ರಾಯಚೂರು: ಗೆಳೆಯನ ಪತ್ನಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಅನಾಥ ಹೆಣವಾದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬಣಕಲ್ನಲ್ಲಿ ನಡೆದಿದೆ. ಗೆಳೆಯ ಕೈಕಾಲು ಬಿದ್ದರೂ ಅನೈತಿಕ ಸಂಬಂಧ ಬಿಡದ ಹಿನ್ನೆಲೆ ಕೊನೆಗೆ ಪಾರ್ಟಿ ಎಂದು ಕರೆಸಿ ಗೆಳೆಯನ ಬರ್ಬರ ಹತ್ಯೆ ಮಾಡಲಾಗಿದೆ. ತಿರುಪತಿ (32) ಹತ್ಯೆಯಾದ ವ್ಯಕ್ತಿ. ಕೊಲೆ ಸಂಬಂಧ ದೇವದುರ್ಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿ ಸಹೋದರರಾದ ತಿರುಪತಿ ಹಾಗೂ ರಾಮಣ್ಣ ಬಂಧಿತರು. ಆರೋಪಿ ತಿರುಪತಿ ಹಾಗೂ ಮೃತ ತಿರುಪತಿ ಇಬ್ಬರು ಸ್ನೇಹಿತರು. ಇಬ್ಬರು ದೇವದುರ್ಗ ತಾಲೂಕಿನ ಅರಸಣಗಿ ಗ್ರಾಮದ ನಿವಾಸಿಗಳು. ಆರೋಪಿ ತಿರುಪತಿ ಪತ್ನಿ ಜೊತೆ ಮೃತ ತಿರುಪತಿ ಅನೈತಿಕ ಸಂಬಂಧ ಹೊಂದಿದ್ದ. ಪತ್ನಿ ಜೊತೆಗಿನ ಅನೈತಿಕ ಸಂಬಂಧ ಬಿಡುವಂತೆ ಆರೋಪಿ ತಿರುಪತಿ ಬೇಡಿಕೊಂಡಿದ್ದ. ಇಡೀ ಊರಿಗೆ ವಿಷಯ ಗೊತ್ತಾಗುತ್ತಿದೆ ತನ್ನ ಪತ್ನಿ ಸಹವಾಸ ಬಿಡುವಂತೆ ಮನವಿ ಮಾಡಿದ್ದ. ಕೊನೆಗೆ ಕೈ-ಕಾಲು ಹಿಡಿದುಕೊಂಡು ಬೇಡಿಕೊಂಡರೂ ಮೃತ ತಿರುಪತಿ ಅನೈತಿಕ ಸಂಬಂಧ ಮುಂದುವರೆಸಿದ್ದ. ಇದೇ ದ್ವೇಷ ಹೊಂದಿದ್ದ ಆರೋಪಿ ತಿರುಪತಿ ಹಾಗೂ ಆತನ ಅಣ್ಣ ರಾಮಣ್ಣ ಇದೇ ಏಪ್ರಿಲ್ 11 ರಂದು ಬೆಣಕಲ್ ಗ್ರಾಮಕ್ಕೆ ನಾಟಕ ನೋಡಲು ಹೋಗಿದ್ದ ವೇಳೆ ಪ್ಲಾನ್ ಮಾಡಿ, ಪಾರ್ಟಿ ಮಾಡಿಸಿ ಪಾರ್ಟಿ ಬಳಿಕ ತಿರುಪತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಮೃತನ ಗುರುತು ಪತ್ತೆಯಾಗದ ಹಿನ್ನೆಲೆ ಪೊಲೀಸರು ಮೃತನ ಫೋಟೋಸ್ ವೈರಲ್ ಮಾಡಿದ್ದರು. ಬಳಿಕ ಆತನ ಕಾಲಿನಲ್ಲಿದ್ದ ದಾರದ ಆಧಾರದಲ್ಲಿ ಗುರುತು ಪತ್ತೆಯಾಗಿದೆ. ಈ ಬಗ್ಗೆ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಷ್ಟದ ಹಣ ವಸೂಲಿಗೆ ಕಿಡ್ನ್ಯಾಪ್ ದಾರಿ
ಬೆಂಗಳೂರು: ಕೊಡಬೇಕಿದ್ದ ಹಣ ಕೊಡಲಿಲ್ಲವೆಂದು ಬೆದರಿಸಿ ಪೊಲೀಸ್ ಸ್ಟೇಷನ್‌ಗೆ ಕೂಗಳತೆ ದೂರದಲ್ಲೇ ಸಿನಿಮೀಯ ಮಾದರಿಯಲ್ಲಿ ಕಿಡ್ನ್ಯಾಪ್ ಮಾಡಲಾಗಿದೆ. ಏರ್ ಫೈರ್ ಮಾಡಿ ಬೆದರಿಸಿ ಸುಲಿಗೆ ಮಾಡಲಾಗಿದೆ. ಪರಿಚಿತ ವ್ಯಕ್ತಿಯಿಂದ 6.35 ಲಕ್ಷ ಬಲವಂತವಾಗಿ ವರ್ಗಾಯಿಸಿಕೊಂಡ ಆರೋಪ ಕೇಳಿ ಬಂದಿದೆ. ಈ ಸಮಬಂಧ ಯಲಹಂಕ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚೈತನ್ಯ ಶರ್ಮಾ, ವೈಭವ್ ಹಾಗೂ ಅಮಿತ್ ಬಂಧಿತರು.
ಏಪ್ರಿಲ್ 23ರಂದು ಯಲಹಂಕದ ಬಿ.ಬಿ ರಸ್ತೆಯಲ್ಲಿ ಅಜಯ್ ಪಾಂಡೆ ಎಂಬಾತನನ್ನ ಅಪಹರಿಸಿ, ಬೆದರಿಸಿ ಸುಲಿಗೆ ಮಾಡಿಲಾಗಿತ್ತು. ಅಜಯ್ ಪಾಂಡೆ ವೆಬ್ ಡಿಸೈನರ್ ಕೆಲಸ ಮಾಡಿಕೊಂಡಿದ್ದ. ಆರೋಪಿ ಚೈತನ್ಯ ಶರ್ಮಾ ಲ್ಯಾಂಪ್ಸ್ ಕಾರ್ಟ್ ಹೆಸರಿನಲ್ಲಿ ಕಂಪನಿ ಹೊಂದಿದ್ದ. ಅಜಯ್ ಪಾಂಡೆ, ಚೈತನ್ಯ ಶರ್ಮಾನ ಉದ್ಯಮಕ್ಕೆ ವೆಬ್‌ಸೈಟ್ ಸಿದ್ದಪಡಿಸಿ ಕೊಟ್ಟಿದ್ದ. ಅಜಯ್ ಪಾಂಡೆಗೆ ವೆಬ್ ನಿರ್ವಹಣೆಗೆ ನೀಡಬೇಕಿದ್ದ ಹಣವನ್ನ ಚೈತನ್ಯ ನೀಡಿರಲಿಲ್ಲ. ಸಿಟ್ಟಿಗೆದ್ದು ಅಜಯ್ ಪಾಂಡೆ, ವೆಬ್‌ಸೈಟ್ ಡಾಟ ಅಳಿಸಿ ಹಾಕಿದ್ದ. ಹೀಗಾಗಿ ಅಜಯ್ ನಡೆಯಿಂದ ಚೈತನ್ಯ ನಷ್ಟ ಅನುಭವಿಸಿದ್ದ. ನಷ್ಟ ಭರಿಸುವಂತೆ ಕೇಳಿದ್ರೆ ಉತ್ತರಿಸದೇ ಒಂದು ವರ್ಷದಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ. ಇದೇ ಕಾರಣದಿಂದ ಅಪಹರಿಸಿ ಹಣ ವಸೂಲಿಗೆ ಚೈತನ್ಯ ನಿರ್ಧರಿಸಿದ್ದ. ಅಜಯ್ ನನ್ನ ಅಪಹರಿಸಿ 6.35 ಲಕ್ಷ ವಸೂಲಿ ಮಾಡಿದ್ದ. ಪಿಸ್ತೂಲ್ ತೋರಿಸಿ ಬೆದರಿಸಿ ಹಣ ವಸೂಲಿ ಮಾಡಲಾಗಿದೆ ಎಂದು ಅಜಯ್ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ದೂರಿನನ್ವಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ನಮಾಜ್ ಮಾಡಲು ಅವಕಾಶ ನೀಡಿರುತ್ತಾರೆಂದು ಸುಳ್ಳು ಮಾಹಿತಿ
ನೆಲಮಂಗಲ: ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿರುತ್ತಾರೆಂದು ಫೇಸ್ ಬುಕ್ಕಿನಲ್ಲಿ ಸುಳ್ಳು ಮಾಹಿತಿ ಹಾಕಿದವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಬ್ ರಿಜಿಸ್ಟರ್ ರವೀಂದ್ರ ಗೌಡ ನೆಲಮಂಗಲ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚಿನ್ನ ನಗದು ಕಳ್ಳತನ ಮಾಡಿ ಪರಾರಿ
ತುಮಕೂರು: ಕುಣಿಗಲ್ ತಾಲೂಕಿನ ಇಪ್ಪಾಡಿ & ಹುಣಸೆಕುಪ್ಪ ಗ್ರಾಮಗಳಲ್ಲಿ ಮನೆಯ ಹೆಂಚು ತೆಗೆದು ಚಿನ್ನಾಭರಣ ಕಳ್ಳತನ ಮಾಡಲಾಗಿದೆ. 65 ಸಾವಿರ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಇಪ್ಪಾಡಿಯಲ್ಲಿ ಈರಮ್ಮ ಎಂಬುವರ ಮನೆಯಲ್ಲಿ 15 ಗ್ರಾಂ ಚಿನ್ನ, 50 ಸಾವಿರ ನಗದು ಕಳವಾಗಿದೆ. ಹುಣಸೆಕುಪ್ಪದಲ್ಲಿ ಚೇತನ ಎಂಬುವರ ಮನೆಯಲ್ಲಿ 10 ಗ್ರಾಂ ಚಿನ್ನ, 15 ಸಾವಿರ ನಗದು ಕಳ್ಳತನ ಮಾಡಲಾಗಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನವಜಾತ ಶಿಶು ಮಾರಾಟ ಐವರ ವಿರುದ್ಧ ದೂರು
ಕಾರವಾರ: ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗೌಳಿವಾಡದಲ್ಲಿ ನವಜಾತ ಶಿಶು ಮಾರಾಟ ಹಿನ್ನೆಲೆ ಸಿಡಿಪಿಓ ಡಾ.ಲಕ್ಷ್ಮಿದೇವಿ ಎಸ್ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ಶಿಶುವಿನ ಲಾಲನೆ ಪಾಲನೆ ಮಾಡಲಾಗದು ಎಂದು ಮಗುವನ್ನೆ ತಾಯಿ ಮಾರಾಟ ಮಾಡಿದ್ದಾರೆ. 25 ಸಾವಿರಕ್ಕೆ ಮಗುವನ್ನ ಮಾರಾಟ ಮಾಡಿದ್ದಾರೆ. ಸಂತ್ರಸ್ತೆಯ ಅಣ್ಣ ಭಯ್ಯಾಜಾನು, ಆಶಾ ಕಾರ್ಯಕರ್ತೆ ರೋಜಿ ಲೂಯಿಸ್ ದಬಾಲಿ, ಮಮತಾಜ್ ಸರ್ದಾರ ಹಳಬ, ಶಿಶುವನ್ನ ಪಡೆದ ರಾಹತ ಪಟೇಲ್, ಅಬ್ದುಲ್ ರಹಿಮಾನ್ ಪಟೇಲ್ ದಂಪತಿಗಳ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳ ಬಂಧನ
ಯಾದಗಿರಿ: ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಏಪ್ರಿಲ್ 26 ರಂದು ಘಟನೆ ನಡೆದಿದ್ದು ನಿನ್ನೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟಂಟಂ ಚಾಲಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಟಂಟಂ ವಾಹನದಲ್ಲಿ ಬರುವಾಗ ಚಾಲಕನಿಂದ ಅತ್ಯಾಚಾರ ನಡೆದಿತ್ತು. ಕಾಮುಕ ಹನುಮಂತ, ಕೃತ್ಯಕ್ಕೆ ಸಹಕರಿಸಿದ ನರಸಪ್ಪನನ್ನು ಅರೆಸ್ಟ್ ಮಾಡಲಾಗಿದೆ. ಪೊಲೀಸರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕ್ಯಾಂಟರ್ ಡಿಕ್ಕಿ, ಇನೋವಾ ಕಾರು ಚಾಲಕ ಸೇರಿ ಇಬ್ಬರ ಸಾವು
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದೊಡ್ಡಶೆಟ್ಟಿಕೆರೆ ಗ್ರಾಮದ ಬಳಿ ಕ್ಯಾಂಟರ್ ಡಿಕ್ಕಿಯಾಗಿ ಇನೋವಾ ಕಾರು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿದ್ದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತಪಟ್ಟವರು ಬೆಂಗಳೂರು ನಗರ ಜಿಲ್ಲೆ ಆನೇಕಲ್ ಮೂಲದವರು. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ತಿರುಪತಿಯಲ್ಲಿ ಕನ್ನಡಿಗರಿಗೆ ಇದೆಂಥಾ ಅವಮಾನ? ವಾಹನಕ್ಕೆ ಕನ್ನಡ ಬಾವುಟ, ನಟ ಪುನೀತ್ ಫೋಟೋ ಅಂಟಿಸಿಕೊಂಡವರಿಗೆ ಕೆಟ್ಟ ಅನುಭವ
Published On - 9:35 am, Thu, 28 April 22