ಹಾಸನ: ಚನ್ನರಾಯಪಟ್ಟಣ ತಾಲೂಕಿನ ಹೊನ್ನಮಾರನಹಳ್ಳಿಯ ನಟೋರಿಯಸ್ ರೌಡಿಶೀಟರ್ ಹಾಗೂ ಕಾನೂನು ಬಾಹಿರ ಚಟುವಟಿಕೆ ಆರೋಪದಡಿ ಗಡಿಪಾರಾಗಿ ಸದ್ಯ ಕಲಬುರಗಿ ಜೈಲಿನಲ್ಲಿರುವ ಮತ್ತೊಬ್ಬ ರೌಡಿ ಶೀಟರ್ ಯಾಚೇನಹಳ್ಳಿ ಚೇತುವಿನ ಮಾಜಿ ಶಿಷ್ಯನಾಗಿದ್ದ ಮಾಸ್ತಿಗೌಡ ಅಲಿಯಾಸ್ ಕೃಷ್ಣ (3೦)ನನ್ನು ಹಾಡುಹಗಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ. ಪಟ್ಟಣದ ಬಿಎಂ ರಸ್ತೆಯಲಿರುವ ಧನಲಕ್ಷ್ಮೀ ಚಿತ್ರಮಂದಿರದ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರನ್ನು ಬೆಚ್ಚಿ ಬಿದ್ದಿದ್ದಾರೆ.
ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳು ಮಾಸ್ತಿಗೌಡನನ್ನು ಬೆನ್ನಟ್ಟಿದ್ದಾರೆ. ಆತ ಓಡಲು ಆರಂಭಿಸುತ್ತಿದ್ದಂತೆಯೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ನಡುರಸ್ತೆಯಲ್ಲಿ ಅಟ್ಟಾಡಿಸಿದ ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ. ತಲೆ, ಕೈ ಸೇರಿದಂತೆ ದೇಹದ ವಿವಿಧ ಭಾಗಳಿಗೆ ಮನಬಂದಂತೆ ಬಿದ್ದ ಏಟುಗಳಿಂದ ಗಂಭೀರ ಗಾಯಗೊಂಡ ಮಾಸ್ತಿಗೌಡ ಕೆಲವು ನಿಮಿಷಗಳ ನಂತರ ಮೃತಪಟ್ಟಿದ್ದಾನೆ.
ಇದನ್ನೂ ಓದಿ: Delhi: ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ, ಹಸೆಮಣೆ ಏರಬೇಕಿದ್ದವನ ಬರ್ಬರ ಹತ್ಯೆ, ಇಬ್ಬರ ಬಂಧನ
ಪಟ್ಟಣದಲ್ಲಿ ಆಗಾಗ್ಗೆ ರೌಡಿ ಶೀಟರ್‌ಗಳ ಹೊಡೆದಾಟ, ಬಡಿದಾಟ ಮರುಕಳಿಸುತ್ತಿದ್ದು, ಮಾಸ್ತಿಗೌಡನ ಬರ್ಬರ ಕೊಲೆಯಿಂದ ಇದೀಗ ಚನ್ನರಾಯಪಟ್ಟಣ ಜನತೆ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಚನ್ನರಾಯಪಟ್ಟಣ ಡಿವೈಎಸ್ಪಿ ರವಿಪ್ರಸಾದ್, ನಗರ ಠಾಣೆ ಇನ್ಸ್‌ಪೆಕ್ಟರ್ ಕೆ.ಎಂ. ವಸಂತ್, ಶ್ವಾನದಳ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಹಿಂದೆ ಕೊಲೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾಸ್ತಿಗೌಡ ಒಂದು ಕಾಲದಲ್ಲಿ ಕುಖ್ಯಾತ ರೌಡಿಶೀಟರ್ ಯಾಚೇನಹಳ್ಳಿ ಚೇತು ಶಿಷ್ಯನಾಗಿದ್ದ. ನಂತರದಲ್ಲಿ ಸಣ್ಣಪುಟ್ಟ ಮನಸ್ತಾಪದಿಂದ ಗುರು-ಶಿಷ್ಯರ ನಡುವೆ ವೈಷಮ್ಯ ಮೂಡಿ ಇಬ್ಬರು ಬೇರೆಯಾಗಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರು.
ಈ ನಡುವೆ ಚನ್ನರಾಯಪಟ್ಟಣದವನೇ ಆದ ಮತ್ತೊಬ್ಬ ರೌಡಿಶೀಟರ್ ಬಾಂದು ಕಿರಣ್ ಎಂಬಾತನನ್ನು ಚೇತು ಅಪಹರಣ ಮಾಡಿ, 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅದಾದ ಬಳಿಕ ಮತ್ತೆ ಯಾಚೇನಹಳ್ಳಿ ಚೇತು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ. ಇದಾದ ಬಳಿಕ ಬಾಂದು ಕಿರಣ್, ಮಾಸ್ತಿಗೌಡನ ಮೊರೆ ಹೋಗಿ, ಹೇಗಾದರೂ ಮಾಡಿ ಚೇತುನನ್ನು ಮುಗಿಸಬೇಕು ಎಂದು ಬಾಂದು ಕಿರಣ್ ಮತ್ತು ಮಾಸ್ತಿಗೌಡ ಅಂಡ್ ಗ್ಯಾಂಗ್ ಸ್ಕೆಚ್ ಹಾಕಿತ್ತು.
ಒಂದು ದಿನ ಚನ್ನರಾಯಪಟ್ಟಣದ ಹೊರ ವಲಯದಲ್ಲಿ ಯಾಚೇನಹಳ್ಳಿಯಿಂದ ಬರುತ್ತಿದ್ದ ಚೇತು ಮೇಲೆ ಗ್ಯಾಂಗ್ ಫೈರಿಂಗ್ ಮಾಡಿತ್ತು. ಆದರೆ ಚೇತು ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಬಚಾವಾಗಿದ್ದ. ಆಗಿನಿಂದಲೂ ಇಬ್ಬರ ನಡುವೆ ಹಗೆತನ ಮುಂದುವರಿದೇ ಇತ್ತು. ನಂತರದಲ್ಲೂ ಚೇತು ಕೊಲೆ, ಕೊಲೆಯತ್ನ ಸುಲಿಗೆ, ಮೊದಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರಿಂದ ಈತನನ್ನು ಇತ್ತೀಚೆಗೆ ಮತ್ತೊಂದು ವರ್ಷ ಗಡಿಪಾರು ಮಾಡಿ ದೂರದ ಕಲಬುರಗಿ ಜೈಲಿಗೆ ಕಳಿಸಲಾಗಿದೆ.
ಇದಕ್ಕೂ ಮುನ್ನ ಒಂದು ವರ್ಷದ ಹಿಂದೆ ನಟೋರಿಯಸ್ ರೌಡಿಶೀಟರ್ ಚೇತನ್ ಮೇಲೆ ಇಂದು ಕೊಲೆಯಾಗಿರುವ ಮಾಸ್ತಿಗೌಡ ಫೈರಿಂಗ್ ಮಾಡಿದ್ದ. ಇದೀಗ ತಂಡವೊಂದು ಸ್ಕೆಚ್ ಹಾಕಿ ಮಾಸ್ತಿಗೌಡನನ್ನೇ ಮುಗಿಸಿದೆ. ಈ ಮೂಲಕ ಚನ್ನರಾಯಪಟ್ಟಣದಲ್ಲಿ ಮತ್ತೊಮ್ಮೆ ರೌಡಿ ಪಟಾಲಂ ಮಚ್ಚುಲಾಂಗು ಝಳಪಿಸಿದ್ದು, ಜನರು ಸಹಜವಾಗಿಯೇ ಭಯಭೀತರಾಗಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ