ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ: ಒಂದು ಹೊತ್ತು ಊಟಕ್ಕೂ ಕಷ್ಟ ಪಡುತ್ತಿರುವ ಕಾಡಿನ ಮಕ್ಕಳು!
ಚಾಮರಾಜನಗರ ಜಿಲ್ಲೆಯ ಆದಿವಾಸಿ ಸೋಲಿಗರು ಮತ್ತು ಇತರೆ ಬುಡಕಟ್ಟು ಸಮುದಾಯಗಳು ಕಳೆದ ಆರು ತಿಂಗಳಿಂದ ಸರ್ಕಾರದಿಂದ ದೊರೆಯುತ್ತಿದ್ದ ಆಹಾರ ಕಿಟ್‌ಗಳಿಂದ ವಂಚಿತರಾಗಿದ್ದಾರೆ. ಟೆಂಡರ್ ಪ್ರಕ್ರಿಯೆ ವಿಳಂಬದಿಂದಾಗಿ ಈ ಕಿಟ್‌ಗಳ ವಿತರಣೆ ಸ್ಥಗಿತಗೊಂಡಿದ್ದು, ಕಾಡಿನ ಮಕ್ಕಳು ಒಂದೊತ್ತು ಊಟಕ್ಕೂ ಪರದಾಡುವಂತಾಗಿದೆ. ಇದು ಅವರ ಆರೋಗ್ಯ ಮತ್ತು ಪೌಷ್ಟಿಕಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಚಾಮರಾಜನಗರ, ಸೆಪ್ಟೆಂಬರ್ 27: ಚಾಮರಾಜನಗರ, ಕರ್ನಾಟಕದಲ್ಲಿ ಅತಿ ಹೆಚ್ಚು ಆದಿವಾಸಿ ಸೋಲಿಗರು ವಾಸಿಸುವ ಜಿಲ್ಲೆಯಾಗಿದೆ. ಈ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಸಾವಿರಾರು ಬುಡಕಟ್ಟು ಸಮುದಾಯದ ಜನರು ಕಳೆದ ಆರು ತಿಂಗಳಿಂದ ರಾಜ್ಯ ಸರ್ಕಾರ ಒದಗಿಸುತ್ತಿದ್ದ ಆಹಾರ ಕಿಟ್‌ಗಳಿಂದ ವಂಚಿತರಾಗಿದ್ದಾರೆ. ಟ್ರೈಬಲ್ ವೆಲ್ಫೇರ್ ಇಲಾಖೆಯು ಪ್ರತಿ ತಿಂಗಳು ಸುಮಾರು 8,152 ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ಗಳನ್ನು ಈ ಸಮುದಾಯಗಳ ಮನೆ ಬಾಗಿಲಿಗೆ ತಲುಪಿಸುತ್ತಿತ್ತು.
ಈ ಕಿಟ್‌ಗಳಲ್ಲಿ ಮೊಟ್ಟೆ, ರಾಗಿ, ತೊಗರಿಬೇಳೆ, ಹೆಸರುಬೇಳೆ, ಕಡಲೆಕಾಳು, ತುಪ್ಪ ಸೇರಿದಂತೆ ಹಲವಾರು ಪೌಷ್ಟಿಕ ಆಹಾರ ಪದಾರ್ಥಗಳಿದ್ದವು. ಕೂಲಿ-ನಾಲಿ ಮಾಡುವ ಅವಕಾಶವಿಲ್ಲದ, ದುರ್ಗಮ ಕಾಡಿನ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಈ ಕಿಟ್‌ಗಳು ಪ್ರಮುಖ ಆಧಾರವಾಗಿದ್ದವು. ಆದರೆ, ಕಳೆದ ಆರು ತಿಂಗಳಿಂದ ಹೊಸ ಟೆಂಡರ್ ಪ್ರಕ್ರಿಯೆ ಆಗದ ಕಾರಣ ಕಿಟ್‌ಗಳ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದಾಗಿ ಚಾಮರಾಜನಗರದ ಸೋಲಿಗರು ಮತ್ತು ಜೇನುಕುರುಬರು ಸೇರಿದಂತೆ ಬುಡಕಟ್ಟು ಮಕ್ಕಳು ಮತ್ತು ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಕೂಡಲೇ ಈ ಕುರಿತು ಗಮನಹರಿಸಿ, ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆದಿವಾಸಿಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸುವಂತೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
