AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣದಾಸೆಗೆ ಗೆಳೆಯನ ಕೊಲೆ: ಸ್ನೇಹಿತನ ದುಡ್ಡಲ್ಲೇ 2ನೇ ಪತ್ನಿಗೆ ಟಿವಿ ಗಿಫ್ಟ್ ನೀಡಿದ್ದ ಆಸಾಮಿ ಅರೆಸ್ಟ್

ಮೂರು ಲಕ್ಷ ರೂ ಹಣದಾಸೆಗೆ ಓರ್ವ ಸ್ನೇಹಿತ ಏಳು ವರ್ಷದ ಗೆಳೆತನಕ್ಕೆ ಕೊಳ್ಳಿ ಇಟ್ಟ ಘಟನೆಯೊಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಡೆದಿದೆ. ಚಿನ್ನ ಖರೀದಿಸುವ ನೆಪದಲ್ಲಿ ಕಾಡಿಗೆ ಕರೆತಂದು ಕೊಲೆಗೈಯಲಾಗಿದೆ. ಕೊಲೆ ಬಳಿಕ ಗೆಳೆಯನ ಹಣದಿಂದಲೇ ಎರಡನೇ ಪತ್ನಿಗೆ ಹೊಸ ಟಿವಿ ಖರೀದಿಸಿ ಗಿಫ್ಟ್ ನೀಡಿದ್ದ ಆಸಾಮಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಹಣದಾಸೆಗೆ ಗೆಳೆಯನ ಕೊಲೆ: ಸ್ನೇಹಿತನ ದುಡ್ಡಲ್ಲೇ 2ನೇ ಪತ್ನಿಗೆ ಟಿವಿ ಗಿಫ್ಟ್ ನೀಡಿದ್ದ ಆಸಾಮಿ ಅರೆಸ್ಟ್
ಶಫೀImage Credit source: tv9 kannada
Jagadisha B
| Edited By: |

Updated on: Mar 06, 2026 | 4:10 PM

Share

ತುಮಕೂರು, ಮಾರ್ಚ್​​ 06: ಜಿಲ್ಲೆಯ ತಿಪಟೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪ್ರಕರಣಕ್ಕೆ ಇದೀಗ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಮೂರು ಲಕ್ಷ ರೂ ಹಣದಾಸೆಗೆ 7 ವರ್ಷದ ಸ್ನೇಹಕ್ಕೆ ಗೆಳೆಯ ಕೊಳ್ಳಿ ಇಟ್ಟಿದ್ದಾನೆ. ಕೊಲೆ (murder) ಬಳಿಕ ಗೆಳೆಯನ ಹಣದಲ್ಲೇ ಎರಡನೇ ಪತ್ನಿಗೆ ಹೊಸ ಟಿವಿ ಖರೀದಿಸಿ ಗಿಫ್ಟ್ ನೀಡಿದ್ದ. ಅಷ್ಟೇ ಅಲ್ಲದೆ ಪತ್ನಿಯೊಂದು ಲಾಡ್ಜ್​ನಲ್ಲಿ ಮಸ್ತಿ ಮಾಡಿ ಪರಾರಿಯಾಗಿದ್ದ ಭೂಪನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹೊನ್ನವಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಡೆದಿದ್ದೇನು?

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಅರಣ್ಯ ಪ್ರದೇಶ. ಸುತ್ತಲೂ ಖಾಲಿ ಜಾಗ. ಎತ್ತನೋಡದರೂ ಕಾಣದ ಸೂರು. ನಿಜ ಹೇಳಬೇಕೆಂದರೇ ಅದೊಂದು ನಿರ್ಜನ ಸ್ಥಳ. ಆ ಸ್ಥಳದಲ್ಲಿ ಕಳೆದ ಫೆಬ್ರವರಿ 20ರ ಬೆಳಿಗ್ಗೆಯಂದು ಅರಣ್ಯ ಪ್ರದೇಶದಲ್ಲಿ ಹಾದು ಹೊಗುವ ದಾರಿಯ ಪಕ್ಕದಲ್ಲಿ ಅದೊಬ್ಬ ಅಪರಿಚಿತನ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳು ಆ ವ್ಯಕ್ತಿಯ ಕತ್ತು ಸೀಳಿ ಹತ್ಯೆಗೈದಿದ್ದರು. ಅರಣ್ಯ ದಾರಿಯಲ್ಲಿ ಹೆಜ್ಜೆ ಹಾಕಿದ್ದ ಅದೊಬ್ಬ ಶವ ಕಂಡು ಬೆಚ್ಚಿ ಬಿದಿದ್ದ. ಕೂಡಲೇ ಹೊನ್ನವಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದ.

ಇದನ್ನೂ ಓದಿ: ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು

ಸ್ಥಳಕ್ಕೆ ಬಂದ ಪೊಲೀಸರಿಗೆ ಗೊಂದಲ. ಕೊಲೆ ಮಾಡಿದ್ಯಾರು ಅನ್ನೊದಕ್ಕಿಂತ ಅಲ್ಲಿ ಕೊಲೆಯಾದವನು ಯಾರು ಅನ್ನೊದೇ ಪೊಲೀಸರಿಗೆ ಪ್ರಶ್ನೆಯಾಗಿತ್ತು. ಹೀಗಾಗಿ ಅಲ್ಲಿ ಸಿಕ್ಕ ಒಂದಷ್ಟು ಮಾಹಿತಿಗಳ ಮುಖಾಂತರ ತನಿಖೆ ಆರಂಭಿಸಿದ ಪೊಲೀಸರಿಗೆ ಮೃತ ವ್ಯಕ್ತಿ ಪುಟ್ಟರಾಜು ಎಂಬುದು ಗೊತ್ತಾಗಿತ್ತು. ಇನ್ನು ಈತ ಚಿಕ್ಕಮಗಳೂರಿನ ಬೀರೂರು ನಿವಾಸಿ ಅನ್ನೊ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.

ಲಕ್ಷ ಲಕ್ಷ ಹಣ ತಂದಿದ್ದ ಪುಟ್ಟರಾಜು 

ಅಸಲಿಗೆ ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತಿದ್ದ ಪುಟ್ಟರಾಜು ತುಮಕೂರು ಬಂದಿದ್ದು ಏಕೆ ಎನ್ನುವ ಗೊಂದಲದ ಜೊತೆ ಕೊಲೆಯಾಗಿದ್ದೇಕೆ ಎಂಬ ಪ್ರಶ್ನೆ ಮೂಡಿತ್ತು. ಹೀಗಾಗಿ ಕೊಲೆಯಾದವನು ಗುರುತು ಪತ್ತೆ ಬೆನ್ನಲ್ಲೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಪುಟ್ಟರಾಜು ವಿಳಾಸ ಸಿಕ್ಕಿತ್ತು. ಅಸಲಿಗೆ ಫೆಬ್ರವರಿ 19ರಂದು, ಅಂದರೆ ಕೊಲೆಯ ಹಿಂದಿನ ದಿನ ಬೆಳಿಗ್ಗೆ 11 ಗಂಟೆಗೆ ಪುಟ್ಟರಾಜು ಬಿರೂರಿನ ತನ್ನ ಮನೆಯಿಂದ ಹೊರ ಬಂದಿದ್ದ. ಈ ವೇಳೆ ಕೈನಲ್ಲಿ ಲಕ್ಷ ಲಕ್ಷ ಹಣ ಹಿಡಿದಿದ್ದ ಪುಟ್ಟರಾಜು ಹೊನ್ನವಳ್ಳಿಯ ಚಿನ್ನದ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗೊದಾಗಿ ಹೇಳಿದ್ದ. ಈ ವೇಳೆ ಬಂದಿದ್ದ ಶಫೀ ಎಂಬ ಏಳು ವರ್ಷದ ಗೆಳೆಯನ ಜೊತೆ ಬೈಕ್ ಹತ್ತಿದ್ದ ಪುಟ್ಟರಾಜು ತುಮಕೂರಿನತ್ತ ಹೊರಟಿದ್ದ. ಅಷ್ಟೇ ಮರು ದಿನ ಪುಟ್ಟರಾಜು ಶವವಾಗಿ ಪತ್ತೆಯಾಗಿದ್ದ. ಆದರೆ ಈ ವೇಳೆ ಆತನ ಜೊತೆ ಹೊರಟಿದ್ದ ಗೆಳೆಯ ಶಫಿ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ. ಹೀಗಾಗಿ ಇಬ್ಬರ ಬಳಿ ಇದ್ದ ಹಣಕ್ಕಾಗಿಯೋ ಅಥವಾ ಹರಾಜು ಬಳಿಕ ತಂದ ಚಿನ್ನಕ್ಕಾಗಿಯೋ ಅಪರಿಚತರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿತ್ತು.

ಅಸಲಿಗೆ ಕೊಲೆಯಾದ ಪುಟ್ಟರಾಜು ಗೆಳೆಯ ಶಫೀ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯವನು. ಚಿಕ್ಕಮಗಳೂರಿನ ಬಿರೂರಿನಲ್ಲಿ ನೆಲೆಸಿದ್ದ. ಈತ ಕಬಾಬ್ ಸೆಂಟರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಈತನಿಗೆ ಪುಟ್ಟರಾಜು ಕಳೆದ ಏಳು ವರ್ಷದಿಂದ ಪರಿಚಯ. ಆರಂಭದಲ್ಲಿ ಕಬಾಬ್ ಅಂಗಡಿ ಬಳಿ ಬರುತಿದ್ದ ಪುಟ್ಟರಾಜು ನಂತರದಲ್ಲಿ ಗೆಳೆಯನಾಗಿದ್ದ. ಏಳು ವರ್ಷದ ಈ ಆತ್ಮೀಯತೆಯಲ್ಲೇ ಇಬ್ಬರ ನಡುವೆ ಸಹ ಒಂದಷ್ಟು ಹಣಕಾಸಿನ ವ್ಯವಹಾರವು ನಡೆದಿತ್ತು. ಆದರೆ ಈ ಹಣ ಇಬ್ಬರ ನಡುವೆ ಯಾವತ್ತು ಜಗಳ ತಂದಿರಲಿಲ್ಲ. ಒಬ್ಬರಿಗೊಬ್ಬರು ಕಷ್ಟಕ್ಕೆ ಜೊತೆಯಾಗಿದ್ದರು. ಶಫೀ ಸಹ ಆಗಾಗ ಪುಟ್ಟರಾಜು ಮನೆಗೆ ಬಂದು ಹೋಗುತ್ತಿದ್ದ. ಜೀವನದಲ್ಲಿ ಮುಂದೆ ಹೇಗೆ ಸೆಟಲ್ ಆಗುವುದು ಎನ್ನುವ ಚರ್ಚೆ ಇಬ್ಬರಲ್ಲೂ ಇತ್ತು.

ಹೀಗೆ ಆತ್ಮೀಯವಾಗಿದ್ದ ಇಬ್ಬರು ಕಳೆದ ಫೆಬ್ರವರಿ 19ರಂದು ಹೊನ್ನವಳ್ಳಿಗೆ ತೆರಳಿದ್ದರು. ಕಾರಣ ಅದೊಂದು ಚಿನ್ನದ ಹರಾಜು ಪ್ರಕ್ರಿಯೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಚಿನ್ನದ ಬೆಲೆ. ಈ ಸಮಯದಲ್ಲಿ ಚಿನ್ನ ಖರೀದಿ ಮಾತು ಸವಾಲು. ಹಾಗಾಗಿಯೇ ಹಾರಾಜು ಪ್ರಕ್ರಿಯೆ ಚಿನ್ನ ಕಡಿಮೆಗೆ ಸಿಕ್ಕರೇ ಖರೀದಿ ಮಾಡಬಹುದು. ಆ ಬಳಿಕ ಆ ಚಿನ್ನ ಭವಿಷ್ಯಕ್ಕೆ ಉಪಯೋಗವಾಗುತ್ತೆ. ಹೀಗಂತ ಯೋಚನೆ ಮಾಡಿದ್ದ ಶಫೀ ಕಳೆದ ಕೆಲ ದಿನಗಳ ಹಿಂದೆ ಪುಟ್ಟರಾಜುಗೆ ತಿಳಿಸಿದ್ದ. ಜೊತೆಗೆ ಪುಟ್ಟರಾಜುವನ್ನು ಒಂದೆರಡು ಕಡೆ ಶಫೀ ಕರೆದುಕೊಂಡು ಹೊಗಿದ್ದ, ಚಿನ್ನ ಹರಾಜು ಪ್ರಕ್ರಿಯೆ ತೋರಿಸಿ ಲಾಭದ ಲೆಕ್ಕ ಹೇಳಿದ್ದ. ನಂತರ ತಾನೂ ಹಾರಾಜು ಪ್ರಕ್ರಿಯೆಯಲ್ಲಿ ಚಿನ್ನ ಖರೀದಿಸಲು ಪುಟ್ಟರಾಜು ಆಸಕ್ತಿ ತೋರಿದ್ದ ಅದಕ್ಕೆಂದೆ ಮನೆಯಿಂದ ಒಂದಷ್ಟು ಹಣ ಸಹ ತಂದಿದ್ದ. ಶಫೀ ಜೊತೆ ಫೆಬ್ರವರಿ 19ರಂದು ತುಮಕೂರಿನ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯ ಖಾಸಗಿ ಫೈನಾನ್ಸ್ ನ ಹರಾಜು ಪ್ರಕ್ರಿಯೆಗೆ ಭಾಗಿಯಾಗಲು ಹೋಗಿದ್ದ. ಆದರೆ ಹೀಗೆ ಹೋದ ಪುಟ್ಟರಾಜು ಶವವಾಗಿ ಪತ್ತೆಯಾದರೇ, ಶಫೀ ನಾಪತ್ತೆಯಾಗಿದ್ದ.

ಶಫೀ ಕಾಣೆ: ಪೊಲೀಸರಿಗೆ ಅನುಮಾನ

ಶಫೀ ಕಾಣೆಯಾದ ಹಿನ್ನಲೆ ಪೊಲೀಸರಿಗೆ ಅನುಮಾನ ಮೂಡಿತ್ತು. 7 ವರ್ಷದ ಆತ್ಮೀಯ ಗೆಳೆಯರು. ಒಬ್ಬ ಶವವಾಗಿ ಸಿಕ್ಕರೇ ಮತ್ತೊಬ್ಬ ಅರಣ್ಯ ಪ್ರದೇಶದಲ್ಲಿ ನಾಪತ್ತೆ ಅನ್ನೊದು ಗೊಂದಲ ಮೂಡಿಸಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು ಶಫೀ ಹುಡುಕಲು ಮುಂದಾಗಿದ್ದರು. ಆಗಲೇ ನೋಡಿ ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು. ಅಸಲಿಗೆ ಇಲ್ಲಿ ಪುಟ್ಟರಾಜು ಕೊಲೆ ಆಕಸ್ಮಿಕವಾಗಿ ಆಗಿರಲಿಲ್ಲ. ಬದಲಾಗಿ ಅದೊಂದು ಪ್ರೀ ಪ್ಲ್ಯಾನ್ ಆಗಿತ್ತು. ಯಾವಾಗ ಪೊಲೀಸರು ಶಫೀ ಹುಡುಕಲು ಮುಂದಾರೋ ಆಗ ಶಫೀಯ ಒಂದಷ್ಟು ಸಂಗತಿಗಳು ಹೊರ ಬಂದಿದ್ದವು. ಶಫೀಗೆ ಎಲ್ಲಿಲ್ಲದ ಸಾಲ, ಊರ ತುಂಬಾ ಸಾಲ. ಮೂಲತಃ ತುಮಕೂರಿನ ಹೊನ್ನವಳ್ಳಿಯವನ್ನೇ ಆದ ಈತ ಕಳೆದ 14 ವರ್ಷದ ಹಿಂದೆಯೇ ಊರು ಬಿಟ್ಟಿದ್ದ. ಕಾರಣ ಮೈತುಂಬ ಸಾಲ. ಹಣ ಕೊಟ್ಟವರು ಮನೆ ಬಳಿ ಬರುತಿದ್ದಂತೆ ಊರು ಬಿಟ್ಟಿದ್ದ ಶಫೀ ಚಿಕ್ಕಮಗಳೂರಿಗೆ ತೆರಳಿದ್ದ.

ಹೀಗೆ ಚಿಕ್ಕಮಗಳೂರಿಗೆ ಬಂದು ಬಿರೂರಿನಲ್ಲಿ ಮನೆ ಮಾಡಿಕೊಂಡ ಶಫೀ ಕಬಾಬ್ ಅಂಗಡಿ ತೆರೆದಿದ್ದ. ಅಂಗಡಿ ಮಾಡಿಕೊಂಡು ಹೊಸ ಜೀವನ ಮಾಡೊ ನಡುವೆ ಎರಡು ಮದುವೆ. ಇಬ್ಬರು ಹೆಂಡತಿಯರ ಮುದ್ದಿನ ಗಂಡನಾದ ಶಫೀಗೆ ಹಣದಾಸೆ. ಹೀಗಾಗಿ ಅಲ್ಲೂ ಸಹ ಮತ್ತೆ ಸಾಲ. ಮಾಡಿದ ಸಾಲಗಳ ತೀರಿಸಲಾಗದ ಪರದಾಡುತಿದ್ದ. ಇನ್ನು ಈತ ಪುಟ್ಟರಾಜು ಜೊತೆ ಬಂದಿದ್ದ ಅನ್ನೊ ಗೊಂದಲ. ಇದರ ನಡುವೆ ಪೊಲೀಸರಿಗೆ ಅನುಮಾನ ಮೂಡಿಸಿದ್ದು, ಪುಟ್ಟರಾಜು ಮನೆಯಲ್ಲಿ ಹೇಳಿದ್ದ ಆ ಮಾತು.

ಕೊಲೆ ಮಾಡಿ ಊರು ಬಿಟ್ಟಿದ್ದ ಆರೋಪಿ: ಎರಡನೇ ಹೆಂಡತಿ ಟಿವಿ ಗಿಫ್ಟ್​​

ಹೊನ್ನವಳ್ಳಿಯ ಫೈನಾನ್ಸ್​ನಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವುದಾಗಿ ಹೇಳಿ ಹೋಗಿದ್ದ. ಆದರೆ ಅವತ್ತು ಹೊನ್ನವಳ್ಳಿಯಲ್ಲಿ ಯಾವುದೇ ಚಿನ್ನದ ಹರಾಜು ಪ್ರಕ್ರಿಯೆ ಇರಲಿಲ್ಲ. ಮೇಲಾಗಿ ಅದೊಂದು ಸುಳ್ಳು. ಆ ಸುಳ್ಳು ಸೃಷ್ಟಿಸಿದ್ದವನು ಇದೇ ಶಫೀ. ಅಲ್ಲಿಗೆ ಶಫೀ ಕೃತ್ಯ ಪೊಲೀಸರಿಗೆ ಗೊತ್ತಾಗಿತ್ತು. ಆತನ ಹುಡುಕಾಟಕ್ಕೆ ಮುಂದಾದ ಪೊಲೀಸರು ಟೆಕ್ನಿಕಲ್ ಜಾಡು ಹಿಡಿದಿದ್ದರು. ಅದಾಗಲೇ ಕೊಲೆ ಮಾಡಿ ಊರು ಬಿಟ್ಟಿದ್ದ ಆರೋಪಿ ಶಫೀ ತನ್ನ ಎರಡನೇ ಹೆಂಡತಿ ಭೇಟಿ ಮಾಡಿದ್ದ. ಹಾಸನದ ಅರಸಿಕೆರೆಯ ಲಾಡ್ಜ್​ನಲ್ಲಿ ಆಕೆ ಭೇಟಿ ಮಾಡಿದ ಆಸಾಮಿ ಅವಳಿಗೊಂದು ಟಿವಿ ಹಾಗೂ 60 ಸಾವಿರ ರೂ ಹಣ ನೀಡಿದ್ದ. ಆ ಬಳಿಕ ಅಲ್ಲಿಂದ ಹೊರಟವನೇ ಬೆಂಗಳೂರು ಮಾರ್ಗವಾಗಿ ಚಿಂತಮಣಿ ಸೇರಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನವಳ್ಳಿ ಪೊಲೀಸರು ಕೊನೆಗೂ ಆತನ ಬಂಧಿಸಿದ್ದರು. ಆ ಬಳಿಕ ಪೊಲೀಸರಿಗೆ ಗೊತ್ತಾಗಿದ್ದು ಮೂರು ಲಕ್ಷ ರೂ ಸಾಲದ ಕಥೆ.

ಸಾಲದ ಸುಳಿಯಲ್ಲಿ ಸಿಲುಕಿದ ಶಫೀಗೆ ಖರ್ಚು ಮಾಡುವ ಹುಚ್ಚಾಟ. ಹೀಗಾಗಿಯೇ ಮಾಡಿಕೊಂಡ ಒಂದಷ್ಟು ಸಾಲ ಹಾಗೂ ತುರ್ತಾಗಿ ಬೇಕಾದ ಹಣಕ್ಕಾಗಿ ಶಫೀ ಪರದಾಡಿದ್ದ. ಊರಲ್ಲಿ ಗೊತ್ತಿರುವವರ ಬಳಿಯೆಲ್ಲಾ ಸಾಲ ಮಾಡಿದ್ದ ಶಫಿಗೆ ಮತ್ಯಾರನ್ನು ಕೇಳುವುದು ಎನ್ನುವ ಗೊಂದಲ. ಈ ವೇಳೆ ಶಫೀಗೆ ನೆನಪಾಗಿದ್ದು ಪುಟ್ಟರಾಜು. ಪುಟ್ಟರಾಜು ಜೊತೆ ಮೊದಲಿಂದಲೂ ಸಣ್ಣಪುಟ್ಟ ಹಣದ ವ್ಯವಹಾರ ಮಾಡಿದ್ದ ಶಫೀ ಈ ಬಾರಿ ಆತನಿಂದ ದೊಡ್ಡದನ್ನೇ ಬಯಸಿದ್ದ. ಆದರೆ ಅದನ್ನು ಕೇಳುವುದು ಹೇಗೆ ಎನ್ನುವ ಗೊಂದಲ ಶಫೀಗಿತ್ತು. ಹೀಗಾಗಿಯೇ ಚಿನ್ನದ ಹರಾಜು ಕಥೆ ಕಟ್ಟಿದ್ದ.

ಚಿನ್ನದ ಹರಾಜು ಕಥೆ ನಂಬಿಸುವ ಬರದಲ್ಲಿ ಶಫೀಗೆ ಹುಚ್ಚು ಯೋಚನೆಯೊಂದು ಮೂಡಿತ್ತು. ಅದುವೇ ಪುಟ್ಟರಾಜು ಬಳಿ ಇರುವ ಹಣ ಎಗರಿಸುವ ಚಿಂತೆಯಲ್ಲಿ ಅತನ ಕೊಲೆ ಮಾಡುವ ಸಂಚು. ಯಾವಾಗ ಶಫೀ ಹೇಳಿದ ಮಾತುಗಳನ್ನೆಲ್ಲಾ ಪುಟ್ಟರಾಜು ನಂಬಲು ಆರಂಭಿಸಿದ್ನೋ ಆಗ ಹೊಸದೊಂದು ಕಥೆ ಸೃಷ್ಟಿಸಿಬಿಟ್ಟಿದ್ದ. ಈ ಕಥೆಗೆ ತನ್ನದೇ ಊರನ್ನು ಆರಿಸಿಕೊಂಡ ಶಫೀ ಹೊನ್ನವಳ್ಳಿಯಲ್ಲಿ ಫೈನಾನ್ಸ್​ನ ಚಿನ್ನದ ಹರಾಜು ಇದೆ ಹೊದರೇ ದೊಡ್ಡ ಲಾಭ ಬರುತ್ತದೆ ಎಂಬ ಕಥೆ ಕಟ್ಟಿದ್ದ ಇದಕ್ಕೆ ನಾನು ಸಹ ಹಣ ತರ್ತಿನಿ ನೀನು ಲಕ್ಷ ಲಕ್ಷ ಹಣ ತೆಗೆದುಕೊಂಡು ಬಾ ಎಂದಿದ್ದ. ಈ ಮಾತು ಕೇಳಿದ ಪುಟ್ಟರಾಜು ಮನೆಯಿಂದ ಎರಡುವರೆ ಲಕ್ಷ ರೂ ತಂದು ಶಫೀ ಕೈಗಿಟ್ಟಿದ್ದ. ಅಲ್ಲಿಗೆ ಶಫೀ ಯೋಚನೆ ಮತ್ತಷ್ಟು ಅಡ್ಡದಾರಿ ಕಡೆ ತಿರುಗಿತ್ತು. ಹೀಗಾಗಿ ಮೊದಲೇ ಒಂದಷ್ಟು ಸಂಚು ರೂಪಿಸಿದ್ದ ಶಫೀ ತನ್ನ ಮತ್ತೊಬ್ಬ ಗೆಳೆಯನ ಸ್ಪ್ಲೆಂಡರ್ ಬೈಕ್ ತಂದಿದ್ದ. ಅದೇ ಗಾಡಿಯಲ್ಲಿ ಹೋಗೋಣ ಬಾ ಎಂದು ಪುಟ್ಟರಾಜು ಕರೆದಿದ್ದ. ಅತ್ತ ಪುಟ್ಟರಾಜು ನೈಟ್ ಪ್ಯಾಟ್ ನಲ್ಲಿ ಹೊರ ಬಂದವೇ ಕೈನಲ್ಲಿ ಹಣ ಹಿಡಿದ್ದ. ತನ್ನ ಬಳಿ ಹಣ ಇಟ್ಕೊಳೊಕೆ ಆಗಲ್ಲಪ್ಪ ನೀನೇ ಇಟ್ಕೊ ಅಂತ ಆ ಹಣವನ್ನು ಶಫೀ ಕೈಗಿಟ್ಟಿದ್ದ.

ಪುಟ್ಟರಾಜು ಹಣದಿಂದಲೇ ಆಯುಧ ಖರೀದಿ

ಹೀಗೆ ಹಣದ ಜೊತೆ ಹೊರಟವರೇ ನೇರವಾಗಿ ಅರಸಿಕೆರೆಯತ್ತ ತೆರಳಿದ್ದರು. ಅದು ಶಫೀ ಪ್ಲ್ಯಾನ್​​ನಂತೆ. ಕಾರಣ ಶಫೀ ಅದೊಂದು ಅಂಗಡಿ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ ಮನೆಯ ಬಳಿ ಒಂದಷ್ಟು ಗಿಡಗಳು ಬೆಳೆದಿವೆ, ಕಸ ಹೆಚ್ಚಾಗಿದೆ. ಅದನ್ನು ಸ್ವಚ್ಛಗೊಳಿಸಬೇಕು. ಹೀಗಾಗಿ ಅಲ್ಲಿ ಒಂದಷ್ಟು ಸಾಮಾನು ಖರೋದಿ ಇದೆ ಎಂದಿದ್ದ. ಈತನ ಮಾತು ನಂಬಿದ್ದ ಪುಟ್ಟರಾಜುವಿಗೆ ಮುಂದಾಗಬಹುದಿದ್ದ ಅನಾಹುತದ ಅರಿವಿರಲಿಲ್ಲ. ಹೀಗೆ ಅರಸಿಕೆರೆಯ ಅಂಗಡಿ ಒಂದಕ್ಕೆ ಬಂದ ಶಫೀ ಅಲ್ಲಿ ಮಚ್ಚು, ಸಣ್ಣ ಎರಡು ಚಾಕು, ಪೊರಕೆ ಅಂತ ಖರೀದಿ ಮಾಡಿದ್ದ. ಅಸಲಿಗೆ ಪುಟ್ಟರಾಜು ಹತ್ಯೆಗೆ ಸಂಚು ರೂಪಿಸಿದ್ದ ಶಫೀಗೆ ಮಚ್ಚು ಮಾತ್ರ ಬೇಕಾಗಿತ್ತು. ಆದರೆ ಪುಟ್ಟರಾಜುಗೆ ಈ ವಿಚಾರ ಗೊತ್ತಾಗಬಾರದು ಅನ್ನೊ ಕಾರಣಕ್ಕೆ ನಾಟಕವಾಡಿ ಕಥೆ ಬಿಟ್ಟ ಶಫೀ ಬೇರೆ ವಸ್ತುಗಳನ್ನು ಸಹ ಖರೀದಿ ಮಾಡಿದ್ದ. ಆ ಬಳಿಕ ಬೈಕ್ ಏರಿ ಇಬ್ಬರು ಹೊರಟವರೇ ನೇರವಾಗಿ ಅರಣ್ಯ ಪ್ರದೇಶದತ್ತ ಬಂದಿದ್ದರು. ಅದಾಗಲೇ ಸಮಯ ಮಧ್ಯಾಹ್ನವಾಗಿತ್ತು. ಉರಿ ಬಿಸಿಲು ನೆತ್ತಿಯ ಮೇಲಿತ್ತು. ಕಾಡಿನ ಒಂಟಿ ದಾರಿಯಲ್ಲಿ ಬೈಕ್ ಪಕ್ಕಕ್ಕೆ ಹಾಕಿದ ಶಫೀ ಕೆಳಗೆ ಇಳಿದಿದ್ದ. ಮೂತ್ರ ವಿಸರ್ಜನೆ ರೀತಿ ಹಿಂದೆ ಹೊದ ಶಫೀ ಏಕಾಏಕಿ ಮಚ್ಚಿನಿಂದ ಪುಟ್ಟರಾಜು ತಲೆಗೆ ಎರಡು ಬಾರಿ ಹೊಡೆದಿದ್ದ. ಕೂಡಲೇ ತಿರುಗಿದ ಪುಟ್ಟರಾಜು ಯಾಕೋ ಶಫೀ ಎಂದ ಅಷ್ಟೇ. ಮಚ್ಚಿನಿಂದ ಕುತ್ತಿಗೆಗೆ ಹಲ್ಲೆ ಮಾಡಿದ್ದ. ಸ್ಥಳದಲ್ಲೇ ಬಿದ್ದ ಪುಟ್ಟರಾಜು ಸಾವನಪ್ಪಿದ್ದ.

ಹೇಳಿಕೇಳಿ ಅದು ಅರಣ್ಯ ಪ್ರದೇಶ. ಸಾಮಾನ್ಯವಾಗಿ ಆ ರಸ್ತೆಯಲ್ಲಿ ಹೆಚ್ಚಾಗಿ ಜನರು ಓಡಾಡುವುದಿಲ್ಲ. ಹೀಗಾಗಿಯೇ‌ ಮಧ್ಯಾಹ್ನ ಕೊಲೆ ನಡೆದರೆ ವಿಚಾರ ಬೆಳಕಿಗೆ ಬಂದಿದ್ದು ಮರುದಿನ ಬೆಳಿಗ್ಗೆ. ವ್ಯಕ್ತಿಯೋರ್ವ ಹಾಲು ತೆಗೆದುಕೊಂಡು ಹೊಗುವಾಗ ಶವ ಕಾಣಿಸಿದೆ. ಆ ಬಳಿಕ ಆತ ಹೊನ್ನವಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ: ಗಲಾಟೆ ಬಿಡಿಸಲು ಹೋದವನಿಂದಲೇ ಚಾಕು ಇರಿತ​: ಹೋಳಿ ದಿನವೇ ನಡೀತು ರಕ್ತದೋಕುಳಿ

ಇತ್ತ ಕೊಲೆ ಬಳಿಕ ಊರು ಬಿಟ್ಟ ಶಫೀ ಡಿವೋರ್ಸ್ ಆಗಿದ್ದ ಹಳೆ ಹೆಂಡತ ನೆನಪಿಸಿಕೊಂಡಿದ್ದ. ಅದಾಗಲೇ ಪುಟ್ಟರಾಜು ಹಣ ಈತನ ಕೈ ಸೇರಿತ್ತು. ಹೀಗಾಗಿಯೇ ಹೊಸ ಟಿವಿ ಖರೀದಿಸಿ ಆಕೆ ಮನೆಗೆ ತೆರಳಿ ಟಿವಿ ಕೊಟ್ಟ ಆತ ಬಳಿಕ ಅರಿಸಿಕೆರೆ ಲಾಡ್ಜ್ ಕರೆದೊಯ್ದು 60 ಸಾವಿರ ಕೊಟ್ಟಿದ್ದ. ನಂತರ ಅಲ್ಲಿಂದ ಉಳಿದ ಹಣದ ಸಮೇತ ಚಿಂತಾಮಣೆ ಸೇರಿದ್ದವನ ಹೊನ್ನವಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us