ಕೊಡಗು: ಮಗನನ್ನೇ ಹೊಡೆದು ಕೊಂದ ತಂದೆ; ಕಣ್ಣೀರು ಹಾಕುತ್ತಿರುವ ತಾಯಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 20, 2023 | 12:35 PM

ಅಪ್ಪ ಅಂದರೆ ಅದೊಂದು ಸುಂದರ ಅನುಭೂತಿ, ಅದೊಂದು ಅದ್ಭುತ ಪ್ರಪಂಚ. ತನ್ನ ಕಷ್ಟಗಳು ಮಕ್ಕಳಿಗೆ ಗೊತ್ತಾಗದಿರಲಿ ಅಂತ ಪರಿತಪಿಸುತ್ತಾ ಪಡುವ ಕಷ್ಟ ಅಷ್ಟಿಷ್ಟಲ್ಲ. ಆದ್ರೆ ಅದೇ ಅಪ್ಪ ತನ್ನ ರಕ್ತ ಹಂಚಿ ಹುಟ್ಟಿದ ಮಗನನ್ನ ಗುಂಡು ಹೊಡೆದು ಕೊಂದಿದ್ದಾನೆ.

ಕೊಡಗು: ಮಗನನ್ನೇ ಹೊಡೆದು ಕೊಂದ ತಂದೆ; ಕಣ್ಣೀರು ಹಾಕುತ್ತಿರುವ ತಾಯಿ
ಕೊಡಗಿನಲ್ಲಿ ಮಗನನ್ನೇ ಹೊಡೆದು ಕೊಂದ ತಂದೆ
Follow us on

ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ನಿರನ್​ ಇಂದು(ಫೆ.19) ಸಂಜೆ ತನ್ನ ಅಪ್ಪನಿಂದಲೇ ಹೆಣವಾಗಿ ಹೋಗಿದ್ದಾನೆ. ಸಂಜೆ ನಾಲ್ಕು ಗಂಟೆಗೆ ಸೋಫಾದಲ್ಲಿ ಮಲಗಿ ಟಿವಿ ನೋಡುತ್ತಿದ್ದ ಮಗನ ಮೇಲೆ ಅಪ್ಪ ಚಿಟ್ಟಿಯಪ್ಪ ಕೋವಿ ತಂದು ಗುಂಡು ಹೊಡೆದು ಬಿಟ್ಟಿದ್ದಾರೆ, ಕ್ಷಣಮಾತ್ರದಲ್ಲಿ ನಿರನ್ ರಕ್ತದೋಕುಳಿಯಲ್ಲಿ ಮುಳುಗಿ ಹೋಗಿದ್ದಾನೆ. ಅಮ್ಮಾ ಅಮ್ಮಾ ಅಂತ ಕರೆದಿದ್ದಾನೆ. ಕುಡಿಯಲು ನೀರು ಕೇಳಿದ್ದಾನೆ. ಓಡೋಡಿ ಬಂದ ಅಮ್ಮ ಪೊನ್ನವ್ವ ಎದೆ ಒಡೆದುಕೊಂಡೇ ಮಗನಿಗೆ ಎರಡು ಗುಡಕು ನೀರು ಕುಡಿಸಿದ್ದಾರೆ ಅಷ್ಟೆ. ಮಗನ ಪ್ರಾಣ ಪಕ್ಷಿ ಅವರ ಮಡಿಲ್ಲಲೇ ಹಾರಿ ಹೋಗಿದೆ.

ಅಷ್ಟಕ್ಕೂ ಈ ಕಟುಕ ಕಠೋರ ಅಪ್ಪನ ಹೆಸರು ಚಿಟ್ಟಿಯಪ್ಪ 67 ವರ್ಷದ ನಿವೃತ್ತ ಸೈನಿಕನಾಗಿರುವ ಈತ ಸಾಕಷ್ಟು ಸ್ಥಿತಿವಂತ. 16 ಎಕರೆ ಕಾಫಿ ತೋಟದ ಮಾಲಿಕ, ಈತನಿಗೆ ಇಬ್ಬರು ಅವಳಿ ಜವಳಿ ಮಕ್ಕಳು ಇದ್ದಾರೆ. ಮೊದಲ ಮಗ ಜೋಯಪ್ಪ ವಿವಾಹವಾಗಿ ಕೇರಳದಲ್ಲಿ ಉದ್ಯೋಗದಲ್ಲಿದ್ದ. ಎರಡನೇ ಮಗ ನಿರನ್ ತೋಟ ನೋಡಿಕೊಂಡು ತಂದೆಯ ಜತೆಯಲ್ಲೇ ಇದ್ದ. ಆಸ್ತಿಯೂ ಪಾಲಾಗಿತ್ತು. ಇಬ್ಬರೂ ಪುತ್ರರು ಪ್ರತಿ ತಿಂಗಳು ಅಪ್ಪನಿಗೆ ತಲಾ 2000 ರೂ ಜೀವನಾಶ ನೀಡಬೇಕಿತ್ತಂತೆ. ಆದ್ರೆ ಎರಡನೇ ಮಗ ನಿರನ್ ಈ ತಿಂಗಳು ನೀಡಿರಲಿಲ್ಲ ಎನ್ನಲಾಗಿದೆ.

ಇದೇ ವಿಷಯದಲ್ಲಿ ಹಲವು ದಿನಗಳಿಂದ ಇಬ್ಬರ ಮಧ್ಯೆ ಭಾರೀ ಜಗಳವಾಗುತ್ತಿಂತೆ. ಆದರೆ ಈ ದಿನ ಸಂಜೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳದ ಸಂದರ್ಭ ಏನಾಯ್ತೋ ಗೊತ್ತಿಲ್ಲ ಅಪ್ಪ ಚಿಟ್ಟಿಯಪ್ಪ ಕೋವಿ ತಂದಿದ್ದಾನೆ. ಮಗ ನಿರನ್ ಅದನ್ನ ಗಂಭೀರವಾಗಿ ಪರಿಗಣಿಸಿಲ್ಲ. ಜೀವ ನೀಡಿದ ಅಪ್ಪ ಗುಂಡು ಹೊಡೆಯಲ್ಲ ಅನ್ನೋ ವಿಶ್ವಾಸವೋ ಏನೋ. ಏನ್ಮಾಡ್ತೀಯೋ ಮಾಡ್ಕೋ ಅಂದಿದ್ದಾನಂತೆ. ಅಪ್ಪಾ ಟ್ರಿಗರ್ ಒತ್ತೇ ಬಿಟ್ಟಿದ್ದಾನೆ. ಮಗ ನಿರನ್​ ಸೋಫಾದಲ್ಲೇ ಕೊನೆಯುಸಿರು ಎಳೆದಿದ್ದಾನೆ. ಹಾಗೆ ನೋಡಿದ್ರೆ ನಿರನ್ ಬಹಳ ಒಳ್ಳೆಯ ಹುಡುಗ ಒಳ್ಳೆ ಕ್ರೀಡಾ ಪಟು. ಅಥ್ಲೇಟಿಕ್ಸ್​ನಲ್ಲಿ ರಾಜ್ಯಮಟ್ಟದಲ್ಲಿ ಖ್ಯಾತಿ ಗಳಿಸಿದ್ದ. ಒಳ್ಳೆಯ ಹಾಖಿಪಟು ಕೂಡ ಹೌದು, ಆದ್ರೆ ಆತನನ್ನ ಕೊಲ್ಲುವಂತಹ ಪಾಪ ಆತ ಏನೂ ಮಾಡಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ:ಕೊಡಗು: ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿಯ ಸೆರೆ; ನಿಟ್ಟುಸಿರು ಬಿಟ್ಟ ಜನರು

ಏನೇ ಆಗಲಿ ಕ್ಷುಲ್ಲಕ ಕಾರಣ ಮತ್ತು ಕ್ಷಣ ಮಾತ್ರದ ಕೋಪಕ್ಕೆ ಅನ್ಯಾಯವಾಗಿ ಒಂದು ಜೀವ ಬಲಿಯಾಗಿ ಹೋಗಿದೆ. ಯೋಧ ಅಂತ ಹೆಸರು ಗಳಿಸಿದ್ದವನೇ ತನ್ನ ಮಗನ ಕಥೆ ಮುಗಿಸಿ ಅತ್ತ ಇಳಿ ವಯಸ್ಸಲ್ಲಿ ಜೈಲು ಸೇರಿದ್ದಾನೆ. ಇತ್ತ ವೃದ್ಧ ತಾಯಿ ಏಕಾಂಗಿಯಾಗಿದ್ದಾರೆ. ಇಡೀ ಗ್ರಾಮ ಗರಬಡಿದಂತಾಗಿದೆ. ಅಪ್ಪ ಅನ್ನೋ ಹೆಸರಿಗೆ ಈ ರೀತಿಯೂ ಕಳಂಕ ತರಬಹುದಾ ಅಂತ ಜನರು ಮರುಗುವಂತಾಗಿದೆ.

ವರದಿ: ಗೋಪಾಲ್ ಸೋಮಯ್ಯ ಟಿವಿ9 ಕೊಡಗು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ