Bengaluru Crime: ವಿಚಾರಣೆಯ ಹೆಸರಿನಲ್ಲಿ 10 ಲಕ್ಷ ರೂ ಕದ್ದ ಹೆಡ್ ಕಾನ್‌ಸ್ಟೆಬಲ್ ಅಮಾನತು, ಅಕ್ರಮವಾಗಿ ಹಣ ಸಾಗಿಸುತ್ತಿದ್ದವರು ಅರೆಸ್ಟ್
ಚಂದ್ರಾ ಲೇಔಟ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಹೇಂದ್ರ ಗೌಡ ಅವರು ಪರಿಶೀಲನೆ ನಡೆಸಿ 10 ಲಕ್ಷ ರೂ ಕದ್ದಿದ್ದು ಠಾಣೆಯಲ್ಲಿ ಮೇಲಾಧಿಕಾರಿಗಳ ಬಳಿ 40 ಲಕ್ಷ ರೂ. ಪತ್ತೆಯಾಗಿರುವುದಾಗಿ ಹೇಳಿದ್ದರು.

ಬೆಂಗಳೂರು: ಅಕ್ರಮವಾಗಿ ಹಣ ಸಾಗಿಸುತ್ತಿದ್ದವರ ಬಳಿಯೇ ವಿಚಾರಣೆಯ ಹೆಸರಿನಲ್ಲಿ 10 ಲಕ್ಷ ರೂಪಾಯಿ ಕದ್ದ ಹೆಡ್ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಆದೇಶಿಸಿದ್ದಾರೆ. ಲಿಂಗೇಶ್, ಪ್ರದೀಪ್, ವೆಟ್ರಿವೇಲು, ಶ್ಯಾಮ್ ಎಂಬುವವರು ಅಕ್ರಮವಾಗಿ 50 ಲಕ್ಷ ರೂ ಹಣ ಸಾಗಿಸುತ್ತಿದ್ದ ವೇಳೆ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಹೇಂದ್ರ ಗೌಡ ಅವರು ಪರಿಶೀಲನೆ ನಡೆಸಿ 10 ಲಕ್ಷ ರೂ ಕದ್ದಿದ್ದು ಠಾಣೆಯಲ್ಲಿ ಮೇಲಾಧಿಕಾರಿಗಳ ಬಳಿ 40 ಲಕ್ಷ ರೂ. ಪತ್ತೆಯಾಗಿರುವುದಾಗಿ ಹೇಳಿದ್ದರು. ಮಹೇಂದ್ರ ಗೌಡ ಅವರ ಅಕ್ರಮ ಪತ್ತೆಯಾಗಿದ್ದು ಅವರನ್ನು ಅಮಾನತು ಮಾಡಲಾಗಿದೆ. ಹಾಗೂ ಅಕ್ರಮವಾಗಿ ಹಣ ಸಾಗಿಸುತ್ತಿದ್ದವರನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಉದ್ಯಮಿ ಲಿಂಗೇಶ್ ಎಂಬುವವರಿಗೆ ಪ್ರದೀಪ್ ಎಂಬ ಆರೋಪಿ ಕಮಿಷನ್ ಹಣದ ಆಸೆ ತೋರಿಸಿದ್ದ. ಲಕ್ಷ-ಲಕ್ಷ ಹಣ ಎಕ್ಸ್ ಚೇಂಜ್ ಮಾಡಿಕೊಟ್ಟರೆ ಶೇ.10 ರಷ್ಟು ಕಮಿಷನ್ ಕೊಡಿಸುವ ಆಸೆ ಹುಟ್ಟಿಸಿದ್ದ. ಕೆಲವೇ ದಿನಗಳಲ್ಲಿ 2 ಸಾವಿರ ರೂ.ಮುಖ ಬೆಲೆಯ ನೋಟು ರದ್ದಾಗಲಿದೆ. ನನ್ನ ಪರಿಚಿತರ ಬಳಿ 2 ಸಾವಿರ ಮುಖ ಬೆಲೆಯ ನೂರಾರು ಕೋಟಿ ರೂ.ಇದೆ. ಅವರಿಗೆ 500 ಮುಖಬೆಲೆಯ ನೋಟು ಕೊಟ್ಟರೆ ಶೇ.10 ರಷ್ಟು ಕಮಿಷನ್ ಕೊಡ್ತಾರೆ ಎಂದು ಪ್ರದೀಪ್ ಲಿಂಗೇಶನನ್ನು ನಂಬಿಸಿದ್ದ. ಪ್ರದೀಪ್ ಮಾತಿಗೆ ಮರುಳಾಗಿ ಲಿಂಗೇಶ್ ತನ್ನ ಬಳಿಯಿದ್ದ 50 ಲಕ್ಷ ರೂ.ಅನ್ನು ನೀಡುವುದಾಗಿ ಹೇಳಿದ್ದ. ಇದನ್ನೂ ಓದಿ: ರಮ್ಯಾ ಜತೆಗಿನ ಸಿನಿಮಾ ಬಗ್ಗೆ ವಿಶೇಷ ಮಾಹಿತಿ ನೀಡಿದ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ
ಲಿಂಗೇಶ್ ಅಕ್ಟೋಬರ್ 2 ರಂದು 50 ಲಕ್ಷ ರೂ. ನಗದಿನೊಂದಿಗೆ ರಾಮನಗರದಿಂದ ಬೆಂಗಳೂರು ನಗರಕ್ಕೆ ಬಂದಿದ್ದ. ನಂತರ ಹಣ ಬದಲಾವಣೆಗೆ ಲಿಂಗೇಶ್ ಪ್ರದೀಪನ ಕಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರಕ್ಕೆ ತೆರಳಿದ್ದ. ನೋಟು ಬದಲಾವಣೆಗೆ ಕಮಿಷನ್ ಕೊಡುವುದಾಗಿ ಹೇಳಿದ್ದ ವೆಟ್ರಿವೇಲು ಹಾಗೂ ಶ್ಯಾಮ್ ನನ್ನ ಭೇಟಿ ಮಾಡಿದ್ದ. ಈ ಪ್ರದೇಶದಲ್ಲಿ ಹಣ ಬದಲಾವಣೆ ಮಾಡುವುದು ಕಷ್ಟ ಎಂದಿದ್ದ ಆರೋಪಿಗಳು, ಜ್ಞಾನಭಾರತಿ ಯೂನಿರ್ವಸಿಟಿ ಬಳಿಗೆ ಹೋಗೋಣ ಎಂದಿದ್ದರು. ನಂತರ ನಾಲ್ವರು ಒಂದೇ ಕಾರಿನಲ್ಲಿ ಜ್ಞಾನಭಾರತಿ ಯೂನಿರ್ವಸಿಟಿ ಯತ್ತ ತೆರಳಿದರು. ಆದ್ರೆ ಮಾರ್ಗ ಮಧ್ಯೆ ಸ್ಥಳ ಬದಲಿಸಿದ್ದ ವೆಟ್ರಿವೇಲು ಚಂದ್ರಾ ಲೇಔಟ್‌ಗೆ ಲಿಂಗೇಶ್‌ನನ್ನು ಕರೆದುಕೊಂಡು ಹೋಗಿದ್ದರು. ಈ ನಾಲ್ವರೂ ಡೀಲ್ ಬಗ್ಗೆ ಮಾತನಾಡುತ್ತಿದ್ದಾಗ ಸ್ಥಳಕ್ಕೆ ಎಂಟ್ರಿಕೊಟ್ಟಿದ್ದ ಹೆಡ್ ಕಾನ್‌ಸ್ಟೇಬಲ್ ಮಹೇಂದ್ರಗೌಡ ಇವರ ಮಾತುಗಳನ್ನು ಕೇಳಿಸಿಕೊಂಡು ಕಾರನ್ನು ಪರಿಶೀಲನೆ ನಡೆಸಿದ್ರು. ಕಾರಿನಲ್ಲಿ ಪರಿಶೀಲಿಸಿದಾಗ 50 ಲಕ್ಷ ರೂ. ನಗದು ಪತ್ತೆಯಾಗಿತ್ತು.
ನಂತರ ಮಹೇಂದ್ರಗೌಡ 50 ಲಕ್ಷ ರೂ. ಜಪ್ತಿ ಮಾಡಿ, ನಾಲ್ವರನ್ನೂ ಠಾಣೆಗೆ ಕರೆತಂದು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ಬಳಿಕ ಠಾಣೆಯಲ್ಲಿ ಮೇಲಾಧಿಕಾರಿಗಳ ಬಳಿ 40 ಲಕ್ಷ ರೂ. ಪತ್ತೆಯಾಗಿದ್ದು ಜಪ್ತಿ ಮಾಡಿರುವುದಾಗಿ ಹೇಳಿದ್ದರು. ಲಿಂಗೇಶನ್ನು ಮೇಲಾಧಿಕಾರಿಗಳು ಪ್ರಶ್ನಿಸಿದಾಗ ನಾನು ತಂದಿದ್ದು 50 ಲಕ್ಷ ರೂ. ಎಂದು ಲಿಂಗೇಶ್ ಹೇಳಿಕೆ ನೀಡಿ 50 ಲಕ್ಷ ರೂ. ಪೈಕಿ 10 ಲಕ್ಷ ರೂ. ಕಳುವಾಗಿರುವ ಬಗ್ಗೆ ಚಂದ್ರಾ ಲೇಔಟ್ ಪೊಲೀಸರಿಗೆ ದೂರು ನೀಡಿದರು. ಈ 50 ಲಕ್ಷದ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದಾಗ ಹೆಡ್ ಕಾನ್ಸ್ಟೇಬಲ್ ಮಹೇಂದ್ರನ ಕಳ್ಳಾಟ ಪತ್ತೆಯಾಗಿದೆ. ಮಾರ್ಗ ಮಧ್ಯೆಯೇ ಹೆಡ್ ಕಾನ್‌ಸ್ಟೇಬಲ್ ಮಹೇಂದ್ರ 10 ಲಕ್ಷ ರೂ. ಲಪಟಾಯಿಸಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಜೀಪ್-ಕಾರು ಮುಖಾಮುಖಿ ಡಿಕ್ಕಿ, ಓರ್ವ ಮಹಿಳೆ ಸ್ಥಳದಲ್ಲೇ ಸಾವು: 6 ಜನರಿಗೆ ಗಂಭೀರ ಗಾಯ
ಕೂಡಲೇ ಮಹೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ 10 ಲಕ್ಷ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಮಹೇಂದ್ರಗೌಡನನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಆದೇಶ ಹೊರಡಿಸಿದ್ದಾರೆ. 50 ಲಕ್ಷ ರೂ. ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಅಡಿ ಲಿಂಗೇಶ್, ಪ್ರದೀಪ್, ವೆಟ್ರಿವೇಲು, ಶ್ಯಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಹೆಡ್ ಕಾನ್ಸ್ಟೇಬಲ್ ಮಹೇಂದ್ರನಿಗೆ ಮಾಹಿತಿ ಕೊಟ್ಟ ಬಾತ್ಮೀದಾರ ಶಶಿಧರ್ ಕೂಡ ಅರೆಸ್ಟ್ ಆಗಿದ್ದಾನೆ.
Published On - 7:33 am, Mon, 10 October 22