ಮಂಡ್ಯ, ಜ.25: ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿ ಕುಟುಂಬಸ್ಥರು ಅಂತ್ಯ ಸಂಸ್ಕಾರಕ್ಕೆ ತೆರಳಿದಾಗ ಕಳ್ಳತನ (Theft) ಮಾಡುತ್ತಿದ್ದ ಖದೀಮನನ್ನು ಅರಕೆರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.ವಿವೇಕ್ (23) ಬಂಧಿತ ಆರೋಪಿ. ಈ ಖದೀಮನಿಗೆ ಸಾವಿನ ಮನೆಗಳು ಕಂಡರೆ ಸಾಕು ಕಾದು ಹೊಂಚು ಹಾಕುತ್ತಿದ್ದ. ಕುಟುಂಬಸ್ಥರೆಲ್ಲಾ ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದಂತೆ ಮನೆಗೆ ನುಗ್ಗಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗುತ್ತಿದ್ದ. ಸದ್ಯ ಈ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ನಿವಾಸಿ ವಿವೇಕ್ ಎಲ್ಲಾ ಕಳ್ಳರಂತಲ್ಲ. ಸಿಕ್ಕ ಸಿಕ್ಕ ಕಡೆಯಲ್ಲ ಕಳ್ಳತನ ಮಾಡುತ್ತಿರಲಿಲ್ಲ. ಅತ್ತ ಅತ್ತು ಅತ್ತು ಸಸ್ತಾಗಿರುತ್ತಿದ್ದ ಕುಟುಂಬಸ್ಥರೆಲ್ಲಾ ಅಂತ್ಯ ಸಂಸ್ಕಾರಕ್ಕೆ ತೆರಳಿದ್ರೆ, ಇತ್ತ ಸಾವಿನ ಮನೆಯಲ್ಲಿ ಕೈ ಚಳಕ ತೋರುತ್ತಿದ್ದ. ಸಾವಿನ ಮನೆಯವರಿಗೆ ನೋವಿನ ಮೇಲೆ ನೋವು ಕೊಡುತ್ತಿದ್ದ. ಆರೋಪಿ ವಿವೇಕ್ ಈಗಾಗಲೇ ಹತ್ತಾರು ಸಾವಿನ ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ. ಈ ಆರೋಪಿ ಮಂಡ್ಯ ಜಿಲ್ಲಾ ಪೊಲೀಸರ ನಿದ್ದೆಗೆಡಿಸಿದ್ದ. ಸದ್ಯ ಪ್ರಕರಣವೊಂದರಲ್ಲಿ ಅರಕೆರೆ ಠಾಣಾ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಮಟಮಟ ಮಧ್ಯಾಹ್ನ ಕಾರಿನಲ್ಲೇ ಕಾಮತೃಷೆ ತೀರಿಸಲು ಮುಂದಾದ ಜೋಡಿ, ಆಮೇಲೇನಾಯ್ತು?
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಶಿವಕುಮಾರ್ ಎಂಬುವವರ ಮನೆ ಕಳ್ಳತನ ಪ್ರಕರಣದಲ್ಲಿ ಅರಕೆರೆ ಠಾಣಾ ಪೊಲೀಸರು ವಿವೇಕ್ನನ್ನು ಬಂಧಿಸಿದ್ದಾರೆ. ಬೀರುವಿನಲ್ಲಿದ್ದ 135 ಗ್ರಾಂ ಚಿನ್ನಾಭರಣ ದೋಚಿ ವಿವೇಕ್ ಪರಾರಿಯಾಗಿದ್ದ. ಇನ್ನು ವಿಚಾರಣೆ ವೇಳೆ ಪೊಲೀಸರೇ ಬೆಚ್ಚಿ ಬೀಳುವಂತಹ ಕಳ್ಳತನದ ಹಿಸ್ಟರಿಯನ್ನು ವಿವೇಕ್ ಬಿಚ್ಚಿಟ್ಟಿದ್ದಾನೆ.
ಕಳೆದ ಮೂರು ವರ್ಷದಿಂದ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ ವಿವೇಕ್, ಕೇವಲ 6 ತಿಂಗಳಲ್ಲೇ ಹತ್ತಕ್ಕೂ ಹೆಚ್ಚು ಕಳ್ಳತನ ಮಾಡಿದ್ದಾನೆ. ಪಾಂಡವಪುರ ತಾಲೂಕಿನ ಹಿರಮರಳ್ಳಿ, ಚಿನಕುರಳಿ, ಆರತಿ ಉಕ್ಕಡ, ಹರವು, ಡಾಮಡಹಳ್ಳಿ ಗ್ರಾಮಗಳ ಸಾವಿನ ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಇನ್ನು ಸಾವಿನ ಮನೆಗಳ ಜೊತೆಗೆ ಕಲ್ಯಾಣ ಮಂಟಪಗಳು ಕೂಡ ಈತನ ಟಾರ್ಗೆಟ್ ಆಗಿರುತ್ತಿದ್ದವು. ಬಂಧಿತನಿಂದ ಒಟ್ಟು 36 ಲಕ್ಷ ಮೌಲ್ಯದ 521 ಗ್ರಾಂ ಚಿನ್ನಾಭರಣ, ಕ್ಯಾಮರಾ ಮತ್ತು ಲೆನ್ಸ್, ಒಂದು ಬೈಕ್, ಒಂದು ಕಾರು ಜಪ್ತಿ ಮಾಡಲಾಗಿದೆ. ಈತ ಕದ್ದ ಚಿನ್ನಾಭರಣ ಅಡವಿಟ್ಟು ಮೋಜು-ಮಸ್ತಿ ಮಾಡ್ತಿದ್ದ. ಶೋಕಿಗಾಗಿಯೇ ಕಳ್ಳತನ ಮಾಡ್ತಿದ್ದ. ಸಂಬಂಧಿಕರ ಸಾವಿನ ಮನೆಯಲ್ಲೂ ಕಳ್ಳತನ ಮಾಡಿದ್ದ ಎಂದು ತಿಳಿದು ಬಂದಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:54 am, Thu, 25 January 24