Crime News: ಒತ್ತೆಹಣಕ್ಕಾಗಿ ಬೇಡಿಕೆಯಿಟ್ಟಿದ್ದವರ ಬಂಧನ, ಟ್ರ್ಯಾಕ್ಟರ್​ನಿಂದ ಕಬ್ಬು ಕೀಳಲು ಹೋದ ಬಾಲಕನ ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 19, 2022 | 10:57 PM

ಮನೆ ಮಾರಿ ಹಣ ಕೊಡಲು ಪತ್ರಕ್ಕೆ ಗಂಡನ ಸಹಿಯನ್ನು ಪತ್ನಿ ಕೇಳಿದ್ದರು. ಸಹಿ ಮಾಡಲು ಕೋರಮಂಗಲ ಬಳಿ ಕರೆತಂದಾಗ ಆರೋಪಿಗಳನ್ನು ಪೊಲೀಸರು ಪೊಲೀಸರು ಬಂಧಿಸಿದರು.

Crime News: ಒತ್ತೆಹಣಕ್ಕಾಗಿ ಬೇಡಿಕೆಯಿಟ್ಟಿದ್ದವರ ಬಂಧನ, ಟ್ರ್ಯಾಕ್ಟರ್​ನಿಂದ ಕಬ್ಬು ಕೀಳಲು ಹೋದ ಬಾಲಕನ ಸಾವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವ್ಯಕ್ತಿಯನ್ನು ಅಪಹರಿಸಿದ್ದ ಮೂವರು ಅಪಹರಣಕಾರರನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಶಾಂತ್ (25), ಸಂತೋಷ್ (24), ನವೀನ್ (23) ಬಂಧಿತರು. ಕುರುಡುಸೊಣ್ಣೇನಹಳ್ಳಿಯ ಅಲೆಗ್ಸಾಂಡರ್​ನನ್ನು ಇವರು ಅಪಹರಿಸಿದ್ದರು. ₹ 3 ಲಕ್ಷ ಒತ್ತೆ ಹಣ ಪಡೆದಿದ್ದ ಆರೋಪಿಗಳು ಮತ್ತೂ ಐದು ಲಕ್ಷ ರೂಪಾಯಿ ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದರು. ಮನೆ ಮಾರಿ ಹಣ ಕೊಡಲು ಪತ್ರಕ್ಕೆ ಗಂಡನ ಸಹಿಯನ್ನು ಪತ್ನಿ ಕೇಳಿದ್ದರು. ಸಹಿ ಮಾಡಲು ಕೋರಮಂಗಲ ಬಳಿ ಕರೆತಂದಾಗ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಅಲೆಗ್ಸಾಂಡರ್​ನನ್ನು ರಕ್ಷಿಸಿದರು. ಆವಲಹಳ್ಳಿ ಇನ್​ಸ್ಪೆಕ್ಟರ್ ಡಿ.ಆರ್.ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಯಿತು.

ಚಿರತೆ ಚರ್ಮ, ಕರಡಿ ಚರ್ಮ ಮಾರಾಟಕ್ಕೆ ಯತ್ನ

ಹೊಸಪೇಟೆ: ಚಿರತೆ ಚರ್ಮ, ಚಿರತೆ ಕಳೆಬರ ಮತ್ತು ಕರಡಿ ಚರ್ಮ ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಿರಬಿ ಅರಣ್ಯ ಪ್ರದೇಶದ ಅಂಚಿನ ಬೇಲಿಗೆ ವಿದ್ಯುತ್ ಹರಿಸಿ ಪ್ರಾಣಿಗಳನ್ನು ಆರೋಪಿಗಳು ಹತ್ಯೆ ಮಾಡುತ್ತಿದ್ದರು. ಬಂಧಿತರಿಂದ ಮೃತ ಮರಿ ಚಿರತೆ,. ಚಿರತೆ ಚರ್ಮ, ಎಲುಬುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಸೂಕ್ತ ಚಿಕಿತ್ಸೆ ಸಿಗದೆ ರೋಗಿ ಸಾವು

ಬಳ್ಳಾರಿ: ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ರೋಗಿ ಸಾವನ್ನಪ್ಪಿದ ಘಟನೆ ಸಿರುಗುಪ್ಪ ತಾಲ್ಲೂಕು ರಾರಾವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಹೃದಯಾಘಾತ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗಿದ್ದ ರೈತ ತಿಕ್ಕಪ್ಪ ಅವರಿಗೆ ವೈದ್ಯರು ಕ್ವಾರ್ಟರ್ಸ್‌ನಲ್ಲೇ ಇದ್ದರೂ ತುರ್ತಾಗಿ ಪ್ರಾಥಮಿಕ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪ ಮಾಡಲಾಗಿದೆ. ವ್ಯಕ್ತಿ ಮೃತಪಟ್ಟ ಬಳಿಕ ಬಂದು ವೈದ್ಯರು ತಪಾಸಣೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

ಕಬ್ಬು ಕೀಳಲು ಹೋದ ಬಾಲಕ ದುರ್ಮರಣ

ಬೆಳಗಾವಿ: ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಕಬ್ಬು ಕಿತ್ತುಕೊಳ್ಳಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದ 8 ವರ್ಷದ ಬಾಲಕ ಅನಿಲ್ ಹಣಬರ್ ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಬಾಲಕ ನರಳಾಡುವ ದೃಶ್ಯವನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿರುವ ಕೆಲವರು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಅಮಟೂರು ಗ್ರಾಮದಲ್ಲಿ ನಿನ್ನೆ (ಫೆ.18) ಸಂಜೆ ಈ ಘಟನೆ ನಡೆದಿದೆ.

ಉರುಳಿದ ಕಾರು: ಚಾಲಕನಿಗೆ ಬಂದ್

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕು ಕೃಷ್ಣಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯಲ್ಲೇ ಉರುಳಿ ಬಿದ್ದ ಘಟನೆ ನಡೆದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿದ್ದಾನೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವೇಗವಾಗಿ ಬಂದ ಜೆನ್ ಕಾರು ರಸ್ತೆ ಬದಿ ನಿಂತಿದ್ದ ಇನೋವಾ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಎರಡೂ ಕಾರುಗಳು ಬಹುತೇಕ ಜಖಂ ಆಗಿವೆ.

ಬೈಕ್ ವ್ಹೀಲಿಂಗ್​ ಮಾಡುತ್ತಿದ್ದ ಯುವಕನ ಬಂಧನ

ಬೆಂಗಳೂರು: ನಗರದಲ್ಲಿ ಬೈಕ್ ವ್ಹೀಲಿಂಗ್​ ಮಾಡುತ್ತಿದ್ದ ಯುವಕನನ್ನು ಆರ್.ಟಿ.ನಗರ ಸಂಚಾರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಜಯ್ (20) ಎಂದು ಗುರುತಿಸಲಾಗಿದೆ. ಸಿಬಿಐ ಎದುರಿನ ಮೇಲ್ಸೇತುವೆಯಲ್ಲಿ ವ್ಹೀಲಿಂಗ್​ ಮಾಡುತ್ತಿದ್ದಾಗ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿ ಆತ್ಮಹತ್ಯೆ

ಬಳ್ಳಾರಿ: ಪೋಷಕರು ಮೊಬೈಲ್‌ ಕೊಡಿಸದ ಕಾರಣ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜ್‌ (17) ಆತ್ಮಹತ್ಯೆಗೆ ಶರಣಾದವರು. ವಿದ್ಯಾರ್ಥಿ ಪ್ರಥಮ ಪಿಯುಸಿ ಓದುತ್ತಿದ್ದ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.