ಬೆಳಗಾವಿ ನ.10: ಪ್ರೀತಿ ನಿರಾಕರಿಸಿದ್ದಕ್ಕೆ ಡೀಪ್ ಫೇಕ್ (Deepfake) ಮೂಲಕ ಯಾರದೋ ನಗ್ನ ದೇಹಕ್ಕೆ ಯುವತಿಯ (Young Girl) ಭಾವಚಿತ್ರ ಅಳವಡಿಸಿ ಯುವಕ ಬ್ಯ್ಲಾಕ್ಮೇಲ್ (Blackmail) ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ (Khanapur) ಪಟ್ಟಣದಲ್ಲಿ ನಡೆದಿದೆ. ಫೋಟೋ ಎಡಿಟ್ ಮಾಡಿ ಬ್ಯ್ಲಾಕ್ಮೇಲ್ ಮಾಡಿದ್ದ ಆರೋಪಿ ಮಂಥನ್ ಪಾಟೀಲ್ (22)ನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಯುವತಿ ಮತ್ತು ಆರೋಪಿ ಮಂಥನ್ ಪಾಟೀಲ್ ಒಂದೇ ಊರವನರಾಗಿದ್ದಾರೆ. ಮಂಥನ್ ಪಾಟೀಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಮಂಥನ್ ಪಾಟೀಲ್ ಯುವತಿಗೆ ಪ್ರೀತಿ ಮಾಡುವಂತೆ ಬೆನ್ನು ಬಿದ್ದಿದ್ದನು.
ಆದರೆ ಯುವತಿ ಈತನ ಲವ್ ಪ್ರಪೋಸಲ್ಗೆ ಒಪ್ಪಿರಲಿಲ್ಲ. ಹೀಗಾಗಿ ಆರೋಪಿ ಮಂಥನ್ ಪಾಟೀಲ್, ಸಾಮಾಜಿಕ ಜಾಲತಾಣದಿಂದ ಯುವತಿಯ ಫೋಟೋ ತೆಗೆದುಕೊಂಡು ನಗ್ನವಾಗಿ ಎಡಿಟ್ ಮಾಡಿ ವೈರಲ್ ಮಾಡುತ್ತೇನೆ ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಆದರೂ ಯುವತಿ ಪ್ರೀತಿ ಮಾಡಲು ಒಪ್ಪಿರುವುದಿಲ್ಲ. ಯುವತಿಯ ಮೇಲೆ ಮತ್ತಷ್ಟು ಒತ್ತಡ ಹಾಕಲು ಆರೋಪಿ ಮಂಥನ್ ಪಾಟೀಲ್ ಯುವತಿ ಮತ್ತು ಆಕೆಯ ಗೆಳತಿಯರು ಒಟ್ಟಿಗೆ ಇರುವ ಭಾವಚಿತ್ರ ತೆಗೆದುಕೊಂಡು ಯಾರದ್ದೋ ನಗ್ನ ಭಾವಚಿತ್ರಕ್ಕೆ ಇವರ ಮುಖವನ್ನು ಅಳವಡಿಸುತ್ತಾನೆ.
ನಂತರ dram_quen_arati8 ಅಂತಾ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಎಡಿಟ್ ಮಾಡಿದ್ದ ಯುವತಿಯರ ಭಾವಚಿತ್ರವನ್ನು ಅಪ್ಲೋಡ್ ಮಾಡುತ್ತಾನೆ. ಕೂಡಲೆ ಯುವತಿಯರು ಖಾನಾಪುರ ಪೊಲೀಸರಿಗೆ ದೂರು ನೀಡುತ್ತಾರೆ. ಅಲ್ಲದೆ ಯುವತಿಯರು ಮತ್ತು ಕುಟುಂಬಸ್ಥರು ಪೊಲೀಸ್ ಠಾಣೆ ಎದುರು ಧರಣಿ ಕೂಡ ನಡೆಸಿದ್ದರು. ದೂರಿನನ್ವಯ ಖಾನಾಪುರ ಪೊಲೀಸರು ಆರೋಪಿ ಮಂಥನ್ ಪಾಟೀಲ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಡೀಪ್‌ಫೇಕ್ ವಿಡಿಯೋ ಹೇಗೆ ಸೃಷ್ಟಿಯಾಗುತ್ತದೆ? ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಹೇಗೆ ಮಾಡಿದ್ರು?
ಈ ಪ್ರಕರಣದ ಬಗ್ಗೆ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದು, ಪೋಟೊ ಎಡಿಟ್ ಮಾಡಿ ಯುವತಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣ ಖಾನಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಸಂಬಂಧ ಆರೋಪಿ ಮಂಥನ್ ಪಾಟೀಲ್ ಬಂಧಿಸಲಾಗಿದೆ. ಯುವತಿಯೋರ್ವಳು ಆತನನ್ನು ಪ್ರೀತಿ ಮಾಡಲು ಒಪ್ಪಿರಲಿಲ್ಲ. ಇದರಿಂದ ಯುವತಿಗೆ ವಾರ್ನ್ ಮಾಡಿ ಮಾನ ಮರ್ಯಾದೆ ಹರಾಜು ಹಾಕುತ್ತೇನೆ ಅಂತ ಬ್ಲ್ಯಾಕ್ಮೇಲ್ ಮಾಡಿದ್ದನು. ಬಳಿಕ ಯುವತಿ ಹೆಸರಿನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ, ಡೀಫ್ ಫೇಕ್ ನಂತ ತಂತ್ರಜ್ಞಾನ ಬಳಸಿಕೊಂಡು ಪೋಟೊ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದನು ಎಂದು ತಿಳಿಸಿದರು.
ಯುವತಿಯ ಮೇಲೆ ಮತ್ತಷ್ಟು ಒತ್ತಡ ಹಾಕಲು, ಯುವತಿಯ ಮೂರು ಜನ ಗೆಳತಿಯರ ಫೋಟೊ ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದನು. ಈ ಸಂಬಂಧ ಯುವತಿಯರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡು ಯುವಕ ಮಂಥನ್ ಪಾಟೀಲ್ನನ್ನ ಅರೆಸ್ಟ್ ಮಾಡಿದ್ದೇವೆ. ಈ ರೀತಿ ಯಾರಾದರೂ ಫೋಟೊ ಎಡಿಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೇ ಕೂಡಲೇ ಠಾಣೆಗೆ ಬಂದು ದೂರು ನೀಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 am, Sun, 12 November 23