ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ( Sukhdev Singh Gogamedi) ಅವರನ್ನು ಜೈಪುರದಲ್ಲಿ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ರಾಜ್ಯಾಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಮಂಗಳವಾರ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಹತ್ಯೆ ಮಾಡಲಾಗಿದೆ. ಸುಖದೇವ್ ಸಿಂಗ್ ಅವರನ್ನು ಶ್ಯಾಮನಗರದಲ್ಲಿರುವ ಅವರ ಮನೆಯ ಹೊರಗೆ ಗುಂಡು ಹಾರಿಸಲಾಗಿದೆ. ಆಗ ಅವರು ಮನೆಯ ಹೊರಗೆ ನಿಂತಿದ್ದರು. ಸ್ಕೂಟರ್‌ನಲ್ಲಿ ಬಂದ ಇಬ್ಬರು ಯುವಕರು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಸುಖದೇವ್ ಸಿಂಗ್ ಅವರಿಗೆ ಎರಡು ಗುಂಡುಗಳು ತಗುಲಿದ್ದವು. ತಕ್ಷಣ ಅವರನ್ನು ಮಾನಸ ಸರೋವರದಲ್ಲಿರುವ ಮೆಟ್ರೋ ಮಾಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಚಿಕಿತ್ಸೆ ಆರಂಭಿಸಿದ್ದು, ಸ್ವಲ್ಪ ಸಮಯದ ನಂತರ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
ಸುಖದೇವ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಇಡೀ ಪೊಲೀಸ್ ಆಡಳಿತದಲ್ಲಿ ಆತಂಕ ಮನೆ ಮಾಡಿದೆ. ಸ್ಥಳೀಯ ಪೊಲೀಸರಲ್ಲದೆ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸುಖದೇವ್ ಸಿಂಗ್ ಗೊಗಮೆಡಿ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಲಾಗಿದೆ. ಶ್ಯಾಮ್ ನಗರದಲ್ಲಿರುವ ಅವರ ನಿವಾಸದ ಮೇಲೆಯೂ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗಿದೆ. ಇದೀಗ ಆಸ್ಪತ್ರೆಯ ಸುತ್ತ ಜನ ಸೇರಿದ್ದು. ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಇನ್ನು ಗುಂಡು ಹಾರಿಸಿದವರು ಯಾರು ಎಂಬ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಖಾಲಿ ಲಿಫ್ಟ್ ಶಾಫ್ಟ್‌ಗೆ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
ಸುಖದೇವ್ ಸಿಂಗ್ ಗೊಗಮೇಡಿ ಅವರು ರಾಷ್ಟ್ರೀಯ ಕರ್ಣಿ ಸೇನೆಯೊಂದಿಗೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದ್ದಾರೆ. ನಂತರ ಇವರೇ ಈ ಸಂಘಟನೆಯಿಂದ ದೂರವಾಗಿ ಪ್ರತ್ಯೇಕ ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯನ್ನು ಕಟ್ಟಿದ್ದಾರೆ. ಪದ್ಮಾವತ್ ಸಿನಿಮಾ ಮತ್ತು ಗ್ಯಾಂಗ್‌ಸ್ಟರ್ ಆನಂದ್‌ಪಾಲ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಇವರ ಹೆಸರು ಕೇಳಿ ಬರುತ್ತಿತ್ತು.
ಸುಖದೇವ್ ಸಿಂಗ್ ಗೊಗಮೇಡಿ ಹತ್ಯೆ ನಂತರ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆ ಮಾಡಿದವರ ಬಗ್ಗೆ ತನಿಖೆ ಮಾಡಲಾಗುವುದು. ಅವರನ್ನು ಪತ್ತೆ ಮಾಡುವ ಕಾರ್ಯಚರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:26 pm, Tue, 5 December 23