ಅವನು ಲಂಡನ್ (London) ಮಹಾನಗರದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವ ಕೋಟ್ಯಾಧಿಪತಿ. ತನ್ನ ಮಾಜಿ ಸಂಗಾತಿಯ ಪ್ರೀತಿಯ ಕಾಕಪೂ (Cockapoo) ತಳಿಯ ನಾಯಿಯನ್ನು ಕದ್ದ ಅಪರಾಧದಲ್ಲಿ ಪೊಲೀಸರ ಅತಿಥಿಯಾಗಿ ಕೋರ್ಟ್ ಮುಂದೆ ಹಾಜರಾಗಿದ್ದಾನೆ. ಅವಳು ರಜೆಯ ಮೇಲೆ ಬೇರೆ ದೇಶಕ್ಕೆ ಹೋಗಿದ್ದಾಗ ಈ ಕರೋಡ್ ಪತಿ ಅವಳಿ ನಾಯಿಯನ್ನು ವಾಕ್ ಮಾಡಿಸುವ ನೆಪದಲ್ಲಿ ನಾಯಿಯನ್ನು ಹೊರಗೆ ತಂದು ಅದರೊಂದಿಗೆ ಪರಾರಿಯಾಗಿದ್ದಾನೆ. ಅಂದಹಾಗೆ, ನಾಯಿ ಅಪಹರಿಸಿದವನು 45-ವರ್ಷ-ವಯಸ್ಸಿನ ಬಶರ್ ಅಯ್ಯೂಬ್ (Bashar Ayoub) ಮತ್ತು ಅವನ ಎಕ್ಸ್ ಗೆಳತಿಯ ಹೆಸರು ಹನ್ನಾ ರಸೇಕ್ (Hannah Rasekh). ಅವಳಿಗೆ ಈಗ 33ರ ಪ್ರಾಯ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಹನ್ನಾ ತನ್ನಿಂದ ದೂರವಾದ ಬಳಿಕ ಅಯ್ಯೂಬ್ ಅವಳಿಗೆ ನೂರಾರು ಟೆಕ್ಸ್ಟ್ ಮೆಸೇಜ್ ಗಳನ್ನು ಕಳಿಸಿದ್ದಾನೆ.
ಜನವರಿಯಲ್ಲಿ ಹನ್ನಾ ಮತ್ತು ಅಯ್ಯೂಬ್ ಬೇರೆಯಾದರಂತೆ. ಅಲ್ಲಿಂದ ಇಲ್ಲಿಯವರೆಗೆ ಅವನು ಹನ್ನಾಗೆ ಹೇವರಿಕೆ ಹುಟ್ಟಿಸುವ ಮತ್ತು ಅವಾಚ್ಯ ಬೈಗುಳಗಳ ಸಂದೇಶಗಳನ್ನು ಕಳಿಸಿದ್ದಾನೆ. ‘ನೀನು ಬೇಗ ಸಾಯುವಂತೆ ಪ್ರತಿದಿನ ಪ್ರಾರ್ಥಿಸುತ್ತಿದ್ದೇನೆ’ ಅಂತಲೂ ಅವನು ಸಂದೇಶಗಳನ್ನು ಕಳಿಸಿದ್ದಾನೆ.
ಜುಲೈನಲ್ಲಿ ಹನ್ನಾ ರಜೆ ಕಳೆಯಲು ಸ್ಪೇನ್ ಗೆ ಹೋದಾಗ ಲಂಡನ್ ನಲ್ಲಿ ಅವಳು ವಾಸವಾಗಿರುವ ಸೌತ್ ಕೆನ್ಸಿಂಗ್ಟನ್ ಏರಿಯಾಗೆ ಹೋಗಿದ್ದಾನೆ. ಹನ್ನಾ ಅನುಪಸ್ಥಿತಿಯಲ್ಲಿ ಮನೆಗೆ ಬಂದು ವಾಸವಾಗಿದ್ದ ಅವಳ ತಂದೆ ತಾಯಿಗಳೊಂದಿಗೆ ಉಭಯಕುಶಲೋಪರಿ ನಡೆಸಿದ್ದಾನೆ. ಹನ್ನಾಳ ನಾಯಿ ಟೆಡ್ ಅನ್ನು ವಾಕ್ ಕರೆದೊಯ್ಯುವುದಾಗಿ ಅವರಿಗೆ ಸುಳ್ಳು ಹೇಳಿ ಹೊರಬಂದವನು ನಾಯಿಯನ್ನು ವಾಪಸ್ಸು ತಂದು ಬಿಡದೆ ಪರಾರಿಯಾಗಿದ್ದಾನೆ!
ಆದರೆ ಹನ್ನಾ ವಾಪಸ್ಸು ಬಂದು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಅವನನ್ನು ಬಂಧಿಸಿ ಟೆಡ್ ಅನ್ನು ಕರೆದೊಯ್ದು ಅವಳಿಗೆ ವಾಪಸ್ಸು ನೀಡಿದ್ದಾರೆ. ತನ್ನ ಮುದ್ದು ನಾಯಿಯೊಂದಿಗೆ ತೆಗೆದುಕೊಂಡ ಸೆಲ್ಫೀ ಮತ್ತು ಫೋಟೊಗಳನ್ನು ಹನ್ನಾ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು ಟೆಡ್ ಆರೋಗ್ಯವಾಗಿದೆ ಮತ್ತು ಸಂತೋಷದಿಂದಿದೆ.
ಆದರೆ ನಾಯಿ ಅಪಹರಣ ನಡೆಸಿದ ಕೆಲವಾರಗಳ ನಂತರ ಪುನಃ ಹನ್ನಾಳ ಮನೆಗೆ ಆಗಮಿಸಿದ ಅಯ್ಯೂಬ್ ಅವಳ ಕಾರಿನ ಫೋಟೋವೊಂದನ್ನು ತೋರಿಸಿ ‘ನೀನು ಲಂಡನ್ ನಲ್ಲೇ ಇದ್ದು ಸ್ಪೇನ್ ಹೋಗಿದ್ದಾಗಿ ಸುಳ್ಳು ಹೇಳಿರುವೆ,’ ಅಂತ ಬೈದಾಡಿದ್ದಾನೆ.
ಅವಳು ಪೊಲೀಸ್ ವಿಷಯ ತಿಳಿಸಿದ ಬಳಿಕ ಅವರು ಅಯ್ಯೂಬ್ ಗೆ ವಾರ್ನ್ ಮಾಡಿದ್ದಾರೆ. ಅಷ್ಟಾಗಿಯೂ ಅವನು ಹನ್ನಾಗೆ 64 ಬಾರಿ ಕರೆ ಮಾಡಿದ್ದಾನೆ ಮತ್ತು ಅವಾಚ್ಯ ಸಂದೇಶಗಳನ್ನು ಕಳಿಸಿದ್ದಾನೆ.
ಒಂದು ಸಂದೇಶದಲ್ಲಿ ಅವನು, ‘ನಿನ್ನನ್ನು ಎರಡು ತುಂಡು ಮಾಡುತ್ತೇನೆ, ನಿನ್ನೊಬ್ಬಳನ್ನೇ ಅಲ್ಲ ಇಡೀ ಕುಟುಂಬವನ್ನು ನಿರ್ನಾಮ ಮಾಡುತ್ತೇನೆ, ನೀವೆಲ್ಲ ವಂಚಕರು’ ಅಂತ ಸಂದೇಶ ಕಳಿಸಿದ್ದಾನೆ.
ಬೆಲ್ಗ್ರೇವಿಯಾದಲ್ಲಿ ಸುಮಾರು ರೂ. 20 ಕೋಟಿ ಬೆಲೆಬಾಳುವ ಮನೆಯಲ್ಲಿ ವಾಸವಾಗಿರುವ ಅಯ್ಯೂಬ್ ವೆಸ್ಟ್ ಮಿಂಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಲ್ಲಿ ಹನ್ನಾಳನ್ನು ಸ್ಟಾಕ್ ಮಾಡಿದ ಮತ್ತು ಹಿಂಸಾಸ್ವರೂಪದ ಸಂದೇಶ ಕಳಿಸಿದ್ದನ್ನು ಅಂಗೀಕರಿಸಿದ್ದಾನೆ.
ಮತ್ತೊಮ್ಮೆ ಹನ್ನಾಳ ತಂಟೆಗೆ ಹೋಗೋದಿಲ್ಲ, ಅವಳ ಮನೆಯ ಸುತ್ತಮುತ್ತ ಸುಳಿಯುವುದಿಲ್ಲ ಮತ್ತು ಪ್ರತಿಸಲ ಹೊರಹೋದಾಗ ಕೊರಳಲ್ಲಿ ಜಿಪಿಎಸ್ ಟ್ಯಾಗ್ ಧರಿಸುತ್ತೇನೆ ಅಂತ ಮುಚ್ಚಳಿಕೆ ಬರೆಸಿಕೊಂಡು ಕೋರ್ಟ್ ಅಯ್ಯೂಬ್ ಗೆ ಜಾಮೀನು ನೀಡಿದೆ.
ಡಿಸೆಂಬರ್ 8 ರಂದು ಅವನ ಕೋರ್ಟ್ ಎದುರು ಹಾಜರಾಗಬೇಕಿದೆ. ಆಗ ಕೋರ್ಟ್ ಅವನಿಗೆ ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ.