ಸ್ನೇಹಿತನ ಎಟಿಎಂನಲ್ಲಿ ಹಣ ನೋಡಿ ಕೊಲೆ; ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲಿ ಹತ್ಯೆ ರಹಸ್ಯ ಬಯಲು, ಆರೋಪಿ ಅರೆಸ್ಟ್
ಅವರಿಬ್ಬರು ನೆರೆಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡಿದ್ದು, ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಸ್ನೇಹಿತನ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿದ್ದಿದ್ದನ್ನು ಕಂಡು, ಹಣ ಲಪಟಾಯಿಸಲು ಸಂಚು ಮಾಡಿ ಕೊಲೆ ಮಾಡಿದ್ದ. ಬಳಿಕ ಅನುಮಾನ ಬಾರದಂತೆ ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದ. ಈ ಅನುಮಾನಸ್ಪದ ಸಾವಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಕೊಲೆ ರಹಸ್ಯ ಭೇದಿಸಿದ್ದಾರೆ.
ಬೆಂಗಳೂರು, ಏ.11: ಕಳೆದ ಪೆಬ್ರವರಿ 22 ರಂದು ತರಬನಹಳ್ಳಿ ಬಳಿಯ ರಸ್ತೆ ಬದಿಯೊಂದರ ಬಳಿ ಉತ್ತರಕಾಂಡ ಮೂಲದ ರಾಜು ರಾವತ್ (49) ಎಂಬುವವರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಚಿಕ್ಕಜಾಲ ಪೊಲೀಸರು (Chikkajala Police)ಪರಿಶೀಲನೆ ನಡೆಸಿದ್ದರು. ಈ ವೇಳೆ ಮೃತ ರಾಜು ರಾವತ್ ತಲೆಗೆ ಪೆಟ್ಟಾಗಿ ಗಾಯಗಳಾಗಿದ್ದು, ಅನುಮಾನಾಸ್ಪದವಾಗಿ ಬಿದ್ದಿದ್ದ ಶವವನ್ನ ನೋಡಿದ್ದ ಜನ, ಕುಡಿದು ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿರಬಹುದು ಅಂದುಕೊಂಡಿದ್ದರು. ಇನ್ನು ಪೊಲೀಸರು ಸಹ ಇದೇ ಗುಮಾನಿ ಮೇಲೆ ಮೃತ ರಾಜು ರಾವತ್ನ ಮೃತದೇಹವನ್ನ ಶವಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಯುಡಿಆರ್ ಕೇಸ್ ದಾಖಲು ಮಾಡಿಕೊಂಡಿದ್ದರು. ಜೊತೆಗೆ ಪೋಸ್ಟ್ ಮಾರ್ಟಮ್ ವರದಿಗೆ ಕಾಯುತ್ತಿದ್ದ ಚಿಕ್ಕಜಾಲ ಪೊಲೀಸರು ರಿಪೋರ್ಟ್ ಬರುತ್ತಿದ್ದಂತೆ ಶಾಕ್ ಆಗಿದ್ದರು. ರಾಜು ರಾವತ್ ಮೇಲೆ ಬಲವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವುದು ತಿಳಿದಿತ್ತು. ವರದಿ ಬಳಿಕ ಕೊಲೆ ಕೇಸ್ ದಾಖಲಿಸಿಕೊಂಡ ಚಿಕ್ಕಜಾಲ ಪೊಲೀಸರು, ಇದೀಗ ತನಿಖೆ ನಡೆಸಿ ಎಸ್ಕೇಪ್ ಅಗಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ಹಣಕ್ಕಾಗಿ ಜೊತೆಯಲ್ಲಿದ್ದು ಸ್ನೇಹಿತನಿಗೆ ಕೊಳ್ಳಿಯಿಟ್ಟ ಭೂಪ
ಕೊಲೆಯಾದ ರಾಜು ರಾವತ್, ಕಳೆದ 17 ವರ್ಷಗಳಿಂದ ತರಬನಹಳ್ಳಿ ಬಳಿಯ ಒಲ್ಡ್ ಬೆಂಗಳೂರು ವಿಲ್ಲಾ ಬಳಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ತನ್ನ ಜೊತೆಗೆ ತ್ರಿಪುರ ಮೂಲದ ಸುಮನ್ ದಾಸ್ ಎಂಬುವವನನ್ನು ಸಹ ಕೆಲಸಕ್ಕೆ ಸೇರಿಸಿಕೊಂಡಿದ್ದ. ಇಬ್ಬರು ದೂರದ ರಾಜ್ಯಗಳಿಂದ ಬಂದು ನೆಲೆಸಿದ್ದ ಕಾರಣ, ಇಬ್ಬರ ಮಧ್ಯೆ ಸ್ನೇಹವಾಗಿದ್ದು, ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರಂತೆ. ಜೊತೆಗೆ ಇಬ್ಬರು ಹೊರಗಡೆ ಹೋದಾಗ ಆನ್ಲೈನ್ ಪೇಮೆಂಟ್ ಮಾಡುತ್ತಿದ್ದ ಕಾರಣ, ರಾಜು ರಾವತ್ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಪಾಸವರ್ಡ್ ಸುಮಾನ್ ದಾಸ್ಗೆ ಗೊತ್ತಾಗಿದೆ. ಹೀಗಾಗಿ ಬ್ಯಾಂಕ್ ಬ್ಯಾಲೆನ್ಸ್ ನೋಡ್ತಿದ್ದಂತೆ ಹಣದ ಮೇಲೆ ಕಣ್ಣಾಕಿದ ಸುಮನ್ ದಾಸ್, ಹಣವನ್ನ ಎಗರಿಸಬೇಕು ಎಂದು ಸ್ಕೇಚ್ ಹಾಕಿದ್ದಾನೆ.
ಜೊತೆಗೆ ಪೆಬ್ರವರಿ 22 ರಂದು ಕೆಲಸ ಮುಗಿಸಿಕೊಂಡು ಬರುತ್ತಿದ್ದ ರಾಜುಗಾಗಿ ಕಾದು ಕುಳಿತಿದ್ದ ಸುಮನ್ ದಾಸ್, ರಾಜು ರಾವತ್ ತಲೆಗೆ ಹಿಂದಿನಿಂದ ಬಂದು ದೊಣ್ಣೆಯಿಂದ ಹೊಡೆದಿದ್ದಾನೆ. ಈ ವೇಳೆ ತಲೆಗೆ ಹೊಡೆಯುತ್ತಿದ್ದಂತೆ ರಾವತ್ ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದು, ಮೃತದೇಹವನ್ನ ರಸ್ತೆಯ ಪಕ್ಕದ ಹಳ್ಳಕ್ಕೆ ತಳ್ಳಿ ಎಸ್ಕೇಪ್ ಆಗಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿ ಸುಮನ್ ದಾಸ್ ಚಿಕ್ಕಜಾಲ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿ:ಗಂಡ-ಹೆಂಡತಿ ಜಗಳ; ಎರಡನೇ ಪತ್ನಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪತಿ
ಒಟ್ಟಾರೆ ನೆರೆಯ ರಾಜ್ಯದಿಂದ ಬದುಕು ಕಟ್ಟಿಕೊಳ್ಳಲು ಬಂದು ತನ್ನ ಸಹುದ್ಯೂಗಿ ಸ್ನೇಹಿತನಿಂದಲೇ ರಾಜು ರಾವತ್ ಕೊಲೆಯಾಗಿದ್ದು ನಿಜಕ್ಕೂ ದುರಂತ. ಎಟಿಎಂನಲ್ಲಿದ್ದ ಹಣದ ಆಸೆಗೆ ಜೀವ ತೆಗೆದು ತಲೆಮರೆಸಿಕೊಂಡಿದ್ದ ಆರೋಪಿ ಸುಮನ್ ದಾಸ್ ಇದೀಗ ಮಾಡಿದ ತಪ್ಪಿಗೆ ಪರಪ್ಪನ ಅಗ್ರಹಾರ ಸೇರಿ ಕಂಬಿ ಎಣಿಸುತ್ತಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Thu, 11 April 24