Onam: ವಿಶೇಷ ಕಾರ್ಯಾಚರಣೆ ಮೂಲಕ 168 ಮಂದಿಯನ್ನು ಬಂಧಿಸಿದ ಅಬಕಾರಿ ಇಲಾಖೆ
ಓಣಂ ಹಬ್ಬದ ಹಿನ್ನೆಲೆ ಕೇರಳದ ಅಬಕಾರಿ ಇಲಾಖೆಯು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ 168 ಮಂದಿಯನ್ನು ಬಂಧಿಸಿದೆ. ಇದೇ ವೇಳೆ ಅಪಾರ ಪ್ರಮಾಣದಲ್ಲಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕೊಚ್ಚಿ: ಕೇರಳದಲ್ಲಿ ಓಣಂ ಹಬ್ಬದ ಭರ್ಜರಿ ತಯಾರಿಗಳು ನಡೆಯುತ್ತಿದ್ದು, ಆಗಸ್ಟ್ 30ರಿಂದ ಸೆಪ್ಟೆಂಬರ್ 8ರ ವರೆಗೆ ರಾಜ್ಯಾದ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಈ ನಡುವೆ ಮಾದಕವಸ್ತುಗಳ ಸಮರ ಸಾರಿದ ರಾಜ್ಯ ಅಬಕಾರಿ ಇಲಾಖೆ, 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 168 ಮಂದಿಯನ್ನು ಬಂಧಿಸಿ ಅಪಾರ ಪ್ರಮಾಣದಲ್ಲಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಓಣಂ ಹಬ್ಬದ ಪ್ರಯುಕ್ತ ಆಗಸ್ಟ್ 5 ರಂದು ಅಬಕಾರಿ ಇಲಾಖೆಯ ಅಧಿಕಾರಿಗಳು ವಿವಿಧ ಕಡೆಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಈ ವೇಳೆ ಸುಮಾರು 360 ಲೀಟರ್ ಸ್ಪಿರಿಟ್, 96 ಲೀಟರ್ ಅರಕ್, 221 ಲೀಟರ್ ಭಾರತೀಯ ನಿರ್ಮಿತ ವಿದೇಶಿ ಮದ್ಯ, 44 ಲೀಟರ್ ಬಿಯರ್, 15 ಕೆ.ಜಿ. ಗಾಂಜಾ, 2 ಗಾಂಜಾ ಗಿಡಗಳು, 16 ಗ್ರಾಂ ಎಂಡಿಎಂಎ, 57 ಗ್ರಾಂ ಹೆರಾಯಿನ್ ಮತ್ತು 74 ಕೆಜಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ಕಾರ್ಯಾಚರಣೆ ವೇಳೆ 73 ಅಬ್ಕಾರಿ ಪ್ರಕರಣಗಳು, 60 NDPS ಆಕ್ಟ್ ಮತ್ತು COPTA ಆಕ್ಟ್ ಅಡಿ 416 ಪ್ರಕರಣಗಳನ್ನು ದಾಖಲಿಸಿ ಒಟ್ಟು 168 ಮಂದಿಯನ್ನು ಬಂಧಿಸಲಾಗಿದೆ.
ಕಚೇರಿಪ್ಪಾಡಿ ಮೂಲದ ಅಬಕಾರಿ ವಿಭಾಗದ ಕಚೇರಿಯಲ್ಲಿ 24 ಗಂಟೆ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಜಿಲ್ಲೆಯನ್ನು ಎರಡು ಘಟಕಗಳಾಗಿ ವಿಭಜಿಸಿ ವಿಶೇಷ ಸ್ಟ್ರೈಕಿಂಗ್ ಫೋರ್ಸ್ ಕೂಡ ರಚಿಸಲಾಗಿದೆ. ಅಲ್ಲದೆ ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:48 am, Sat, 27 August 22