ಮೂವರು ನಕಲಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಕಲಬುರಗಿ ಪೊಲೀಸ್​​

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿ ಮೂವರು ನಕಲಿ ಸಿಬಿಐ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೂವರು ನಕಲಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಕಲಬುರಗಿ ಪೊಲೀಸ್​​
ಸಾಂದರ್ಭಿಕ ಚಿತ್ರ
Image Credit source: NDTV
Updated By: ವಿವೇಕ ಬಿರಾದಾರ

Updated on: Jul 26, 2022 | 8:16 PM

ಕಲಬುರಗಿ: ದುಡಿದು ತಿನ್ನುವದನ್ನು ಬಿಟ್ಟು ಇತ್ತೀಚೆಗೆ ಕೆಲವರು ವಾಮ ಮಾರ್ಗದ ಮೂಲಕ ಹಣ ಗಳಿಸಲು ಹತ್ತಾರು ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ದೇಶದ ಅನೇಕ ತನಿಖಾ ಸಂಸ್ಥೆಗಳ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಕಲಬುರಗಿಯಲ್ಲಿ ಸಿಬಿಐ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ ಕಿಲಾಡಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿಬಿಐ ಅಧಿಕಾರಿಗಳು ಅಂತ ಹೇಳಿ ಜನರಿಗೆ ವಂಚಿಸುತ್ತಿದ್ದ ಜಿಲ್ಲೆಯ ಅಫಜಲಪುರ ತಾಲೂಕಿನ ಬಸವರಾಜ್, ಜಾನೇಶ್, ರಾಮು ಅನ್ನೋ ಮೂವರನ್ನು ಬಂಧಿಸಿದ ದೇವಲ ಗಾಣಗಾಪುರ ಠಾಣೆಯ ಪೊಲೀಸರು ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ಬೊಲೆರೋ ಕಾರ್ ನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಜುಲೈ 21 ರಂದು ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದ ಯಂಕಪ್ಪ ಅನ್ನೋ ವ್ಯಕ್ತಿಯ ಬಳಿ ಹೋಗಿದ್ದ ಮೂವರು, ಯಂಕಪ್ಪನಿಗೆ ತಾವು ಸಿಬಿಐ ಅಧಿಕಾರಿಗಳು ಇದ್ದೇವೆ. ನೀನು ಮಟ್ಕಾ ದಂದೆ ನಡೆಸುತ್ತಿದ್ದಿಯಾ ಅಂತ ಹೇಳಿ, ಯಂಕಪ್ಪನನ್ನು ತಮ್ಮ ಕಾರ್ ಲ್ಲಿ ಕರೆದುಕೊಂಡು ಬೇರೆ ಸ್ಥಳಕ್ಕೆ ಹೋಗಿದ್ದರು. ಅಲ್ಲಿ ಯಂಕಪ್ಪನಿಗೆ ಬೆದರಿಸಿ, ನಮಗೆ ಒಂದು ಲಕ್ಷ ಇಪ್ಪತ್ತು ಸಾವಿರ ಹಣ ನೀಡಬೇಕು. ಇಲ್ಲದಿದ್ದರೆ ನಿನಗೆ ಜೈಲಿಗೆ ಕಳುಹಿಸುತ್ತೇವೆ ಅಂತ ಬೆದರಿಕೆ ಹಾಕಿದ್ದರು. ಆದರೆ ತನ್ನ ಬಳಿ ಹಣವಿಲ್ಲಾ ಅಂತ ಯಂಕಪ್ಪ ಹೇಳಿದ್ದ. ಕೊನೆಯದಾಗಿ ಇಪ್ಪತ್ತು ಸಾವಿರ ಕೊಡಲು ಯಂಕಪ್ಪ ಸಿದ್ದನಾಗಿದ್ದ.

ಯಂಕಪ್ಪ ತನ್ನ ಸಂಬಂಧಿಯೋರ್ವನಿಗೆ ಪೋನ್ ಮಾಡಿ ಹಣ ತರುವಂತೆ ಹೇಳಿದ್ದ. ಹಣ ತಂದಿದ್ದ ಯಂಕಪ್ಪನ ಸಂಬಂಧಿ, ಸಿಬಿಐ ಅಧಿಕಾರಿಗಳು ಅಂತ ಹೇಳಿಕೊಂಡಿದ್ದ ಬಸವರಾಜ್, ರಾಮು, ಜಾನೇಶ್ ನೋಡಿ ಶಾಕ್ ಆಗಿದ್ದರು. ಸಿಬಿಐ ಅಧಿಕಾರಿಗಳು ಈ ರೀತಿ ಯಾವುದೇ ಕಾರ್ಯಾಚಾರಣೆ ಮಾಡೋದಿಲ್ಲಾ ಅಂತ ಮಾಹಿತಿ ಹೊಂದಿದ್ದ ಯಂಕಪ್ಪನ ಸಂಬಂಧಿ, ನನಗೆ ಸುತ್ತಮುತ್ತಲಿನ ಠಾಣೆಯ ಪೊಲೀಸರು ಗೊತ್ತು. ಸಿಬಿಐ ಅಧಿಕಾರಿಗಳು ಈ ರೀತಿ ಸಣ್ಣಪುಟ್ಟ ಕೇಸ್ ಗಳಿಗಾಗಿ ಬರೋದಿಲ್ಲಾ. ನಿಮ್ಮ ಐಡಿ ಕಾರ್ಡ್ ತೋರಿಸಿ ಅಂತ ಹೇಳಿದ್ದ. ಆಗ ತಾವು ಸಿಕ್ಕಿ ಬೀಳೋ ಭಯದಿಂದ ಸಿಬಿಐ ಅಧಿಕಾರಿಗಳು ಅಂತ ಹೇಳಿಕೊಂಡಿದ್ದ ಅಧಿಕಾರಿಗಳು ನಾಪತ್ತೆಯಾಗಿದ್ದರು. ಜುಲೈ 22 ರಂದು ದೇವಲ ಗಾಣಗಾಪುರ ಠಾಣೆಯಲ್ಲಿ ಯಂಕಪ್ಪ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ದೇವಲ ಗಾಣಗಾಪುರ ಠಾಣೆಯ ಪೊಲೀಸರು ಕೆಲ ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಮೂರು ಜನರನ್ನು ಬಂಧಿಸಿದ್ದಾರೆ.

ಸಾಲ, ಶೋಕಿಗಾಗಿ ಅಕ್ರಮ ಕೆಲಸಕ್ಕೆ ಕೈ ಹಾಕಿದ್ದ ದುರುಳರು ಬಂಧಿತರಾದ ರಾಮು, ಬಸವರಾಜ್, ಜಾನೇಶ್, ಸ್ನೇಹಿತರಿದ್ದ, ಮೂವರು ಕೂಡಾ ಶೋಕಿ ಹುಚ್ಚು ಹಿಡಿಸಿಕೊಂಡಿದ್ದರು. ಹೈಪೈ ಜೀವನ ನಡೆಸಬೇಕು ಅಂತ ನಿರ್ಧರಿಸಿದ್ದ ಮೂವರು ಅದಕ್ಕಾಗಿ ಅನೇಕರ ಬಳಿ ಸಾಲ ಮಾಡಿದ್ದರು. ಕೊನೆಗೆ ಸಾಲ ತೀರಿಸಲಿಕ್ಕಾಗದೇ ಇದ್ದಾಗ, ಹಣ ಗಳಿಸಲು ವಾಮ ಮಾರ್ಗಕ್ಕೆ ಇಳದಿದ್ದರು. ತಮ್ಮೂರಿನ ಸುತ್ತಮುತ್ತ ಯಾರೆಲ್ಲಾ ಮಟ್ಕಾ ಬರೆದುಕೊಳ್ಳುತ್ತಾರೆ. ಯಾರೆಲ್ಲಾ ಇಸ್ಪೀಟ್ ಆಡುತ್ತಾರೆ,ಯಾರು ಯಾವ ಅಕ್ರಮ ಕೆಲಸ ಮಾಡುತ್ತಾರೆ ಅನ್ನೋದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಮೊದಲ ಪ್ರಯತ್ನವಾಗಿ ಯಂಕಪ್ಪನನ್ನು ಹಿಡಿದು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಆದರೆ ಮೊದಲ ಪ್ರಯತ್ನದಲ್ಲಿಯೇ ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮೂವರನ್ನು ಕೂಡಾ ಜೈಲಿಗಟ್ಟಿದ್ದಾರೆ. ಇನ್ನು ಕೆಲವರು ಈ ದಂದೆಯಲ್ಲಿ ಭಾಗಿಯಾಗಿರೋ ಸಾದ್ಯತೆಯಿದ್ದು, ಅವರಿಗಾಗಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

Published On - 8:03 pm, Tue, 26 July 22