Crime News: ಮನೆಯೊಳಗೆ ಪ್ರವೇಶ ನಿರಾಕರಣೆ: ಕೋಟ್ಯಾಧಿಪತಿ ಪತಿ ಮನೆ ಮುಂದೆ ಪತ್ನಿ ಧರಣಿ

ರಾಜ್ಯದ ವಿವಿಧ ಕಡೆಗಳಲ್ಲಿ ಕಳ್ಳತನ, ನಾಪತ್ತೆ, ಅಪಘಾತ ಸೇರಿದಂತೆ ಅನೇಕ ಘಟನೆಗಳು ನಡೆಯುತ್ತಿದ್ದು, ಈ ಪೈಕಿ ಕೆಲವೊಂದರ ಮಾಹಿತಿಗಳು ಇಲ್ಲಿವೆ.

Crime News: ಮನೆಯೊಳಗೆ ಪ್ರವೇಶ ನಿರಾಕರಣೆ: ಕೋಟ್ಯಾಧಿಪತಿ ಪತಿ ಮನೆ ಮುಂದೆ ಪತ್ನಿ ಧರಣಿ
ಮನೆಯೊಳಗೆ ಪ್ರವೇಶ ನಿರಾಕರಣೆ: ಕೋಟ್ಯಾಧಿಪತಿ ಪತಿ ಮನೆ ಮುಂದೆ ಪತ್ನಿ ಧರಣಿ
TV9kannada Web Team

| Edited By: Rakesh Nayak

Sep 16, 2022 | 12:38 PM

ತುಮಕೂರು: ಪತಿಯ ನಿಧನ ನಂತರ ಮನೆಯೊಳಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆ ಮನೆಯ ಮುಂದೆ ಪತ್ನಿ ಧರಣಿ ಕುಳಿತ ಪ್ರಸಂಗವೊಂದು ನಗರದ ವಿದ್ಯಾನಗರದ 4 ನೇ‌ಕ್ರಾಸ್​ನಲ್ಲಿ ನಡೆದಿದೆ. ರೈಸ್ ಮಿಲ್ ಮಾಲೀಕರಾಗಿದ್ದ ಜಿತೇಂದ್ರ ಕುಮಾರ್ ಅವರು ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ಇದಾದ ನಂತರ ಇವರ ಪತ್ನಿ ಮಂಜುಳಾ ಅವರಿಗೆ ಮನೆಯೊಳಗೆ ಪ್ರವೇಶ ಮಾಡಲು ಜಿತೇಂದ್ರ ಕುಟುಂಬಸ್ಥರು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಮಂಜುಳಾ ಅವರು ಪತಿಯ ಮನೆ ಬೇಕೆಂದು ಮನೆ ಮುಂದೆ ಮುಂದೆ ಧರಣಿ ಕುಳಿತಿದ್ದಾರೆ.

ರೈಸ್ ಮಿಲ್ ಮಾಲೀಕನಾಗಿದ್ದ ಜಿತೇಂದ್ರ ಮತ್ತು ಮಂಜುಳಾ ಅವರು ಮನೆಯವರ ವಿರೋಧ ನಡುವೆ ಪ್ರಿತಿಸಿ ಅಂತರಜಾತಿ ವಿವಾಹ ಆಗಿದ್ದರು. ಆದರೆ ಕಳೆದ ಮೂರು ತಿಂಗಳ ಹಿಂದೆ ಲಿವರ್ ಜಾಂಡಿಸ್​ನಿಂದ ಜಿತೇಂದ್ರ ಅವರು ಸಾವನ್ನಪ್ಪಿದ್ದರು. ಬಳಿಕ ಮಂಜುಳಾ ಅವರಿಗೆ ಮನೆಯೊಳಗೆ ಪ್ರವೇಶ ನಿರಾಕರಿಸಲಾಯಿತು. ಅಲ್ಲದೆ ಪತ್ನಿಯೇ ಪತಿಯನ್ನು ಕೊಲೆಗೈದಿದ್ದಾಳೆ ಎಂದು ಆರೋಪಿಸಿ ಜಿತೇಂದ್ರ ಕುಟುಂಬಸ್ಥರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆದರೆ ಆಸ್ತಿ ಭಾಗ ನೀಡಬೇಕಾಗುತ್ತೆಂದು ದೂರು ನೀಡಲಾಗಿದೆ ಎಂದು ಮಂಜುಳಾ ಅವರು ಆರೋಪಿಸಿದ್ದು, ಜಾತಿ ನಿಂದನೆಯ ಆರೋಪವನ್ನು ಕೂಡ ಹೊರಿಸಿದ್ದಾರೆ. ಅದರಂತೆ ಮೃತ ಪತಿ ಜಿತೇಂದ್ರ ಕುಮಾರ್ ಕುಟುಂಬಸ್ಥರ ವಿರುದ್ಧ ಕೂಡ ಪ್ರತಿದೂರು ದಾಖಲಾಗಿದೆ. ಸದ್ಯ ಪತಿಯ ಮನೆ ಬೇಕೆಂದು ಮಂಜುಳಾ ಅವರು ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಧರಣಿ ನಡೆಸುತ್ತಿದ್ದಾರೆ.

ಸಿದ್ದರಾಮೋತ್ಸವಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಪತ್ತೆಹಚ್ಚಿದ್ದಾರೆ. ಆಗಸ್ಟ್ 3ರಂದು 50 ಮಂದಿ ಗ್ರಾಮಸ್ಥರ ಜೊತೆಗೆ ಬಸ್​ ಮೂಲಕ ದಾವಣಗೆರೆಗೆ ತೆರಳಿದ್ದ ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ಗಿರಿಮಲ್ಲ ಖಂಡೇಕರ್ ನಾಪತ್ತೆಯಾಗಿದ್ದನು. ಇದರಿಂದ ಕುಟುಂಬಸ್ಥರು ಕಂಗಾಲಾಗಿದ್ದರು. ಗಿರಿಮಲ್ಲ ಕುಟುಂಬಸ್ಥರಿಗೆ ಸಿದ್ದರಾಮಯ್ಯ ಅವರು ಧೈರ್ಯ ತುಂಬಿದ್ದರು. ಆದರೆ ಈತನನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಪತ್ತೆ ಹಚ್ಚಿದ್ದು, ಗುರುವಾರ ರಾತ್ರಿ ಗಿರಿಮಲ್ಲನನ್ನು ಗ್ರಾಮಸ್ಥರು ಕರೆತಂದಿದ್ದಾರೆ. ಅದರಂತೆ ಗಿರಿಮಲ್ಲ ವಾಪಸ್ ಬಂದಿದ್ದರಿಂದ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.

ಸರಣಿ ಅಪಘಾತದಲ್ಲಿ ಇಬ್ಬರ ದುರ್ಮರಣ

ದಾವಣಗೆರೆ: ಸರಣಿ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿದ ಘಟನೆ ದಾವಣಗೆರೆ ಹೊರವಲಯದ ಕಲ್ಪನಹಳ್ಳಿ ಬಳಿ ನಡೆದಿದೆ. ಶಿಕ್ಷಕಿ ಜ್ಯೋತಿ (43) ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದ್ದರು. ಆದರೆ ಪ್ರವಾಸದಲ್ಲಿದ್ದಾಗಲೇ ಅವರ ಪತಿಗೆ ಹೃದಯಾಘಾತವಾಗಿದೆ. ಪರಿಣಾಮವಾಗಿ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಟ್ರ್ಯಾಕ್ಟರ್ ಹಾಗೂ ಬೈಕ್​ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದ್ದು, ಆ್ಯಂಬುಲೆನ್ಸ್​ನಲ್ಲಿದ್ದ ಜ್ಯೋತಿ ಹಾಗೂ ಬೈಕ್ ಸವಾರ ಮಂಜುನಾಥ್ (68) ಸಾವನ್ನಪ್ಪಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಮೀರನ್ ಅವರಿಗೆ ತೀವ್ರ ಗಾಯಗಳಾಗಿವೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಕೆ.ಎಸ್ ಬಸವಂತಪ್ಪ ಅವರು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.

ಕೊಚ್ಚಿ ಹೋಗಿದ್ದ ಮತ್ತೋರ್ವ ಮಹಿಳೆಯ ಮೃತದೇಹ ಪತ್ತೆ

ಬಳ್ಳಾರಿ: ಕೂಳಗಲ್ ಗ್ರಾಮದ ಎಚ್​​ಎಲ್​ಸಿ ಕಾಲುವೆಯಲ್ಲಿ ಆಟೋ ಪಲ್ಟಿಯಾಗಿದ್ದ ಸಂದರ್ಭದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮತ್ತೋರ್ವ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಮಲ್ಲಮ್ಮನ ಮೃತದೇಹವು ಆಂದ್ರಪ್ರದೇಶದ ಉಂತಕಲ್ ಬಳಿಯ ಎಚ್​ಎಲ್​ಸಿ ಕಾಲುವೆ ಬಳಿ ಪತ್ತೆಯಾಗಿದೆ. ಗುರುವಾರ ಸಂಜೆ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಾಗರತ್ಮಮ್ಮ ಎಂಬವರ ಶವ ಪತ್ತೆಯಾಗಿತ್ತು. ಇಂದು ಮಲ್ಲಮ್ಮನ ಮೃತದೇಹ ಪತ್ತೆಯಾಗುವ ಮೂಲಕ ನೀರಿನಲ್ಲಿ ಕೊಚ್ಚಿದ ಹೋಗಿದ್ದ ಒಟ್ಟು ಐವರ ಶವ ಪತ್ತೆಯಾದಂತಾಗಿದೆ.

ಬುಧವಾರ ಕೊಳಗಲ್ ಗ್ರಾಮದ ಎಚ್​ಎಲ್​ಸಿ ಕಾಲುವೆಗೆ 11 ಮಂದಿ ಪ್ರಯಾಣಿಸುತ್ತಿದ್ದ ಆಟೋ ಪಲ್ಟಿಯಾಗಿತ್ತು. ಘಟನೆಯಲ್ಲಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದು ಆರು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಸದ್ಯ ಐವರ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವ ಮಹಿಳೆ ಶೋಧ ಕಾರ್ಯ ಮುಂದುವರಿದಿದೆ.

105 ಕಳ್ಳರ ಬಂಧನ, 900ಕ್ಕೂ ಹೆಚ್ಚು ಮೊಬೈಲ್​ಗಳು ವಶಕ್ಕೆ

ಬೆಂಗಳೂರು: ಪಶ್ಚಿಮ ವಲಯದ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 105 ಕಳ್ಳರನ್ನು ಬಂಧಿಸಿ ಬರೋಬ್ಬರಿ 928 ಮೊಬೈಲ್​ಗಳ​ನ್ನು ವಶಕ್ಕೆ ಪಡೆಯಲಾಗಿದೆ. ಆ ಮೂಲಕ ಬೆಂಗಳೂರು ಕೇಂದ್ರ ವಿಭಾಗ, ಪಶ್ಚಿಮ ವಿಭಾಗ, ದಕ್ಷಿಣ ವಿಭಾಗ, ಉತ್ತರ ವಿಭಾಗದ ವಿವಿಧ ಠಾಣಾ ವ್ಯಾಪ್ತಿಯ ದಾಖಲಾಗಿದ್ದ ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.

ಮೊಬೈಲ್ ಕಳವು ಪ್ರಕರಣಗಳ ಪತ್ತೆಗೆ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಅದರಂತೆ ಕಳೆದ 1 ತಿಂಗಳ ಅವಧಿಯಲ್ಲಿ 105 ಆರೋಪಿಗಳ ಬಂಧಿಸಲಾಗಿದ್ದು, ಕೇಂದ್ರ ವಿಭಾಗದಲ್ಲಿ 121, ಪಶ್ಚಿಮ ವಿಭಾಗದಲ್ಲಿ 334, ದಕ್ಷಿಣ ವಿಭಾಗದಲ್ಲಿ 342, ಉತ್ತರ ವಿಭಾಗದಲ್ಲಿ 131 ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮೊಬೈಲ್​ಗಳ ಮಾಹಿತಿಯನ್ನ ಪೊಲೀಸ್ ವೆಬ್‌ಸೈಟ್​ನಲ್ಲಿ ಪ್ರಕಟಿಸಲಿದ್ದಾರೆ. ಐಎಂಇಐ ನಂಬರ್ ಪರಿಶೀಲಿಸಿ ಮಾಲೀಕರು ತಮ್ಮ ಮೊಬೈಲ್​ಗಳನ್ನು ವಾಪಾಸ್ ಪಡೆಯಲು ಅವಕಾಶ ನೀಡಲಾಗುತ್ತದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada