ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿಯ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತಡರಾತ್ರಿ ಜೆ.ಪಿ.ನಗರದ ವೃದ್ಧ ದಂಪತಿ ಗೋವಿಂದಯ್ಯ ಹಾಗೂ ಶಾಂತಮ್ಮ ಕೊಲೆಯಾಗಿತ್ತು. ಪ್ರಕರಣ ಸಂಬಂಧ ದಂಪತಿಯ ಮೊದಲ ಪುತ್ರ ನವೀನ್ ಬಾಮೈದ ರಾಕೇಶ್ ಅಲಿಯಾಸ್ ರಾಕ್ಸ್ನನ್ನು ಪೊಲೀಸರು ಬಂಧಿಸಿದ್ದಾರೆ.
2008 ರಲ್ಲಿ ಪವಿತ್ರ ಎಂಬುವರನ್ನ ವೃದ್ಧ ದಂಪತಿಯ ಪುತ್ರ ನವೀನ್ ಮದುವೆಯಾಗಿದ್ದ. ಆ ಬಳಿಕ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನವೀನ್ ಪತ್ನಿ ಪವಿತ್ರ ಮನೆ ಬಿಟ್ಟು ತೆರಳಿದ್ದರು. ತವರಿಗೆ ಮರಳಿದ್ದ ಪವಿತ್ರರನ್ನ ಕರೆತರುವಂತೆ ರಾಕೇಶ್ಗೆ ನವೀನ್ ಕರೆ ಮಾಡಿದ್ದ. ಕೌಟುಂಬಿಕ ನ್ಯಾಯಾಲಯದ ಕೌನ್ಸೆಲಿಂಗ್ ಬಳಿಕ ಪವಿತ್ರ ಮನೆಗೆ ವಾಪಸ್ ಬಂದಿದ್ದರು.
ಇದೇ ವಿಚಾರವಾಗಿ ನವೀನ್ ಹಾಗೂ ರಾಕೇಶ್ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಇದೇ ದ್ವೇಷದಿಂದ ನವೀನ್ ಬಾಮೈದ ಜೆ.ಪಿ.ನಗರದ ಮನೆಗೆ ಬಂದು ದಂಪತಿಯನ್ನು ಹತ್ಯೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ಕೋಣನಕುಂಟೆ ಪೊಲೀಸರು ಆರೋಪಿ ರಾಕೇಶ್ನನ್ನು ಬಂಧಿಸಿದ್ದಾರೆ.