ಮೈಸೂರು: ಬುದ್ದಿವಾದ ಹೇಳಿದಕ್ಕೆ ಕಬಾಬ್​ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿದ ಧುರಳರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 18, 2023 | 9:51 PM

ಯಾರಾದ್ರೂ ತಪ್ಪು ಮಾಡಿದಾಗ ಅದನ್ನು ನೋಡಿದವರು ಬುದ್ದಿ ಹೇಳೋದು ಸಹಜ. ಹಾಗಂತಾ ಬುದ್ದಿ ಹೇಳಿದವರನ್ನೇ ಕೊಲೆ ಮಾಡಿದ್ರೆ ಹೇಗೆ. ಅಂತಹ ಒಂದು ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು: ಬುದ್ದಿವಾದ ಹೇಳಿದಕ್ಕೆ ಕಬಾಬ್​ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿದ ಧುರಳರು
ಮೈಸೂರಿನಲ್ಲಿ ಬುದ್ದಿವಾದ ಹೇಳಿದ ಕಾರಣಕ್ಕೆ ಕೊಲೆ ಮಾಡಿದ ಧುರುಳರು
Follow us on

ಮೈಸೂರು: ನಗರದ ಕಲ್ಯಾಣಗಿರಿಯು ಸದಾ ಜನರಿಂದ ಗಿಜಿಗುಡುವ ಪ್ರದೇಶ. ಆ ಪ್ರದೇಶದಲ್ಲಿ ಅವತ್ತು ಮೌನ ಆವರಿಸಿತ್ತು. ಅದಕ್ಕೆ ಕಾರಣ ಅಲ್ಲಿ ನಡೆದಿದ್ದ ಕಿಡ್ನ್ಯಾಪ್ ಅಂಡ್ ಮರ್ಡರ್. ಹೌದು ಕಲ್ಯಾಣಗಿರಿಯಲ್ಲಿ ಕಬಾಬ್ ಅಂಗಡಿ ಇಟ್ಟುಕೊಂಡಿದ್ದ ಸಯ್ಯದ್ ಮನ್ಸೂರ್ ಎಂಬಾತ ಹೆಣವಾಗಿದ್ದ. ಮನ್ಸೂರ್ ಮೃತದೇಹ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನಾಲೆಯಲ್ಲಿ ತೇಲುತಿತ್ತು. ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದ ಸೈಯದ್ ಮನ್ಸೂರ್ ನಾಲೆಯಲ್ಲಿ ಹೆಣವಾಗಿದ್ದು ಹೇಗೆ ಅನ್ನೋದು ಎಲ್ಲರ ಪ್ರಶ್ನೆ ಆಗಿತ್ತು. ಮನ್ಸೂರ್ ಯಾವುದೇ ಜಗಳಕ್ಕೆ ಹೋದವನಲ್ಲ. ತಾನಾಯಿತು ತನ್ನ ಕಬಾಬ್ ಅಂಗಡಿಯಾಯಿತು ಅಂತ ಇದ್ದವನು. ಹೀಗೆ ಇದ್ದ ಅಸಾಮಿಯನ್ನ ಅದು ಯಾರು ಈ ರೀತಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಅನ್ನುವಂತಹ ಪ್ರಶ್ನೆ ಎಲ್ಲರನ್ನ ಕಾಡುತ್ತಿತ್ತು.

ಕಲ್ಯಾಣ ಗಿರಿಯಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದ ಮನ್ಸೂರ. ವ್ಯಾಪಾರ ಚೆನ್ನಾಗಿಯೇ ನಡೆದಿತ್ತು. ಪ್ರತಿ ದಿನ ನೂರಾರು ಜನ ಇಲ್ಲಿಗೆ ಬರುತ್ತಿದ್ದರು. ಅದರಲ್ಲಿ ಜಬೀ, ಶಾರೀಕ್, ಝೈನುಲ್ಲಾ, ಇಕ್ಬಾಲ್ ಪದೇ ಪದೇ ಮನ್ಸೂರ್ ಕಬಾಬ್ ಅಂಗಡಿಗೆ ಬರುತ್ತಿದ್ದರು. ಬಂದವರು ಗಂಟೆಗಟ್ಟಲೇ ಕೂರುತ್ತಿದ್ದರು. ಸುಮ್ಮನೆ ಕುಳಿತುಕೊಳ್ಳುತ್ತಿದ್ದರೆ ಏನು ಇರಲಿಲ್ಲ. ಆದ್ರೆ ಆ ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳನ್ನು ರೇಗಿಸುತ್ತಿದ್ದರು. ಅಷ್ಟೇ ಅಲ್ಲ ಅಲ್ಲಿ ಬರುವ ಹಿರಿಯರನ್ನು ಕಿಚಾಯಿಸುತ್ತಿದ್ದರು. ಇದು ಸಹಜವಾಗಿ ಮನ್ಸೂರ್ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಕಷ್ಟು ಬಾರಿ ಮನ್ಸೂರ್ ಎಲ್ಲರಿಗೂ ಬುದ್ದಿ ಹೇಳಿದ್ರು ಪ್ರಯೋಜನವಾಗಿರಲಿಲ್ಲ. ಕೊನೆಗೆ ಮನ್ಸೂರ್ ತನ್ನ ಸಂಬಂಧಿಕರ ಜೊತೆ ಸೇರಿ ನಾಲ್ವರಿಗೂ ಧರ್ಮದೇಟು ನೀಡಿ ಕಳುಹಿಸಿದ್ದ. ಇದಾದ ನಂತರ ಅವರು ಮತ್ತೆ ಕಬಾಬ್ ಅಂಗಡಿ ಕಡೆ ತಲೆ ಹಾಕಿರಲಿಲ್ಲ.

ಇದಾದ ನಂತರ ಧರ್ಮದೇಟು ತಿಂದ ನಾಲ್ವರು‌ ಮನ್ಸೂರ್ ವಿರುದ್ದ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಅವತ್ತು ಭಾನುವಾರ ಮನ್ಸೂರ್ ಕಬಾಬ್ ಅಂಗಡಿ ರಜೆ ಇತ್ತು. ಹೀಗಾಗಿ ಮನ್ಸೂರ್ ಒಬ್ಬನೇ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ. ಮನ್ಸೂರ್ ಒಬ್ಬನೆ ಇರೋದನ್ನು ನೋಡಿದ ಜಬೀ, ಶಾರೀಕ್, ಝೈನುಲ್ಲಾ, ಇಕ್ಬಾಲ್ ಮನ್ಸೂರ್‌ನನ್ಜು ಅಪಹರಿಸಿದ್ದಾರೆ. ಅವರ ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನ್ಸೂರ್‌ನನ್ನು ಅಪಹರಿಸಿದ ನಾಲ್ವರು ಆತನನ್ನು ಪಾಳು ಬಿದ್ದ ಮನೆಯೊಂದರಲ್ಲಿ ಇರಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಪಾಪಿಗಳ ಟಾರ್ಚ್ ತಾಳಲಾರದೆ ಮನ್ಸೂರ್ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ಸತ್ತು ಹೋದ ಮನ್ಸೂರ್ ಮೃತದೇಹವನ್ನು ನಾಲ್ವರು ಸೇರಿ ಗೋಣಿ ಚೀಲದಲ್ಲಿ ಹಾಕಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನಾಲೆಗೆ ಎಸೆದಿದ್ದಾರೆ.

ಇದನ್ನೂ ಓದಿ:ಶಿವರಾತ್ರಿ ಪ್ರಯುಕ್ತ ಬಿಜೆಪಿ ಮುಖಂಡ ಆಯೋಜಿಸಿದ್ದ ಕ್ರಿಕೆಟ್​ ಟೂರ್ನಮೆಂಟ್​ನಲ್ಲಿ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯ

ಯಾವಾಗ ಮನ್ಸೂರ್ ನಾಪತ್ತೆಯಾದನೋ ಮನ್ಸೂರ್ ಮನೆಯವರು ಮೈಸೂರಿನ ನರಸಿಂಹ ರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಬೀ, ಶಾರೀಕ್, ಝೈನುಲ್ಲಾ, ಇಕ್ಬಾಲ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಅಲರ್ಟ್ ಆದ ನರಸಿಂಹರಾಜ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶದಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಈ ನಾಲ್ವರು ಸೇರಿ ಮನ್ಸೂರ್ ಅಪಹರಣ ಮಾಡಿದ್ದು ಗೊತ್ತಾಗಿದೆ. ತಕ್ಷಣ ಪೊಲೀಸರು ಝೈನುಲ್ಲಾ ಹಾಗೂ ಶಾರೀಕ್‌ನನ್ಜು ವಶಕ್ಕೆ ಪಡದು ವಿಚಾರಣೆ ನಡೆಸಿದ್ದಾರೆ. ಮೊದ ಮೊದಲು ತಾವು ಏನು ಮಾಡಿಲ್ಲ ನಮಗೇನು ಗೊತ್ತಿಲ್ಲ ಅಂತಾ ನಾಟಕವಾಡಿದ್ದಾರೆ. ಯಾವಾಗ ಪೊಲೀಸರು ತಮ್ಮ ಭಾಷೆಯಲ್ಲಿ ಕೇಳಿದ್ರೋ ಆಗ ತಾವು ಮಾಡಿದ ಕೃತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಂತರ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದೆಲ್ಲಾ ಏನೇ ಇರಲಿ ಕೇವಲ ಬುದ್ದಿ ಹೇಳಿದಕ್ಕೆ ಪಾಪಿಗಳು ಅಮಾಯಕನನ್ನು ಕೊಲೆ ಮಾಡಿದ್ದು ಮಾತ್ರ ದುರಂತವೇ ಸರಿ.

ವರದಿ: ರಾಮ್ ಟಿವಿ9 ಮೈಸೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:50 pm, Sat, 18 February 23