ಮಂಗಳೂರು, ಜ.16: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ನಡೆಯುತ್ತಲೇ ಇದ್ದು, 20 ದಿನಗಳ ಅಂತರದಲ್ಲಿ ಮೂರನೇ ಪ್ರಕರಣ ನಡೆದಿದೆ. ಧರ್ಮಸ್ಥಳದಲ್ಲಿ (Dharmasthala) ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಬೆಂಗಳೂರು ಮೂಲದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದರು. ಇದನ್ನು ಗಮನಿಸಿ ಜೋಡಿಯನ್ನು ತಡೆದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಜೋಡಿಯನ್ನು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಹೇಳಿ ಕೇಳಿ ಕೋಮ ಸೂಕ್ಷ್ಮ ಪ್ರದೇಶ. ಯಾವುದೇ ಘಟನೆ ನಡೆದರೂ ಅದಕ್ಕೆ ಕೋಮು ಅನ್ನೋದು ತಳುಕು ಹಾಕಿಕೊಂಡಿರುತ್ತದೆ. ಡಿಸೆಂಬರ್ 22 ರಂದು ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ನಿಂತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ನಡೆಸಿ ಹಲ್ಲೆಗೆ ಯತ್ನಿಸಿದ್ದರು. ವಿಚಾರ ತಿಳಿದು ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಪರಾರಿಯಾಗಿದ್ದರು.
ಇದನ್ನೂ ಓದಿ: ಹಾವೇರಿ: ಗ್ಯಾಂಗ್ ರೇಪ್ ಪ್ರಕರಣವಾಗಿ ಬದಲಾದ ಹಾನಗಲ್ ನೈತಿಕ ಪೊಲೀಸ್ಗಿರಿ ಕೇಸ್
ಈ ಪ್ರಕರಣ ನಡೆದ ಬೆನ್ನಲ್ಲೇ ಡಿಸೆಂಬರ್ 25 ರಂದು ಮಂಗಳೂರಿನ ಸೋಮೇಶ್ವರ ದೇವಸ್ಥಾನ ಬಳಿ ನೈತಿಕ ಪೊಲೀಸ್ಗಿರಿ ನಡೆದಿತ್ತು. ಇಬ್ಬರು ಹಿಂದೂ ಯುವತಿಯರು, ಓರ್ವ ಹಿಂದೂ ಯುವಕ ಮತ್ತು ಓರ್ವ ಮುಸ್ಲಿಂ ಯುವಕ ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಸುತ್ತಮುತ್ತ ಓಡಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ತಡೆದು ವಿಚಾರಿಸಿದ್ದರು.
ಈ ವೇಳೆ, ಮುಸ್ಲಿಂ ಯುವಕ ಸೋಮೇಶ್ವರ ದೇವಸ್ಥಾನ ಸುತ್ತಾಡಿ ಹಣೆಗೆ ಗಂಧ ಹಚ್ಚಿಕೊಂಡಿರುವುದು ಬೆಳಕಿಗೆ ಬಂದಿತ್ತು. ಅನ್ಯಕೋಮಿನ ಜೋಡಿ ಎಂದು ಗೊತ್ತಾದ ಹಿನ್ನೆಲೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಯುವಕ-ಯುವತಿಯನ್ನ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ