ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ (Praveen Nettaru Murder Case) ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬೆಳ್ಳಾರೆ ನಿವಾಸಿ ಶಾಹಿದ್(40) ಬಂಧಿತ ಆರೋಪಿ.
ಬಂಧಿತ ಆರೋಪಿ ಶಾಹಿದ್, SDPI ಮುಖಂಡರಾದ ಶಾಫಿ ಬೆಳ್ಳಾರೆ ಮತ್ತು ಇಕ್ಬಾಲ್ ಬೆಳ್ಳಾರೆಯ ತಂಗಿ ಗಂಡ ಎಂದು ತಿಳಿದುಬಂದಿದೆ. ಸದ್ಯ ಎನ್ಐಎ ಅಧಿಕಾರಿಗಳು ಆರೋಪಿ ಶಾಹಿದ್ನನ್ನು ಬೆಂಗಳೂರಿನತ್ತ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರವೀಣ್ ನೆಟ್ಟಾರು ಹಂತಕರಿಗಾಗಿ ಪುತ್ತೂರು, ಸುಳ್ಯದಲ್ಲಿ ಎನ್ಐಎ ತಂಡದಿಂದ ವ್ಯಾಪಕ ತಲಾಶ್
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುತ್ತಮುತ್ತ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಶೋಧ ಕಾರ್ಯ ನಡೆಸಿತ್ತು. ಪುತ್ತೂರು, ಬೆಳ್ಳಾರೆ, ಸುಳ್ಯದಲ್ಲಿ ಎನ್ಐಎ ಅಧಿಕಾರಿಗಳ ಒಟ್ಟು ಆರು ತಂಡಗಳಿಂದ ಶೋಧ ಕಾರ್ಯ ಮಾಡಿ, ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿತ್ತು.
ಬಹುಮಾನ ಘೋಷಿಸಿದ ಎನ್ಐಎ
ನಾಲ್ವರು ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ ಒಟ್ಟು 14 ಲಕ್ಷ ರೂ. ನಗದು ಬಹುಮಾನ ನೀಡುವಾಗಿ ಘೋಷಿಸಿತ್ತು, ಮೊಹಮ್ಮದ್ ಮುಸ್ತಫಾ ಮತ್ತು ತುಫೈಲ್ ಬಗ್ಗೆ ಮಾಹಿತಿ ನೀಡಿದರೆ 5 ಲಕ್ಷ ರೂ. ಬಹುಮಾನ, ಇನ್ನು ಇಬ್ಬರು ಆರೋಪಿಗಳಾದ ಉಮರ್ ಫಾರೂಕ್ ಹಾಗೂ ಅಬೂಬಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದರೆ 2 ಲಕ್ಷ ಬಹುಮಾನ ರೂಪಾಯಿ ನಗದು ಬಹುಮಾನ ನೀಡುವಾಗಿ ಎನ್ಐಎ ಪ್ರಕಟಣೆಯಲ್ಲಿ ತಿಳಿಸಿತ್ತು.
ಏನಿದು ಪ್ರಕರಣ?
ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನನ್ನು ಜುಲೈ 26 ರಂದು ಬೆಳ್ಳಾರೆಯಲ್ಲಿರವ ಅವರ ಕೋಳಿ ಅಂಗಡಿ ಬಳಿಯೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಇದು ಇಡೀ ರಾಜ್ಯಾದ್ಯಂತ ಕಾರ್ಯಕರ್ತರಲ್ಲಿ ಕಿಚ್ಚು ಹತ್ತಿಸಿತ್ತು. ಇದರ ಬಿಸಿಗೆ ಬಿಜೆಪಿ ರಾಜ್ಯ ಸರ್ಕಾರದ ಬುಡವೇ ಅಲುಗಾಡಿತ್ತು. ನಂತರ ಸರ್ಕಾರ ಈ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿತ್ತು.