ಬೆಂಗಳೂರಿನಲ್ಲಿ 800 ಕೆಜಿಗೂ ಹೆಚ್ಚು ಜಿಲೆಟಿನ್ ಸೀಜ್: ಬಂಡೆ ಒಡೆಯಲು ಅಕ್ರಮ ಸ್ಫೋಟ ಆರೋಪ
ಬೆಂಗಳೂರಿನ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಅಕ್ರಮವಾಗಿ ಜಿಲೆಟಿನ್ ಬಳಸಿ ಕಲ್ಲಿನ ಬಂಡೆ ಸ್ಫೋಟಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸರು 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದು, ಸ್ಥಳೀಯರ ದೂರಿನ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ 800 ಕೆಜಿಗೂ ಹೆಚ್ಚು ಜಿಲೆಟಿನ್ ಸೀಜ್
- ಶಾಲೆ ಸಮೀಪ ಬ್ಲಾಸ್ಟಿಂಗ್ ಆರೋಪ
- FIR ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು
ಬೆಂಗಳೂರು, ಆಗಸ್ಟ್ 17: ಬೆಂಗಳೂರು (Bengaluru) ನಗರದ ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗೆ ಅಕ್ರಮವಾಗಿ ಜಿಲೆಟಿನ್ (Gelatin) ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಳ್ಳಂದೂರು ಠಾಣೆ ಪೊಲೀಸರು 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ. ಭೋಗನಹಳ್ಳಿಯಲ್ಲಿ ಆದರ್ಶ ಕಂಪನಿಯಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ವೇಳೆ ದೊಡ್ಡ ಕಲ್ಲಿನ ಬಂಡೆಗಳು ಪತ್ತೆಯಾಗಿವೆ. ಅವುಗಳನ್ನು ತೆರವುಗೊಳಿಸಲು ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳದೆ ಜಿಲೆಟಿನ್ ಬಳಸಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ರಾತ್ರಿ ವೇಳೆ ಬ್ಲಾಸ್ಟಿಂಗ್ ಆರೋಪ
ಕಟ್ಟಡ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಸಮೀಪವೇ ಶಾಲೆಯೂ ಇದೆ. ರಾತ್ರಿ 12 ಗಂಟೆಯ ಬಳಿಕ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಶಾಲೆಯ ಸಮೀಪವೇ ಸ್ಫೋಟಕ ವಸ್ತುಗಳನ್ನು ಬಳಸುತ್ತಿರುವುದರಿಂದ ಮಕ್ಕಳ ಸುರಕ್ಷತೆ ಬಗ್ಗೆ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಎಫ್ಐಆರ್ನಲ್ಲಿ ಏನಿದೆ?
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಸತೀಶ್ ನಾಯಕ್ ಎಂಬವರು ಅರ್ಥ್‌ವರ್ಕ್ ಕೆಲಸ ಮಾಡುತ್ತಿದ್ದು, 2025ರ ಡಿಸೆಂಬರ್‌ನಲ್ಲಿ ಶ್ರೀನಿವಾಸ ಅರ್ಥ್ ಮೂವರ್ಸ್‌ನ ಮಾಲೀಕ ಅರುಣ್ ಕುಮಾರ್ ತಮ್ಮನ್ನು ಭೋಗನಹಳ್ಳಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ ಅರ್ಥ್‌ವರ್ಕ್ ಮಾಡಲು ಸಂಪರ್ಕಿಸಿದ್ದರು ಎಂದು ತಿಳಿಸಿದ್ದಾರೆ. ಕಾಮಗಾರಿ ವೇಳೆ ದೊಡ್ಡ ಕಲ್ಲುಗಳು ಪತ್ತೆಯಾಗಿದ್ದು, ಅವುಗಳನ್ನು ತೆರವುಗೊಳಿಸಲು ಕಾನೂನುಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಬಳಸುವಂತೆ ತಮ್ಮ ಮೇಲೆ ಒತ್ತಡ ಹೇರಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಕ್ಕೆ ತಾವು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲಸದಿಂದ ದೂರವಿಟ್ಟು, ಹಣ ನೀಡದೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದೂ ಉಲ್ಲೇಖಿಸಲಾಗಿದೆ. ಶ್ರೀನಿವಾಸ ಅರ್ಥ್ ಮೂವರ್ಸ್‌ನ ಮಾಲೀಕರು, ಸೈಟ್ ಇನ್‌ಚಾರ್ಜ್, ಸೈಟ್ ಎಂಜಿನಿಯರ್, ಆದರ್ಶ ಡೆವಲಪರ್ಸ್‌ನ ಮಾಲೀಕರು/ನಿರ್ದೇಶಕರು ಹಾಗೂ ಗುತ್ತಿಗೆದಾರರು ಕಾನೂನುಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಬಳಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
800 ಕೆಜಿಗೂ ಹೆಚ್ಚು ಜಿಲೆಟಿನ್ ವಶ
ಈ ಪ್ರಕರಣದ ಹಿನ್ನೆಲೆಯಲ್ಲಿ ಬೆಳ್ಳಂದೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಸ್ಫೋಟಕ ವಸ್ತುಗಳನ್ನು ಯಾವ ರೀತಿಯಲ್ಲಿ ಸಂಗ್ರಹಿಸಲಾಗಿತ್ತು, ಅವುಗಳ ಬಳಕೆಗೆ ಅನುಮತಿ ಇತ್ತೇ ಹಾಗೂ ಬ್ಲಾಸ್ಟಿಂಗ್ ನಡೆಸಲಾಗುತ್ತಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಹನೂರು ಶೂಟೌಟ್ ಕೇಸ್ಗೆ ಟ್ವಿಸ್ಟ್: ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ; ಸಿಕ್ಕಿದ್ದೇನು?
ಸದ್ಯ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 am, Mon, 17 August 26




