ನಿಧಿ ಆಸೆಗಾಗಿ ಚಪ್ಪಲಿ ಹೊಲೆಯುವನನ್ನು ಕರೆದೊಯ್ದು ಬಲಿ ಕೊಟ್ಟ ಖದೀಮರು

| Updated By: ರಮೇಶ್ ಬಿ. ಜವಳಗೇರಾ

Updated on: Feb 11, 2025 | 7:58 PM

ನರಬಲಿ ಕೊಟ್ಟರೆ ನಿನಗೆ ನಿಧಿ ಸಿಗುತ್ತೆ ಎಂದು ಜ್ಯೋತಿಷಿ ಹೇಳಿದ್ದ. ಜ್ಯೋತಿಷಿ ಮಾತು ನಂಬಿದ್ದ ವ್ಯಕ್ತಿಯೋರ್ವ ನಿಧಿ ಆಸೆಗಾಗಿ ಬಸ್​ ನಿಲ್ದಾಣದಲ್ಲಿ ಚಪ್ಪಲಿ ಹೊಲೆಯುವ ಕಾಯಕ ಮಾಡಿಕೊಂಡಿದ್ದವನನ್ನು ಕರೆದೊಯ್ದು ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜ್ಯೋತಿಷಿ ಮಾತು ಕೇಳಿ ಹಿಂದೆ ಮುಂದೆ ನೋಡದೇ ಇನ್ನೊಬ್ಬರ ಚಪ್ಪಲಿ ಹೊಲೆದು ಜೀವನ ನಡೆಸುತ್ತಿದ್ದವನ ಬಲಿ ಕೊಟ್ಟಿದ್ದಾನೆ.

ನಿಧಿ ಆಸೆಗಾಗಿ ಚಪ್ಪಲಿ ಹೊಲೆಯುವನನ್ನು ಕರೆದೊಯ್ದು ಬಲಿ ಕೊಟ್ಟ ಖದೀಮರು
ಆನಂದ್ ರೆಡ್ಡಿ (ಕೊಲೆ ಆರೋಪಿ, ರಾಮಕೃಷ್ಣ (ಜ್ಯೋತಿಷಿ)
Follow us on

ಚಿತ್ರದುರ್ಗ, (ಫೆಬ್ರವರಿ 11): ನರಬಲಿ ಕೊಟ್ಟರೆ ನಿಧಿ ಸಿಗುತ್ತೆ ಎಂದು ಜ್ಯೋತಿಷಿ ಹೇಳಿದ್ದ ಮಾತು ಕೇಳಿ ವ್ಯಕ್ತಿಯೋರ್ವ, ಚಪ್ಪಲಿ ಹೊಲೆಯುವ ಕಾರ್ಮಿಕನನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ಈ‌ ಘಟನೆ ನಡೆದಿದೆ. ಜೆಜೆ ಕಾಲೋನಿ ನಿವಾಸಿ ಪ್ರಭಾಕರ್​ ಹತ್ಯೆಯಾದ ವ್ಯಕ್ತಿ. ಜ್ಯೋತಿಷಿ ರಾಮಕೃಷ್ಣನ ಮಾತು ಕೇಳಿ ಆನಂದ್ ರೆಡ್ಡಿ ಎಂಬಾತ ಹಿಂದೆ ಮುಂದೆ ನೋಡದೇ ನರಬಲಿ ಕೊಟ್ಟೇ ಬಿಟ್ಟಿದ್ದಾನೆ. ಆದ್ರೆ, ಇದೀಗ ಪೊಲೀಸರು, ನರಬಲಿ ಕೊಟ್ಟ ಆರೋಪಿ ಆಂಧ್ರದ ಕಲ್ಯಾಣ ದುರ್ಗ ತಾಲೂಕಿನ ಕುಂದುರ್ಪಿ ಗ್ರಾಮದ ಆನಂದ ರೆಡ್ಡಿ ಹಾಗೂ ಜ್ಯೋತಿಷಿಯನ್ನು ಬಂಧಿಸಿದ್ದಾರೆ.

ಜ್ಯೋತಿಷಿ ರಾಮಕೃಷ್ಣ, ಆನಂದ ರೆಡ್ಡಿಗೆ ಪರಶುರಾಮಪುರ ಪಶ್ಚಿಮದಲ್ಲಿ ನರಬಲಿ ಕೊಟ್ರೆ ನಿಧಿ ಸಿಗುತ್ತೆ. ಆ ರಕ್ತವನ್ನು ಮಾರಮ್ಮ ದೇವಿಗೆ ಅರ್ಪಿಸಲು ಹೇಳಿದ್ದನಂತೆ. ಜ್ಯೋತಿಷಿ ಮಾತು ಕೇಳಿದ ಆನಂದ ರೆಡ್ಡಿ, ಕಳೆದ ಭಾನುವಾರ ಸಂಜೆ ಪಶ್ಚಿಮ‌ ದಿಕ್ಕಲ್ಲಿ ಬಂದ ಪ್ರಭಾಕರನ ಬರ್ಬರ ಹತ್ಯೆ ಮಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲೆಯುವ ಕಾಯಕ ಮಾಡಿಕೊಂಡಿದ್ದ ಪ್ರಭಾಕರನನ್ನು ಬೈಕಲ್ಲಿ ಡ್ರಾಪ್ ನೀಡುವುದಾಗಿ ಹೇಳಿ ಕರೆದೊಯ್ದು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ.

ಇದನ್ನೂ ಓದಿ: ಅರ್ಧಗಂಟೆಯಲ್ಲಿ ನಾಲ್ವರಿಗೆ ಚಾಕುವಿನಿಂದ ಇರಿದು ಪರಾರಿಯಾದ ಆರೋಪಿ ಕದಂಬ

‘ಕೊಲೆ ಆರೋಪಿ ಆನಂದ ರೆಡ್ಡಿ ಪಾವಗಡದ ಡಾಬಾಲ್ಲಿ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆ ಆರೋಪಿ ಆನಂದ ರೆಡ್ಡಿ ಹಾಗೂ ತುಮಕೂರು ಜಿಲ್ಲೆಯ ಪಾವಗಡದ ಜ್ಯೋತಿಷಿ ರಾಮಕೃಷ್ಣನನ್ನು ಬಂಧಿಸಿ ಕೊಲೆಗೆ ಬಳಸಿದ್ದ ಮಚ್ಚು ಹಾಗೂ ಬಟ್ಟೆ‌ ಸೀಜ್ ಮಾಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಎಸ್‌ಪಿ ರಂಜೀತ ಕುಮಾರ್ ಬಂಡಾರು, ASP ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Tue, 11 February 25