ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯ ಜಮ್ವಾ ರಾಮಗಢದಲ್ಲಿ 55 ವರ್ಷದ ಮಹಿಳೆಯನ್ನು ಹಾಡಹಗಲೇ ಕೊಂದಿರುವ ದರೋಡೆಕೋರರು ಆಕೆಯ ಕಾಲಿನಲ್ಲಿದ್ದ ಬೆಳ್ಳಿಯ ಗೆಜ್ಜೆಗಳನ್ನು ತೆಗೆಯಲಾಗದೆ ಪಾದಗಳನ್ನೇ ಕತ್ತರಿಸಿದ್ದಾರೆ. ಕಳ್ಳರು ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನು ದೋಚಿಕೊಂಡು ಓಡಿಹೋಗುವ ಮುನ್ನ ಮನೆಯ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೊಂದು ಆಕೆಯ ಸರ, ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ.
ನಿನ್ನೆ ಈ ಭೀಕರ ಘಟನೆ ನಡೆದಿದ್ದು, ದರೋಡೆಕೋರರ ವಿಕೃತ ವರ್ತನೆ ಸ್ಥಳೀಯರಿಗೆ ಆಘಾತ ಉಂಟು ಮಾಡಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯರು ಹಾಗೂ ಮೃತ ಮಹಿಳೆಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಸಂತ್ರಸ್ತೆಯನ್ನು ಚಾವಂಡಿಯಾದ ಖತೇಪುರ ಗ್ರಾಮ ನಿವಾಸಿ ಗೀತಾ ದೇವಿ ಶರ್ಮ ಎಂದು ಗುರುತಿಸಲಾಗಿದೆ. ತನ್ನ ಮನೆಯ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಹಣವನ್ನು ಬಾಚಿಕೊಂಡಿದ್ದಾರೆ. ನಂತರ ಶಬ್ದ ಕೇಳಿ ಮನೆಯತ್ತ ಬರುತ್ತಿದ್ದ ಆಕೆ ಮೇಲೆ ಹೊಲದಲ್ಲೇ ದಾಳಿ ಮಾಡಿದ ದರೋಡೆಕೋರರು ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಆಕೆಯನ್ನು ಕೊಲೆ ಮಾಡಿ ಓಡಿಹೋಗುವಾಗ ಕೆಳಗೆ ಬಿದ್ದಿದ್ದ ಆಕೆಯ ಕಾಲಿನಲ್ಲಿದ್ದ ಬೆಳ್ಳಿ ಗೆಜ್ಜೆ ಅವರ ಕಣ್ಣಿಗೆ ಬಿದ್ದಿದೆ.
ಯಾರಾದರೂ ತಮ್ಮನ್ನು ನೋಡುವ ಮುಂಚೆ ಓಡಿಹೋಗಬೇಕೆಂಬ ಆತುರದಲ್ಲಿದ್ದ ಅವರಿಗೆ ಆ ಬೆಳ್ಳಿ ಗೆಜ್ಜೆಯನ್ನು ತೆಗೆಯಲು ಸಾಧ್ಯವಾಗಿಲ್ಲ. ಹೀಗಾಗಿ, ಆ ಮಹಿಳೆಯ ಪಾದಗಳನ್ನೇ ಕತ್ತರಿಸಿ ಗೆಜ್ಜೆಯನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಮೇಲ್ನೋಟಕ್ಕೆ ಇದು ದರೋಡೆಗಾಗಿಯೇ ನಡೆದ ಕೊಲೆ ಎಂದು ಕಂಡುಬರುತ್ತಿದೆ. ಇದರ ಹಿಂದೆ ಸ್ಥಳೀಯರ ಕೈವಾಡವಿದೆಯೇ ಅಥವಾ ವೃತ್ತಿಪರ ದರೋಡೆಕೋರರ ಕೈವಾಡವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬರ್ಬರ ಹತ್ಯೆ ಪ್ರಕರಣ ಸುತ್ತಮುತ್ತಲಿನವರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹಳ್ಳಿಗಳಲ್ಲೂ ಸುರಕ್ಷಿತವಾಗಿರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಊರಿನವರು ಆತಂಕ ಹೊರಹಾಕಿದ್ದು, ಬೇಗನೆ ಆರೋಪಿಗಳನ್ನು ಕಂಡುಹಿಡಿಯುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಕೊಲೆ ನಡೆದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸಂತ್ರಸ್ತೆಯ ಕುಟುಂಬವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೋರಿದೆ. ಹಾಗೇ, ರಾಜಸ್ಥಾನ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಕೋರಿದೆ. ನನ್ನ ತಾಯಿ ಇಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಯಾರು ದಾಳಿ ಮಾಡಿದರು ಎಂದು ನಮಗೆ ತಿಳಿದಿಲ್ಲ. ತನಿಖೆಗಳ ಬಗ್ಗೆ ಪೋಲಿಸರು ನಮಗೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಅಶೋಕ್ ಗೆಹ್ಲೋಟ್ ಸರ್ಕಾರದಿಂದ ಇಲ್ಲಿಯವರೆಗೆ ಯಾರೂ ಪರಿಸ್ಥಿತಿಯನ್ನು ಅವಲೋಕಿಸಲು ಭೇಟಿ ನೀಡಿಲ್ಲ ಎಂದು ಸಂತ್ರಸ್ತೆಯ ಮಗ ರಾಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Murder: ಉತ್ತರ ಪ್ರದೇಶದಲ್ಲಿ ಕೋರ್ಟ್ ಒಳಗೇ ವಕೀಲನಿಗೆ ಗುಂಡು ಹಾರಿಸಿ ಬರ್ಬರ ಹತ್ಯೆ
Kerala Snake Bite Murder: ಹೆಂಡತಿಗೆ ಹಾವಿನಿಂದ ಕಚ್ಚಿಸಿ ಕೊಲೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ