ಮತಾಂತರಕ್ಕೆ ಮದುವೆಯ ಆಮಿಷ: ಮತಾಂತರ ನಿಷೇಧ ಕಾಯ್ದೆ ಜಾರಿಯ ನಂತರ ಮೊದಲ ಪ್ರಕರಣ
ಮದುವೆಯಾಗಬೇಕಾದರೆ ಮತಾಂತರವಾಗಬೇಕು ಎಂದು ಮೊಯಿನ್ ಯುವತಿಯ ಮೇಲೆ ಒತ್ತಡ ಒತ್ತಡ ಹೇರಿದ್ದ ಎಂದು ದೂರಲಾಗಿದೆ.
ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಮೊದಲ ಪ್ರಕರಣ ನಗರದಲ್ಲಿ ದಾಖಲಾಗಿದೆ. ಮದುವೆಯ ಭರವಸೆ ನೀಡಿ 18 ವರ್ಷದ ಉತ್ತರ ಪ್ರದೇಶ ಯುವತಿಯನ್ನು ಮತಾಂತರ ಮಾಡಿರುವ ಆರೋಪದ ಮೇಲೆ ಸೈಯದ್ ಮುಯೀನ್ ಎಂಬ ಯುವಕನ ವಿರುದ್ಧ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಯುವತಿಯ ಕುಟುಂಬದವರು ಮೂಲತಃ ಉತ್ತರ ಪ್ರದೇಶದ ಗೋರಖ್ಪುರ ಮೂಲದವರು. ಯುವತಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರು, ತಾಯಿ ಗೃಹಿಣಿ. ಇಬ್ಬರು ಸಹೋದರಿಯರು ಓರ್ವ ಸಹೋದರನೊಂದಿಗೆ ಯುವತಿಯು ಯಶವಂತಪುರ ವ್ಯಾಪ್ತಿಯ ಬಿ.ಕೆ.ನಗರದಲ್ಲಿ 15 ವರ್ಷಗಳಿಂದ ವಾಸವಿದ್ದಾರೆ. ಮಗಳು ಅನ್ಯ ಧರ್ಮೀಯ ಯುವಕನನ್ನು ಪ್ರೀತಿಸುತ್ತಿರಬಹುದು ಎಂಬ ಶಂಕೆಯ ನಂತರ ಆರು ತಿಂಗಳ ಹಿಂದೆ ಮಗಳಿಗೆ ಪೋಷಕರು ಬುದ್ಧಿವಾದ ಹೇಳಿದ್ದರು.
ಕಳೆದ ಅ 5ರಂದುಅಂಗಡಿಗೆ ಹೋಗಿಬರುವುದಾಗಿ ಹೋಗಿದ್ದ ಯುವತಿ ಮನೆಗೆ ಹಿಂದಿರುಗಿರಲಿಲ್ಲ. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಕುಟುಂಬದ ಸದಸ್ಯರು ಯುವತಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ವಾರದ ಬಳಿಕ ಬುರ್ಖಾ ಧರಿಸಿ ಯುವತಿಯು ಠಾಣೆಗೆ ಬಂದಿದ್ದಳು. ಯುವತಿ ಮತಾಂತರಗೊಂಡಿದ್ದು, ಆಕೆಯನ್ನು ಮದುವೆಯಾಗುವುದಾಗಿ ಮುಯೀನ್ ಎಂಬಾತ ಠಾಣೆಗೆ ಕರೆತಂದಿದ್ದ. ಮಗಳ ನಡೆ ಕಂಡು ಗಾಬರಿಗೊಂಡ ಪೋಷಕರಿಂದ ಯಶವಂತಪುರ ಠಾಣೆಯಲ್ಲಿ ಮೊಯೀನ್ ವಿರುದ್ಧ ಮದುವೆಯ ಭರವಸೆ ಕೊಟ್ಟು ಮತಾಂತರ ಮಾಡಿರುವ ಆರೋಪ ಹೊರಿಸಿ ಮತ್ತೊಂದು ದೂರು ದಾಖಲಿಸಿದರು.
ಯುವತಿಯ ಮನೆಯ ಪಕ್ಕದ ಏರಿಯಾದಲ್ಲಿ ವಾಸ ಮಾಡುತ್ತಿರುವ ಮುಯೀನ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಬೇಕಾದರೆ ಮತಾಂತರವಾಗಬೇಕು ಎಂದು ಮೊಯಿನ್ ಯುವತಿಯ ಮೇಲೆ ಒತ್ತಡ ಒತ್ತಡ ಹೇರಿದ್ದ ಎಂದು ದೂರಲಾಗಿದೆ. ಮುಯೀನ್ ಮಾತು ನಂಬಿ ಆತನ ಜೊತೆ ಹೋಗಿದ್ದ ಯುವತಿಯನ್ನು ಕಾನೂನು ಬಾಹಿರವಾಗಿ ಮಸೀದಿಯೊಂದರಲ್ಲಿ ಮತಾಂತರ ಮಾಡಲಾಗಿದೆ ಎಂದು ಯುವತಿಯ ಪೋಷಕರು ಹೇಳಿದ್ದಾರೆ. ಸದ್ಯ ಯಶವಂತಪುರ ಠಾಣೆಯಲ್ಲಿ ಮತಾಂತರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಮತಾಂತರ ನಿಷೇಧ ಕಾಯ್ದೆಯ ಅನ್ವಯ ಮತಾಂತರ ಪ್ರಕ್ರಿಯೆಗೆ ಹಲವು ನಿಯಮಗಳನ್ನು ವಿಧಿಸಲಾಗಿದೆ. ಮತಾಂತರವಾಗುವ ವ್ಯಕ್ತಿ ಮೊದಲು ಡಿಸಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಡಿಸಿ ಆ ವ್ಯಕ್ತಿಯ ಪೋಷಕರು / ಆಪ್ತರ ಹೇಳಿಕೆ ಪಡೆದು 30 ದಿನಗಳ ಗಡುವು ನೀಡುತ್ತಾರೆ. ಯಾವುದೇ ಒತ್ತಡವಿಲ್ಲದೆ ತಮ್ಮ ಇಷ್ಟದಂತೆ ಮತಾಂತರವಾಗುತಿದ್ದರೆ ಡಿಸಿ ಅನುಮತಿ ನೀಡುತ್ತಾರೆ. ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಮತಾಂತರಕ್ಕೆ ಸಹಾಯ ಮಾಡುವ ಎಲ್ಲಾ ವ್ಯಕ್ತಿಗಳ ಮೇಲೆ ಕೂಡ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸದ್ಯ ಇದೇ ಕಾಯ್ದೆಯಂತೆ ಮುಯೀನ್ ಹಾಗೂ ಆತನಿಗೆ ಸಹಾಯ ಮಾಡಿದವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
Published On - 8:26 am, Fri, 14 October 22