. ಹೀಗಾಗಿ ಕುಟುಂಬದವರು ಸಮೀಪ ಹೋಗಿ ನೋಡಿದಾಗ ಗೊತ್ತಾಗಿದೆ, ಗುರುಬಸಮ್ಮ ಬರ್ಬರವಾಗಿ ಕೊಲೆಯಾಗಿದ್ದಾಳೆ ಎನ್ನುವುದು.
ಇದನ್ನೂ ಓದಿ:ಹಳಿಯಾಳ: ಜಮೀನು ವಿವಾದ, ಫಾರೆಸ್ಟ್ ವಾಚ್ಮ್ಯಾನ್ನ ಕಾಲು ಕತ್ತರಿಸಿ ಭೀಕರ ಕೊಲೆ
ಗ್ರಾಮದ ಓರ್ವ ವ್ಯಕ್ತಿ ಮೇಲೆ ಅನುಮಾನ ವ್ಯಕ್ತಪಡಿಸಿದ ಕುಟುಂಬದವರು, ಗ್ರಾಮಸ್ಥರು
ಇನ್ನು ಗುರುಬಸಮ್ಮಳನ್ನು ಕೊಲೆ ಮಾಡಿರುವ ದುಷ್ಕರ್ಮಿ, ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜೊತೆಗೆ ಗ್ರಾಮದ ಓರ್ವ ವ್ಯಕ್ತಿ ಮೇಲೆ ಕುಟುಂಬದವರು ಮತ್ತು ಗ್ರಾಮದ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಕ್ಕೆ ಕೊಳವೆ ಬಾವಿ ನೀರು ನೋಡೋದಾಗಿ ಹೇಳಿ ಓಡಾಡುತ್ತಿದ್ದ ಓರ್ವ ವ್ಯಕ್ತಿಯೇ ಕೊಲೆ ಮಾಡಿರುವ ಅನುಮಾನ ಕುಟುಂಬದವರನ್ನು ಕಾಡುತ್ತಿದೆ. ಚಿನ್ನಾಭರಣಕ್ಕಾಗಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ. ಯಾಕಂದ್ರೆ, ಗುರುಬಸಮ್ಮ ಗ್ರಾಮದಲ್ಲಿ ಯಾರ ಜೊತೆ ವೈಷಮ್ಯವನ್ನು ಹೊಂದಿರಲಿಲ್ಲವಂತೆ. ಹಣಕಾಸಿನ ವಿಚಾರ, ಆಸ್ತಿ ವಿಚಾರಕ್ಕೆ ಕೂಡ ಯಾರ ಜೊತೆ ದ್ವೇಷ ಇರಲಿಲ್ಲವಂತೆ. ಹೀಗಾಗಿ ದುಷ್ಕರ್ಮಿ, ಚಿನ್ನಾಭರಣಕ್ಕಾಗಿಯೇ ಕೊಲೆ ಮಾಡಿರುವ ಅನುಮಾನ ಇದೀಗ ಕುಟುಂಬದವರು ಮತ್ತು ಗ್ರಾಮಸ್ಥರಿಗೆ ಕಾಡುತ್ತಿದೆ. ಇನ್ನು ಕೊಲೆಯ ಮಾಹಿತಿ ತಿಳಿದು, ಕಲಬುರಗಿ ಎಸ್ಪಿ ಇಶಾ ಪಂತ್ ಕೂಡಾ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಹಿಳೆಯ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿ ಬಗ್ಗೆ ಕೆಲ ಸುಳಿವು ಇದ್ದು, ಆರೋಪಿ ಪತ್ತೆ ಮಾಡುವ ಭರವಸೆ ನೀಡಿದ್ದಾರೆ.
ಸದ್ಯ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ, ಗ್ರಾಮೀಣ ಭಾಗದಲ್ಲಿ ಕೃಷಿ ಜಮೀನಿಗೆ ಹೋಗುವ ಮಹಿಳೆಯರು ಕೊಲೆಗಳಾಗುತ್ತಿರುವುದು ಗ್ರಾಮೀಣ ಭಾಗದ ಜನರ ಆತಂಕವನ್ನು ಹೆಚ್ಚು ಮಾಡಿದೆ. ಹೀಗಾಗಿ ಪೊಲೀಸರು ಇನ್ನಷ್ಟು ಕ್ರಮಗಳನ್ನು ಕೈಗೊಂಡು ಆರೋಪಿಯನ್ನು ಪತ್ತೆ ಮಾಡುವ ಕೆಲಸ ಮಾಡಬೇಕಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ