ಕೊಡಗು, (ಏಪ್ರಿಲ್ 03): ಬಿಜೆಪಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆಜಿ ಬೋಪಯ್ಯ ಸೇರಿದಂತೆ ಇತರೆ ನಾಯಕರ ಪರ್ಸ್ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮೊನ್ನೆ ಅಷ್ಟೇ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಕುಶಾಲನಗರದಲ್ಲಿ(Kushalnagar) ನಡೆದಿದ್ದ ಬಿಜೆಪಿ ಪ್ರಚಾರದ ಸಮಾವೇಶದಲ್ಲಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆಜಿ ಬೋಪಯ್ಯ ಸೇರಿದಂತೆ ಇತರೆ ನಾಯಕರ ಪರ್ಸ್ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡು ಕಾರ್ಯಚರಣೆಗಿಳಿದಿದ್ದ ಕೊಡಗು ಜಿಲ್ಲಾ ಪೊಲೀಸರು (Kodagu Police) ಇಂದು (ಏಪ್ರಿಲ್ 03) ಒಟ್ಟು 13 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಶಿವಮೊಗ್ಗ, ಭದ್ರಾವತಿ, ನೆಲಂಮಂಗಲ ಮೂಲದವರು ಎಂದು ತಿಳಿದುಬಂದಿದ್ದು, ಇವರಿಂದ ಎರಡು ಕಾರು, 12 ಮೊಬೈಲ್, 65,900 ರೂ. ನಗದು ಹಣ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ನಿಮಿತ್ತ ಮಾರ್ಚ್ 27ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayednra) ನೇತೃತ್ವದಲ್ಲಿ ಕುಶಾಲನಗರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದ್ದರು. ಈ ವೇಳೆ ನೂರಾರು ಸಂಖ್ಯೆ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಂಚ ಗದ್ದಲವಾಗಿತ್ತು. ಇದನ್ನೇ ಕಾಯುತ್ತಿದ್ದ ಖದೀಮರು ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆಜಿ ಬೋಪಯ್ಯ ಸೇರಿದಂತೆ ಇತರೆ ಬಿಜೆಪಿ ಮುಖಂಡರ ಪರ್ಸ್ ಕಳ್ಳತನ ಮಾಡಿದ್ದರು. ಅಪ್ಪಚ್ಚು ರಂಜನ್ ಅವರ ಪರ್ಸ್ನಲ್ಲಿ 25000 ರೂ ಹಾಗೂ ಬೋಪಯ್ಯ ಅವರ ಪರ್ಸ್ನಲ್ಲಿ 17000 ರೂ. ಇತ್ತು. ಇವರಿಬ್ಬರ ಜೊತೆಗೆ ಇನ್ನೂ ಅನೇಕರ ಜೇಬಿನಲ್ಲಿದ್ದ ಪರ್ಸ್ ಕಳ್ಳತನವಾಗಿದ್ದು, ಒಟ್ಟು ಅಂದಾಜು 5 ಲಕ್ಷ ರೂ. ಅಧಿಕ ಹಣ ಲಪಟಾಯಿಸಿದ್ದರು. ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೊಡಗು ಪೊಲೀಸರು ದೂರು ದಾಖಲಿಸಿಕೊಂಡು ಖದೀಮರ ಬಂಧನಕ್ಕೆ ಬಲೆ ಬೀಸಿದ್ದರು. ಇದೀಗ ಅಂತಿಮವಾಗಿ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ, ಇಬ್ಬರು ಬಿಜೆಪಿ ಮಾಜಿ ಶಾಸಕರ ಪರ್ಸ್ ಕಳ್ಳತನ!
ಸಭೆ ವೇಳೆ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಬೇಕಂತಲೇ ನೂಕು ನುಗ್ಗಲು ಸೃಷ್ಟಿ ಹಲವರ ಪರ್ಸ್ ಎಗರಿಸಿದ್ದರು. ಮೊದಲೇ ಪ್ಲ್ಯಾನ್ ಮಾಡಿಕೊಂಡೇ ಹೊರ ಜಿಲ್ಲೆಯಿಂದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ