ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆ ಭಟ್ಕಳ ತಾಲೂಕಿನ ಹಾಡವಳ್ಳಿ(hadavalli Village) ಬಳಿ ಒಂದೇ ಕುಟುಂಬದ ನಾಲ್ವಾರು ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಭೇದಿಸಲು ಭಟ್ಕಳ ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ 3 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ. ಪ್ರಕರಣ ಭೇದಿಸಲು ಮೂರು ತಂಡ ರಚನೆಯಾಗಿದೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಸಂಸ್ಕಾರದ ಕಡೆ ಗಮನ ಹರಿಸಲಾಗುತ್ತಿದೆ. ಒಂದು ತಂಡ ಈ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ. 3 ತಂಡಗಳು ಆರೋಪಿಗಳ ಪತ್ತೆ ಮತ್ತು ಕೊಲೆಗೆ ಕಾರಣ ತಿಳಿಯಲು ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ಪ್ರಕರಣದ ಹಿಂದೆ ಇರೋ ಎಲ್ಲರನ್ನು ಶೀಘ್ರವಾಗಿ ಬಂಧಿಸಲಾಗುತ್ತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಹಾಡವಳ್ಳಿ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ನಿನ್ನೆ (ಫೆ.24) ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ(murder) ಮಾಡಲಾಗಿತ್ತು. ಕುಟುಂಬದ ಹಿರಿಯ ಶಂಭು ಭಟ್(65) ಶಂಭು ಭಟ್ ಪತ್ನಿ ಮಾದೇವಿ ಭಟ್(40) ಮಗ ರಾಜೀವ್ ಭಟ್(34) ಸೊಸೆ ಕುಸುಮಾ ಭಟ್(30) ಎನ್ನುವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಅದೃಷ್ಟವಶಾತ್ ಕುಸುಮಾ ದಂಪತಿಯ ಮಗು ಬಚಾವ್ ಆಗಿದೆ.
3-4 ತಿಂಗಳ ಹಿಂದಷ್ಟೆ ವಿದ್ಯಾ ಭಟ್ ಪತಿ ನಿಧನರಾಗಿದ್ದರು. ಈ ಮಧ್ಯೆ ಜೀವನಾಂಶ ನೀಡುವಂತೆ ಸೊಸೆ ವಿದ್ಯಾ ಭಟ್ ಬೇಡಿಕೆ ಇಟ್ಟಿದ್ದರು. ಆಸ್ತಿ ವಿಚಾರವಾಗಿ ಗಂಡನ ಕುಟುಂಬದ ಜೊತೆ ವಿದ್ಯಾ ಭಟ್ ಗಲಾಟೆ ಮಾಡಿದ್ದರು ಎನ್ನಲಾಗುತ್ತಿದೆ. ಗಂಡನ ಮನೆಯವರು 6 ಎಕರೆ ಜಮೀನು ಹೊಂದಿದ್ದರು. ಇದರಲ್ಲಿ 1 ಎಕರೆ 9 ಗುಂಟೆ ಭೂಮಿ ನೀಡಿದ್ದರು. ಆದರೆ ಸೊಸೆ ವಿದ್ಯಾ 3 ಎಕರೆ ಜಮೀನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಜಗಳ ನಡೆದಿತ್ತು. ಈ ಹಿನ್ನೆಲೆ ಸೊಸೆ ವಿದ್ಯಾ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬದ ಹಿರಿಯ ಶಂಭು ಭಟ್, ಇವರ ಮೊದಲ ಮಗ ಶ್ರೀಧರ್ ಭಟ್. ಶ್ರೀಧರ್ ಭಟ್ ಜೊತೆ ಪಕ್ಕದ ಊರಿನ ವಿದ್ಯಾ ಭಟ್ ಜೊತೆ ವಿವಾಹವಾಗಿತ್ತು. ಮುಂದೆ ಶ್ರೀಧರ್ ಭಟ್ ಕಿಡ್ನಿ ವೈಫಲ್ಯದಿಂದ ಜ್ವರ ಬಂದು ಸಾವನ್ನಪ್ಪಿದರು. ಪತಿಯ ಸಾವಿಗೆ ಪತ್ನಿ ವಿದ್ಯಾ ಭಟ್ ಕಾರಣ ಎಂದು ಶ್ರೀಧರ್ ಭಟ್ ಸಹೋದರಿಯರಾದ ಜಯಾ ಮತ್ತು ಸುನೀತಾ ಆರೋಪ ಮಾಡಿದ್ದಾರೆ.
ಶ್ರೀಧರ್ ಭಟ್ ಅವರ ಕಿಡ್ನಿ ವೈಫಲ್ಯವಾಗಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪತ್ನಿ ವಿದ್ಯಾ ಆಯುರ್ವೇದ ಚಿಕಿತ್ಸೆ ಕೊಡಿಸುವುದಾಗಿ ಹೇಳಿ, ಗುಣಮುಖವಾಗುವ ಮುಂಚೆಯೇ, ಮನೆಯವರ ಮಾತು ವಿರೋಧಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿದ್ದರು. ಮುಂದೆ ಶ್ರೀಧರಗೆ ಗುಣಮಟ್ಟ ಚಿಕಿತ್ಸೆ ಸಿಗದೆ ಸಾವನ್ನಪ್ಪಿದರು. ಈ ಸಾವಿಗೆ ವಿದ್ಯಾನೇ ಕಾರಣ, ಪತಿ ಸಾಯಲಿ ಎಂದೇ ಈ ರೀತಿ ಮಾಡಿದ್ದಾಳೆ ಎಂದು ಶ್ರೀಧರ ಭಟ್ ಸಹೋದರಿಯರು ಆರೋಪ ಮಾಡಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:50 am, Sat, 25 February 23