ತುಮಕೂರು: ಗ್ರಾಮ ಪಂಚಾಯ್ತಿ ಕಚೇರಿಗೆ ಸ್ಫೋಟಕ ಇಟ್ಟು ದುಶ್ಕರ್ಮಿಗಳು ಹಾನಿಯುಂಟು ಮಾಡಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ನಡೆದಿದೆ. ಸ್ಫೋಟದ ರಭಸಕ್ಕೆ ಕಚೇರಿಯ ಗೋಡೆಯಲ್ಲಿ ಬಿರುಕು ಉಂಟಾಗಿದ್ದು, ಸ್ಫೋಟದ ನಂತರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೂದಿಬೆಟ್ಟ ಗ್ರಾಮದಲ್ಲಿ ರಾತ್ರಿ ಸ್ಫೋಟ ಸಂಭವಿಸಿದ್ದು, ಗ್ರಾ.ಪಂ. ಕಚೇರಿಯಲ್ಲಿ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ. ಭಾರಿ ಸ್ಫೋಟದ ಶಬ್ದಕ್ಕೆ ಬೂದಿಬೆಟ್ಟ ಗ್ರಾಮಸ್ಥರು ಬೆಚ್ಚಿಬಿದಿದ್ದಾರೆ. ಘಟನೆಯ ಹಿನ್ನೆಲೆ, ಕಾರಣ ತಿಳಿದುಬಂದಿಲ್ಲ. ವೈ.ಎನ್.ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ
ಮಂಡ್ಯ: ಗ್ಯಾರೇಜ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ದಯಾಮರಣ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ. ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಹೆಚ್.ಜಿ.ಕುಟ್ಟಪ್ಪ ಮತ್ತು ಅವರ ಪತ್ನಿ ವಾಸವಿರುವ ಮನೆಯ ಸಮೀಪದಲ್ಲಿ ವ್ಯಕ್ತಿಯೊಬ್ಬರು ಗ್ಯಾರೇಜ್ ತೆರೆದಿದ್ದಾರೆ. ಇಲ್ಲಿನ ಸಿಬ್ಬಂದಿ ನಿತ್ಯವು ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ವೃದ್ಧ ದಂಪತಿ ಹಲವು ಬಾರಿ ದೂರು ನೀಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ದಯಾಮರಣ ಕೋರಿ ರಾಜ್ಯಲಾಪರಿಗೆ ಅರ್ಜಿ ಸಲ್ಲಿಸಿದ್ದಾರೆ.
ನವವಿವಾಹಿತೆಯ ಬರ್ಬರ ಹತ್ಯೆ
ಬೆಂಗಳೂರು ಗ್ರಾಮಾಂತರ: ಚಾಕುವಿನಿಂದ ಇರಿದು ನವವಿವಾಹಿತೆಯ ಬರ್ಬರ ಹತ್ಯೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ. ಪ್ರೀತಿ ನಿರಾಕರಿಸಿ ಬೇರೊಬ್ಬನ ಜೊತೆ ವಿವಾಹವಾಗಿದ್ದಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಗೈಯಲಾಗಿದೆ. ಪಾಗಲ್ ಪ್ರೇಮಿ ಸುಬ್ರಹ್ಮಣ್ಯ ಎಂಬುವನಿಂದ ಸೌಮ್ಯಾ(23) ಕೊಲೆಯಾದ ದುರ್ದೈವಿ.
ಬೆಂಗಳೂರಿನ ನಾಗವಾರದ ಕಾಫಿ ಡೆನಲ್ಲಿ ಕೆಲಸ ಮಾಡಿಕೊಂಡಿದ್ದ ಸೌಮ್ಯ ಹಾಗೂ ಅಲ್ಲೆ ಕೆಲಸ ಮಾಡಿಕೊಂಡಿದ್ದ ಸುಬ್ರಮಣ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ಸೌಮ್ಯ ಕೆಲಸ ಬಿಟ್ಟಿದ್ದು, ಹದಿನೈದು ದಿನಗಳ ಹಿಂದೆ ಬೆರೊಬ್ಬನ ಜೊತೆ ಮದುವೆಯಾಗಿದ್ದಳು. ಮದುವೆ ವಿಚಾರ ತಿಳಿದ ಸುಬ್ರಮಣ್ಯ ಕೊಲೆ ಮಾಡಲು ನಿರ್ಧರಿಸಿದ್ದಾನೆ. ಅದರಂತೆ ರಾತ್ರಿ ಮನೆಯವರು ಗಣೇಶನ ಪೂಜೆಗೆ ಹೋಗಿದ್ದ ಹಿನ್ನೆಲೆ ಸೌಮ್ಯ ಮನೆಯಲ್ಲಿ ಒಂಟಿಯಾಗಿದ್ದಳು. ಈ ವೇಳೆ ಮನೆಗೆ ನುಗ್ಗಿದ ಸುಬ್ರಮಣ್ಯ ಎರಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.