ವೃದ್ಧ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆಯಾದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆಯಲ್ಲಿ ಸಾರಿಗೆ ಬಸ್ಗಳ ನಡುವೆ ಅಪಘಾತ ಸಂಭವಿಸಿದ್ದು, ಕುಣಿಗಲ್ ರಿಂಗ್ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿ ಓರ್ವ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.
ಪತ್ನಿ ಗಾಢವಾದ ನಿದ್ದೆಯಲ್ಲಿದ್ದಾಗ ಪತಿ ಕತ್ತು ಸೀಳಿ ಆಕೆಯನ್ನು ಕೊಲೆ ಮಾಡಿದ ಘಟನೆ ದಾವಣಗೆರೆಯ ಆಜಾದ್ ನಗರ ಠಾಣಾ ವ್ಯಾಪ್ತಿಯ ಹೆಗಡೆ ನಗರದಲ್ಲಿ ನಡೆದಿದೆ. ಷಾಕೀರ್ ಹಬೀ ಕೊಲೆಯಾದವರು. ಷಾಕೀರ್ ಹಬೀ (70) ಮನೆಯಲ್ಲಿ ಮಲಗಿದ್ದಾಗ ಈಕೆಯ ಪತಿ ಚಮ್ಮನ್ ಸಾಬ್ (78) ಕತ್ತು ಸೀಳಿದ್ದಾನೆ. ಆದರೆ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆಂಬ ಮಾಹಿತಿ ತಿಳಿದುಬಂದಿಲ್ಲ. ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದೆ. ಸದ್ಯ ಆಜಾದ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಚಮ್ಮನ್ ಸಾಬ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸಾರಿಗೆ ಬಸ್ಗಳ ನಡುವೆ ಡಿಕ್ಕಿ
ಬಾಗಲಕೋಟೆ: ಎರಡು ಸಾರಿಗೆ ಬಸ್ಗಳ ನಡುವೆ ಅಪಘಾತ ಸಂಭವಿಸಿ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಕ್ರಾಸ್ ಬಳಿ ನಡೆದಿದೆ. ಬಾಗಲಕೋಟೆ ಬೀಳಗಿ ಡಿಪೋದ ಎರಡು ಕೆಎಸ್ಆರ್ಟಿಸಿ ಬಸ್ಗಳು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿಯಾಗಿವೆ. ಈ ವೇಳೆ ಒಂದು ಬಸ್ ರಸ್ತೆಯ ಬದಿಗೆ ಇಳಿದಿದ್ದು, ಕ್ರೇನ್ ಮೂಲಕ ಮೇಲಕ್ಕೆ ಎತ್ತಲಾಗಿದೆ. ಘಟನೆಯಿಂದಾಗಿ ಹುಬ್ಬಳ್ಳಿ -ವಿಜಯಪುರ ಹೆದ್ದಾರಿಯಲ್ಲಿ ಒಂದು ಕಿಮೀ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರದಲ್ಲಿ ಅಸ್ತವ್ಯಸ್ಥಗೊಂಡಿತ್ತು.
ಭೀಕರ ಅಪಘಾತದಲ್ಲಿ ಕಾರು ಚಾಲಕ ಸಾವು
ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಕುಣಿಗಲ್ ರಿಂಗ್ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕಾರು ಚಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ನಿವಾಸಿ ಲೋಕೇಶ್ (30) ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಕೆಟ್ಟು ನಿಂತಿದ್ದ ಹಿಟಾಚಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲೋಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆತ್ಮಹತ್ಯೆಗೆ ಶರಣಾದ ದಂಪತಿ
ಮಂಗಳೂರು: ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿ ಬಳಿಯ ಅಡುಮರೋಳಿ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಮಲ್ಲಿಕಾರ್ಜುನ್ ಮತ್ತು ಇವರ ಪತ್ನಿ ಮಂಗಳೂರು ಮೂಲದ ಸೌಮ್ಯಾ ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಇವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ತನಿಖೆಯಿಂದ ತಿಳಿದುಬರಬೇಕಷ್ಟೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ