ಕೇರಳದ (Kerala) ಪತ್ತನಂತಿಟ್ಟ ಜಿಲ್ಲೆಯ (Pathanamthitta) ಎಲಂತೂರ್ ಗ್ರಾಮದಲ್ಲಿ (Elanthoor) ವಾಮಾಚಾರದ ಭಾಗವಾಗಿ ಇಬ್ಬರು ಮಹಿಳೆಯರನ್ನು ಕೊಂದು ಅವರ ದೇಹದ ಭಾಗಗಳನ್ನು ಕತ್ತರಿಸಿದ ‘ನರಬಲಿ’ (human sacrifice)ಎಂದು ಕರೆಯಲ್ಪಡುವ ಪ್ರಕರಣದ ಇನ್ನಷ್ಟು ಆಘಾತಕಾರಿ ವಿವರಗಳು ಮುನ್ನೆಲೆಗೆ ಬಂದಿವೆ. ಈ ಸಂಬಂಧ ದಂಪತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಗಳನ್ನು ಸ್ಥಳೀಯ ಮಸಾಜ್ ಥೆರಪಿಸ್ಟ್ ಭಗವಲ್ ಸಿಂಗ್ ಅವರ ಪತ್ನಿ ಲೈಲಾ ಎಂದು ಗುರುತಿಸಿದ್ದು ಇಬ್ಬರೂ ಪತ್ತನಂತಿಟ್ಟದ ಸ್ಥಳೀಯರು. ಇನ್ನೊಬ್ಬ ಆರೋಪಿ ರಶೀದ್ ಅಲಿಯಾಸ್ ಮುಹಮ್ಮದ್ ಶಾಫಿ. ಬುಧವಾರ ಎರ್ನಾಕುಲಂ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಮೂವರು ಆರೋಪಿಗಳನ್ನು ಅಕ್ಟೋಬರ್ 26 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇಬ್ಬರು ಮೃತರನ್ನು ಪದ್ಮಾ ಮತ್ತು ರೋಸ್ಲಿನ್ ಎಂದು ಗುರುತಿಸಲಾಗಿದೆ. ದಿನ ನಿತ್ಯದ ಬದುಕು ಸಾಗಿಸಲು ಈ ಮಹಿಳೆಯರು ಬೀದಿಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ದಂಪತಿಗಳ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಜೀವನದಲ್ಲಿ ಸಮೃದ್ಧಿಯನ್ನು ತರಲು ಆರೋಪಿಗಳು ನರಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯಾನಕ ಮಾಹಿತಿ ಬಹಿರಂಗ
ಮಂಗಳವಾರ ಪತ್ತನಂತಿಟ್ಟದ ದಂಪತಿಗಳ ಮನೆಯ ಆವರಣದಿಂದ ಮೃತರ ಕತ್ತರಿಸಿದ ದೇಹದ ಭಾಗಗಳನ್ನು ಹೊರತೆಗೆಯಲಾಯಿತು. ಮಾನವ ದೇಹದ ಭಾಗಗಳನ್ನು ಬೇಯಿಸಿ ತಿಂದರೆ ಯೌವನ ಕಾಪಾಡಬಹುದು ಎಂದು ಆರೋಪಿ ದಂಪತಿಗೆ ಮೂರನೇ ಆರೋಪಿ ಹೇಳಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ವಾಮಾಚಾರದ ಭಾಗವಾಗಿ ‘ನರಬಲಿ’ ನೀಡಿ ಮೃತರ ಮಾಂಸವನ್ನು ಬೇಯಿಸಿ ತಿನ್ನಲಾಗಿದೆ ಎಂಬ ಭಯಾನಕ ವಿವರಗಳನ್ನು ಲೈಲಾ ಸಾಕ್ಷ್ಯ ನೀಡಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ರೋಸ್ಲಿನ್ ಅವರ ಮುಂಭಾಗದ ಪಕ್ಕೆಲುಬಿನ ಮಾಂಸವನ್ನು ಕತ್ತರಿಸಲಾಗಿತ್ತು. ಅಂದಹಾಗೆ ‘ನರಬಲಿ’ಯ ಮಾಸ್ಟರ್‌ಮೈಂಡ್ ಶಾಫಿಯೇ. ಮಾನವ ದೇಹದ ಅಂಗಾಂಗಗಳನ್ನು ಬೇಯಿಸಿ ತಿಂದರೆ ಯೌವನ ಕಾಪಾಡಬಹುದು ಎಂದು ಭಗವಲ್ ಸಿಂಗ್ ಮತ್ತು ಲೈಲಾ ಅವರಿಗೆ ಈತನೇ ಸಲಹೆ ನೀಡಿದ್ದು. ಶಾಫಿ ರಕ್ತ ಮತ್ತು ವಿರೂಪಗೊಳಿಸುವ ಕ್ರಿಯೆಯನ್ನು ನೋಡುವಾಗ ಉನ್ಮಾದ ಪಡೆಯುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಲೈಲಾಗೆ ಈ ಬಗ್ಗೆ ಯಾವುದೇ ಮರುಕವಿಲ್ಲ. ‘ನರಬಲಿ ಆಚರಣೆ’ ಅವರನ್ನು ಶೀಘ್ರದಲ್ಲೇ ಶ್ರೀಮಂತರನ್ನಾಗಿ ಮಾಡುತ್ತದೆ ಎಂದು ಅವರು ಇನ್ನೂ ನಿರೀಕ್ಷಿಸುತ್ತಿದ್ದಾರೆ ಎಂದು ತನಿಖೆಯ ಗೌಪ್ಯ ಮೂಲಗಳು ಹೇಳಿವೆ.
ಪೊಲೀಸರ ಪ್ರಕಾರ ಹತ್ಯೆಯಾದವರು ಸುಮಾರು 50 ರ ಆಸುಪಾಸಿನವರು ಎಂದು ಹೇಳಲಾಗಿದ್ದು, ಕೊಚ್ಚಿಯ ಕಡವಂತರಾ ಮತ್ತು ಸಮೀಪದ ಕಾಲಡಿ ನಿವಾಸಿಗಳು. ಈ ವರ್ಷದ ಸೆಪ್ಟೆಂಬರ್ ಮತ್ತು ಜೂನ್‌ನಲ್ಲಿ ಮಹಿಳೆಯರು ನಾಪತ್ತೆಯಾಗಿದ್ದರು ಅವರ ಮೊಬೈಲ್ ಫೋನ್ ವಿವರಗಳು ಮತ್ತು ಟವರ್ ಸ್ಥಳಗಳನ್ನು ಆಧರಿಸಿ ಅಂತಿಮವಾಗಿ ತನಿಖೆಯು ‘ನರಬಲಿ’ಯ ಕಥೆಯನ್ನು ಬಿಚ್ಚಿಟ್ಟಿದೆ. ನಾಪತ್ತೆಯಾದ ಮೊದಲ ಮಹಿಳೆ ಕಾಲಡಿ ಮೂಲದವರಾಗಿದ್ದು, ಸ್ವಲ್ಪ ಸಮಯದಿಂದ ತನ್ನ ಸಂಗಾತಿಯೊಂದಿಗೆ ವಾಸಿಸುತ್ತಿದ್ದರು. ಆಗಸ್ಟ್ 17 ರಂದು ಅವರ ಮಗಳು ಅಮ್ಮ ಕಾಣೆಯಾಗಿದ್ದಾರೆ ಎಂದು ದೂರನ್ನು ದಾಖಲಿಸಿದ್ದಾರೆ.
ತಮಿಳುನಾಡಿನ ಧರ್ಮಪುರಿ ಮೂಲದ ಮತ್ತೋರ್ವ ಮಹಿಳೆ ಆಗಸ್ಟ್ 17 ರಂದು ನಾಪತ್ತೆಯಾಗಿದ್ದರು ಎಂದು ಆಕೆಯ ಸಹೋದರಿ ದೂರಿದ್ದರು. ಎಲಂತೂರಿನಲ್ಲಿ ಎರಡು ಸ್ಥಳಗಳಲ್ಲಿ ಹೂಳುವ ಮೊದಲು ಮೃತದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಯಿತು ಎಂದು ಆರೋಪಿಗಳ ತಪ್ಪೊಪ್ಪಿಗೆಯನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಇದು ಏಕೈಕ ಪ್ರಕರಣವೇನೂ ಅಲ್ಲ
ಬಂಧಿತರಲ್ಲಿ ಒಬ್ಬನಾದ ಭಗವಲ್ ಸಿಂಗ್ ಸಾಂಪ್ರದಾಯಿಕ ಮಸಾಜ್ ಥೆರಪಿಸ್ಟ್ ಮತ್ತು ಹೀಲರ್. ಆತನ ಪತ್ನಿಯೇ ಲೈಲಾ. ಅವರಿಬ್ಬರೂ ತಿರುವಲ್ಲಾ ಮೂಲದವರಾಗಿದ್ದರು. ಪೆರುಂಬವೂರು ಮೂಲದ ರಶೀದ್ ಅಲಿಯಾಸ್ ಮುಹಮ್ಮಂದ್ ಶಾಫಿ ಎಂಬಾತ, ಮಹಿಳೆಯರಿಗೆ ಆಮಿಷವೊಡ್ಡಿ ದಂಪತಿಯ ಮನೆಗೆ ಕರೆತಂದಿದ್ದಾನೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲೇ ನರಬಲಿ ನಡೆದಿತ್ತು.ಕಡವಂತರಾದಿಂದ ಕಾಣೆಯಾದ ಮಹಿಳೆಗೆ ಸಂಬಂಧಿಸಿದಂತೆ ನಾವು ತನಿಖೆ ನಡೆಸಿದಾಗ, ಆಕೆಯನ್ನು ತಿರುವಲ್ಲಾದ ಆ ದಂಪತಿಯ ಮನೆಯಲ್ಲಿ ಕೊಂದು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಹೂಳಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಆ ದಂಪತಿ ಆರ್ಥಿಕ ಲಾಭಕ್ಕಾಗಿ ನರಬಲಿ ನೀಡಿದ್ದಾರೆ ಎಂದು ಕೊಚ್ಚಿ ನಗರ ಪೊಲೀಸ್ ಕಮಿಷನರ್ ನಾಗರಾಜು ಚಕಿಲಂ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಹೆಚ್ಚಿನ ವಿಚಾರಣೆ ನಡೆಸಿದಾಗ ಇಂದು ಏಕೈಕ ಪ್ರಕರಣವಲ್ಲ, ಆದರೆ ಜೂನ್‌ನಲ್ಲಿ ಅದೇ ಮನೆಯಲ್ಲಿ ಇನ್ನೊಬ್ಬ ಮಹಿಳೆಯನ್ನು ಸಹ ಬಲಿಕೊಡಲಾಗಿದೆ ಎಂದು ತಿಳಿದುಬಂದಿದೆ.
“ಅದು ಅದೇ ಮನೆಯಲ್ಲಿ ಅದೇ ದಂಪತಿಗಳು ನರಬಲಿ ನೀಡಿದ್ದು,ಮಹಿಳೆಯನ್ನು ಅದೇ ವ್ಯಕ್ತಿ ಕರೆತಂದರು. ಮೂರನೆಯ ವ್ಯಕ್ತಿಯು ಈ ಎರಡೂ ಸಂದರ್ಭಗಳಲ್ಲಿ ಏಜೆಂಟ್ ಪಾತ್ರವನ್ನು ನಿರ್ವಹಿಸಿದ್ದಲ್ಲದೆ, ಇದನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಈ ರೀತಿ ಮಾಡಬೇಕು ಎಂದು ದಂಪತಿಗೆ ಹೇಳಿಕೊಟ್ಟಿದ್ದ” ಎಂದು ಹೇಳಿದ ಅವರು, ಶವಗಳನ್ನು ತುಂಡು ಮಾಡಿ ಹೂತು ಹಾಕಿದ್ದರಿಂದ ಒಂದೇ ಆಕಾರದಲ್ಲಿ ಇರಲಿಲ್ಲ.
ಮೇಲ್ನೋಟಕ್ಕೆ, ಇದು ಮಾಟಮಂತ್ರ ಮತ್ತು ನರಬಲಿ ಮೂಲಕ ಹಣಕಾಸಿನ ಲಾಭಕ್ಕಾಗಿ ಕೊಲೆ ಪ್ರಕರಣವಾಗಿದೆ. ಪೊಲೀಸರು ಎಲ್ಲಾ ಅಂಶಗಳನ್ನು ಮತ್ತು ವಿವರಗಳನ್ನು ಪರಿಶೀಲಿಸುತ್ತಾರೆ, ”ಎಂದು ಅವರು ಹೇಳಿದರು. ಆರ್ಥಿಕವಾಗಿ ಹಿಂದುಳಿದ ಇಬ್ಬರೂ ಮಹಿಳೆಯರನ್ನು ಪೋರ್ನ್ ಚಿತ್ರಗಳಲ್ಲಿ ನಟಿಸುವ ನೆಪದಲ್ಲಿ ರಶೀದ್ ಆಮಿಷವೊಡ್ಡಿದ್ದಾರೆ ಮತ್ತು ಅವರಿಗೆ ಭಾರಿ ಮೊತ್ತವನ್ನು ಸಂಭಾವನೆ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಕೆಲವು ವರದಿಗಳು ಹೇಳಿಕೊಂಡಿದ್ದರೂ, ಪೊಲೀಸರು ಇದನ್ನು ಇನ್ನೂ ಖಚಿತಪಡಿಸಿಲ್ಲ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಶೀದ್, ಆ ದಂಪತಿ ಅವರ ಹಳ್ಳಿಯ ಮನೆಗೆ ಸಂತ್ರಸ್ತರನ್ನು ಹೇಗೆ ಕರೆತಂದರು ಎಂಬುದು ಮತ್ತೊಂದು ಕಥೆ. “ಈ ಪ್ರಕರಣವು ತನಿಖೆಗೆ ಹಲವಾರು ಆಯಾಮಗಳನ್ನು ಹೊಂದಿದೆ. ಅವರನ್ನು ಅಪರಾಧದ ಸ್ಥಳಕ್ಕೆ ಹೇಗೆ ಕರೆತರಲಾಯಿತು ಎಂಬುದು ಸ್ವಲ್ಪ ಅನೈತಿಕ ಕೋನವನ್ನು ಹೊಂದಿದೆ ಎಂದು ಅವರು ಹೇಳಿದರು.
ಅಸ್ವಸ್ಥ ಮನಸ್ಥಿತಿ ಇರುವವರು ಮಾತ್ರ ಇಂತಹ ಅಪರಾಧಗಳನ್ನು ಮಾಡುತ್ತಾರೆ: ಪಿಣರಾಯಿ
ಹತ್ಯೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಸ್ವಸ್ಥ ಮನಸ್ಥಿತಿ ಹೊಂದಿರುವವರು ಮಾತ್ರ ಇಂತಹ ಅಪರಾಧಗಳನ್ನು ಮಾಡಲು ಸಾಧ್ಯ ಎಂದು ಬುಧವಾರ ಹೇಳಿದ್ದಾರೆ. ಮಾಟಮಂತ್ರ ಮತ್ತು ವಾಮಾಚಾರದ ಆಚರಣೆಗಳನ್ನು ನಾಗರಿಕ ಸಮಾಜಕ್ಕೆ ಸವಾಲಾಗಿ ನೋಡಬೇಕಿದೆ ಎಂದು ಅವರು ಹೇಳಿದ್ದಾರೆ
ನರಬಲಿ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಪತ್ತನಂತಿಟ್ಟ ಜಿಲ್ಲೆಯ ಎಲಂತೂರ್‌ನಲ್ಲಿ ನಡೆದ ನರಬಲಿ ಪ್ರಕರಣದ ಬಗ್ಗೆ ಕೇಳಿ ಆಘಾತ ಮತ್ತು ದುಃಖವಾಯಿತು. ಆಚರಣೆಗಳ ಹೆಸರಿನಲ್ಲಿ ಇಂತಹ ಕ್ರೌರ್ಯವನ್ನು ಆಧುನಿಕ, ಸುಸಂಸ್ಕೃತ ಸಮಾಜದಲ್ಲಿ ಯೋಚಿಸಲು ಸಾಧ್ಯವಿಲ್ಲ. ಅಪರಾಧಿಗಳನ್ನು ಶೀಘ್ರದಲ್ಲಿಯೇ ಬಂಧಿಸುವುದನ್ನು ನೋಡಲು ಆಶಿಸುತ್ತೇನೆ ಎಂದು ಅವರು ಹೇಳಿದ್ದಾರೆ.
Published On - 2:06 pm, Wed, 12 October 22