ಕೊಪ್ಪಳ: ಒಂದೇ ಕುಟುಂಬದ 3 ಜನ ಅನುಮಾನಾಸ್ಪದವಾಗಿ ಸಾವು, ಕೊಲೆ ಶಂಕೆ

| Updated By: ವಿವೇಕ ಬಿರಾದಾರ

Updated on: May 28, 2024 | 12:09 PM

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚಿಗೆ ಗದಗನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲಾಗಿತ್ತು. ಇದು ಮಾಸುವ ಮುನ್ನವೇ ಕೊಪ್ಪಳದಲ್ಲಿ ಒಂದೇ ಕುಟುಂಬ ಮೂವರನ್ನು ಕೊಲೆ ಮಾಡಲಾಗಿದೆ. ಇದು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.

ಕೊಪ್ಪಳ: ಒಂದೇ ಕುಟುಂಬದ 3 ಜನ ಅನುಮಾನಾಸ್ಪದವಾಗಿ ಸಾವು, ಕೊಲೆ ಶಂಕೆ
ವಸಂತಾ, ರಾಜೇಶ್ವರಿ, ಸಾಯಿಧರ್ಮತೇಜ್
Follow us on

ಕೊಪ್ಪಳ, ಮೇ 28: ಒಂದೇ ಕುಟುಂಬದ (Family) ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಕೊಪ್ಪಳ (Koppal) ತಾಲೂಕಿನ ಹೊಸಲಿಂಗಾಪುರದಲ್ಲಿ ನಡೆದಿರುವ ಘಟನೆ ನಡೆದಿದೆ. ರಾಜೇಶ್ವರಿ (50), ವಸಂತಾ (28), ಸಾಯಿಧರ್ಮತೇಜ್ (5) ಮೃತ ದುರ್ದೈವಿಗಳು. ವಸಂತಾ ಮನೆ ಒಡತಿ. ವಸಂತಾ  ಅವರ ತಾಯಿ ರಾಜೇಶ್ವರಿ, ಮಗ ಸಾಯಿಧರ್ಮತೇಜ್.

ಆಂಧ್ರ ಪ್ರದೇಶದ ನಂದ್ಯಾಲ ಗ್ರಾಮದ ವ್ಯಕ್ತಿ ಜೊತೆ ವಸಂತಾರ ಮದುವೆ ಆಗಿತ್ತು. ಆದರೆ ವಸಂತಾ ಕಳೆದ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿ, ಬಳಿಕ ಹೊಸ‌‌ಲಿಂಗಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ತಾಯಿ ಮತ್ತು ಮಗನ ಜೊತೆ ಇದ್ದರು.

ವಸಂತಾ ಹೊಸ‌‌ಲಿಂಗಾಪುರ ಬಳಿ ಇರುವ ಬೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅನ್ಯ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದರು. ನಂತರ ಆರು ತಿಂಗಳ ಹಿಂದೆ ಕುಟುಂಬಸ್ಥರಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು.

ಇದನ್ನೂ ಓದಿ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ, ದೇಹದ ಅಂಗಾಂಗ ಕತ್ತರಿಸಿ ವಿಕೃತಿ

ಸೋಮವಾರ (ಮೇ 27) ರಾತ್ರಿ ರಾಜೇಶ್ವರಿ ಅವರಿಗೆ ಇನ್ನೊಬ್ಬ ಮಗಳು ಕರೆ ಮಾಡಿದ್ದರು. ಆದರೆ ರಾಜೇಶ್ವರಿ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಇಂದು (ಮೇ 28) ಮುಂಜಾನೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ರಾಜೇಶ್ವರಿ ಮತ್ತು ಸಾಯಿಧರ್ಮತೇಜ್ ಶವ ಬೆಡ್​ರೂಮ್​ನಲ್ಲಿ ಮತ್ತು ವಸಂತಾ ಶವ ಅಡುಗೆ ಮನೆಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮುನಿರಾಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ.

ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷೇತೆ ಇಲ್ಲ ಎಂಬ ವಿಪಕ್ಷಗಳ ಆರೋಪದ ಮಧ್ಯೆಯೇ ಈ ಘಟನೆ ನಡೆದಿದ್ದು, ಸರ್ಕಾರಕ್ಕೆ ತಲೆಬಿಸಿಯಾಗಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ, ಹಾವೇರಿಯಲ್ಲಿ ಮಹಿಳೆ ಮೇಲೆ ಹಲ್ಲೆ ಮತ್ತು ಸಾಮೂಹಿಕ ಅತ್ಯಾಚಾರ ಆರೋಪ, ಹಾಗೂ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆ ರಾಜ್ಯ ಸರ್ಕಾರದ ಬುಡ ಅಲುಗಾಡಿಸಿವೆ. ಇದೀಗ ಕೊಪ್ಪಳದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಸರ್ಕಾರಕ್ಕೆ ಗಾಯದ ಮೇಲೆ ಪದೇ ಪದೇ ಬರೆ ಎಳೆದಂತಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:07 pm, Tue, 28 May 24