ಬೆಳಗಾವಿ: ಕೆಪಿಟಿಸಿಎಲ್ (KPTCL) ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ಗೋಕಾಕ್ ಶಹರ ಪೊಲೀಸರು ಮತ್ತೆ ಆರು ಮಂದಿ ಆರೋಪಿಗಳ ಬಂಧಿಸಿದ್ದಾರೆ. ಗೋಕಾಕ್ ತಾಲೂಕಿನ ಬಗರನಾಳ ಗ್ರಾಮದ ಈರಣ್ಣ ಬಂಕಾಪುರ, ಶಿವಾನಂದ ಕುಮೋಜಿ ಹಾಗೂ ಆದಿಲ್‌ಶಾ ಸಿಖಂದರ್ ತಾಸೇವಾಲೆ, ಮಹಾಂತೇಶ್ ಉಪ್ಪಾರ, ಮಹಾಲಿಂಗ ಕುರಿ, ಸುಂದರ್ ಬಂಧಿತರಾಗಿದ್ದಾರೆ. ಇವರ ಬಂಧನದಿಂದ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಕಂಬ ಎಣಿಸುತ್ತಿರುವವರ ಒಟ್ಟು ಸಂಖ್ಯೆ 29ಕ್ಕೆ ಏರಿಕೆಯಾದಂತಾಗಿದೆ.
ಸ್ಮಾರ್ಟ್‌ವಾಚ್, ಮೈಕ್ರೊ ಚಿಪ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣ ಪರೀಕ್ಷೆ ಕೇಂದ್ರದೊಳಗೆ ತೆಗೆದುಕೊಂಡು ಹೋದ ಆರೋಪದಡಿ ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಅಕ್ರಮಕ್ಕೆ ಬಳಸಿದ ಉಪಕರಣಗಳನ್ನ ವಶಕ್ಕೆ ಪಡೆದು ವಿಚಾರಣೆಯನ್ನು ಮುಂದುವರಿಸಿದ್ದಾರೆ. ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷಾ ಹಗರಣದಲ್ಲಿ ಬಂಧಿತನಾಗಿದ್ದ ಆರೋಪಿ ಸಂಜೀವ್ ಭಂಡಾರಿ ಜಾಮೀನು ಪಡೆದು ಜೈಲಿನಿಂದ ಹೊರಬರುತ್ತಿದ್ದಂತೆ ಜೈಲಿನ ಎದುರೇ ಸಿಐಡಿ ಅಧಿಕಾರಿಗಳು ಆತನನ್ನು ಬಂಧಿಸಿದ್ದರು. 2021ರಲ್ಲಿ ನಡೆದಿದ್ದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯಲ್ಲೂ ಅಕ್ರಮ ಎಸಗಿದ್ದಾನೆ ಎಂಬ ಆರೋಪ ಈತನ ಮೇಲಿದೆ.
ಏನಿದು ಪ್ರಕರಣ?
ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯ ಪರೀಕ್ಷೆ ಆ.7ರಂದು ಗೋಕಾಕ್ನಲ್ಲಿ ನಡೆದಿತ್ತು. ಈ ಪರೀಕ್ಷೆಯಲ್ಲಿ ಸಿದ್ದಪ್ಪ ಎಂಬ ವ್ಯಕ್ತಿ ಸ್ಮಾರ್ಟ್ ವಾಚ್ ಬಳಸಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಹೊರಗೆ ಕಳುಹಿಸಿದ್ದನು. ಈ ವಿಚಾರ ತಿಳಿದ ಅಭ್ಯರ್ಥಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅಕ್ರಮ ಎಸಗಿರುವುದು ಖಚಿತವಾಗಿತ್ತು. ಅದರಂತೆ ಆರಂಭದಲ್ಲಿ ಒಂಬತ್ತು ಮಂದಿಯನ್ನು ಬಂಧಿಸಿದ್ದ ಪೊಲೀಸರು ಇದೀಗ ಒಟ್ಟು 29 ಮಂದಿಯನ್ನು ಬಂಧಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Fri, 21 October 22