ಪ್ರಜಾಪ್ರಭುತ್ವಕ್ಕೆ ಕಂಟಕ ತರುವ ಪ್ರತಿ ಪಿತೂರಿಯಲ್ಲಿ ಕಾಂಗ್ರೆಸ್ ಭಾಗಿ: ಸಿಎಂ ಯೋಗಿ ಆದಿತ್ಯನಾಥ್ ನೇರ ವಾಗ್ದಾಳಿ
ಸಿಎಂ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಕಂಟಕವಾಗುವ ಪಿತೂರಿಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು. ಚುನಾವಣಾ ಆಯೋಗದ ಪ್ರಕ್ರಿಯೆಗಳನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಯೋಗಿ ಆಕ್ರೋಶ ವ್ಯಕ್ತಪಡಿಸಿದರು, ಇದು ಭಾರತದ ಪ್ರಜಾಪ್ರಭುತ್ವದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂದರು.

ಲಕ್ನೋ, ಸೆಪ್ಟೆಂಬರ್ 27: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಫಾರ್ಮ್-6 ಕುರಿತಂತೆ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಗದ್ದಲದ ನಡುವೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಲಕ್ನೋದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ನಿರಂತರವಾಗಿ ಷಡ್ಯಂತ್ರ ನಡೆಸುತ್ತಿವೆ ಎಂದು ನೇರವಾಗಿ ಆರೋಪಿಸಿದರು.
ಕಾಂಗ್ರೆಸ್ ಕಾಲದಲ್ಲೂ ನಡೆದಿತ್ತು ಎಸ್‌ಐಆರ್:
ಚುನಾವಣಾ ಆಯೋಗ ಕೈಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ವಿರೋಧ ಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂದ ಯೋಗಿ, “ಈ ರೀತಿಯ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವುದು ದೇಶದಲ್ಲಿ ಇದೇ ಮೊದಲೇನಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲೇ 1952, 1957, 1961, 1965-66 ಮತ್ತು 2003 ರಲ್ಲೂ ಹಲವು ಬಾರಿ ಎಸ್‌ಐಆರ್ ಕಾರ್ಯಾಚರಣೆ ನಡೆಸಲಾಗಿತ್ತು. ಇತಿಹಾಸವನ್ನು ಮರೆತು ಇಂದು ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಆರ್‌ಜೆಡಿ ಪಕ್ಷಗಳು ಈ ವಿಷಯದಲ್ಲಿ ನಾಟಕವಾಡುತ್ತಿರುವುದು ತೀರಾ ದುರದೃಷ್ಟಕರ” ಎಂದು ತಿರುಗೇಟು ನೀಡಿದರು.
ಸೇನೆಯ ಶೌರ್ಯ ಪ್ರಶ್ನಿಸುವುದೇ ಇವರ ದೇಶಭಕ್ತಿಯೇ?:
ವಿಪಕ್ಷಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, “ಭ್ರಷ್ಟಾಚಾರ ಮತ್ತು ಆರ್ಥಿಕ ಅಕ್ರಮಗಳಿಂದಾಗಿ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಯೊಂದಿಗೆ ಈ ಹಿಂದೆ ಆಟವಾಡಿದ್ದವರು ಇವರು. ಬಾಲಕೋಟ್ ವಾಯುದಾಳಿ ಇರಲಿ ಅಥವಾ ಇತ್ತೀಚಿನ ಆಪರೇಷನ್ ಸಿಂಧೂರ್ ಇರಲಿ—ದೇಶದ ಹೆಮ್ಮೆಯ ಸೈನಿಕರ ಪರಾಕ್ರಮ ಮತ್ತು ಸಾಹಸದ ಬಗ್ಗೆಯೇ ಸಂಶಯ ವ್ಯಕ್ತಪಡಿಸುವ ವಿಪಕ್ಷಗಳದ್ದು ಯಾವ ರೀತಿಯ ದೇಶಭಕ್ತಿ?” ಎಂದು ಕಟುವಾಗಿ ಪ್ರಶ್ನಿಸಿದರು.
ಮತ್ತಷ್ಟು ಓದಿ: 2027ರ ಯುಪಿ ಚುನಾವಣೆಯಲ್ಲಿ ಎಐಎಂಐಎಂ ಏಕಾಂಗಿ ಸ್ಪರ್ಧೆಯಿಲ್ಲ: ಆಜಾದ್ ಸಮಾಜ್ ಪಾರ್ಟಿ ಜೊತೆ ಮೈತ್ರಿ ಸುಳಿವು ನೀಡಿದ ಓವೈಸಿ
ಚುನಾವಣಾ ಆಯೋಗದ ಪರ ಯೋಗಿ ಬ್ಯಾಟಿಂಗ್:
ಎಸ್‌ಐಆರ್ ಬಗ್ಗೆ ಈಗಾಗಲೇ ಮೂವರು ಚುನಾವಣಾ ಆಯುಕ್ತರು ಮಾಧ್ಯಮಗಳ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ ಎಂಬುದನ್ನು ನೆನಪಿಸಿದ ಯೋಗಿ, “ಮತದಾರರ ಪಟ್ಟಿಯಿಂದ ಯಾರಾದರೂ ಹೊರಗುಳಿದಿದ್ದರೆ ಅವರು ನಮೂನೆ-6 (Form-6) ಭರ್ತಿ ಮಾಡಿ ಹೆಸರು ಸೇರಿಸಲು ಸಂಪೂರ್ಣ ಸ್ವತಂತ್ರರಾಗಿದ್ದಾರೆ. ಚುನಾವಣಾ ಆಯೋಗದ ಈ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ. ಆದರೂ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಕಳಂಕ ತರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನಡವಳಿಕೆ ಜಾಗತಿಕವಾಗಿ ಭಾರತದ ಪ್ರಜಾಪ್ರಭುತ್ವದ ವರ್ಚಸ್ಸಿಗೆ ಹಾನಿ ಮಾಡುತ್ತಿದೆ” ಎಂದು ಎಚ್ಚರಿಸಿದರು.
ವಿವಾದಕ್ಕೆ ಕಾರಣವಾದ ‘ಆಕ್ಷೇಪಣೆ’ ವರದಿಗಳು: ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ ಆಂತರಿಕ ಸಭೆಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದುಹಾಕುವುದು ಮತ್ತು ನಮೂನೆ-6 ನಿಯಮಗಳಲ್ಲಿ ತರಲಾದ ತಿದ್ದುಪಡಿಗಳಿಗೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಮಾಧ್ಯಮ ವರದಿಗಳ ಬೆನ್ನಲ್ಲೇ ವಿಪಕ್ಷಗಳು ಕೇಂದ್ರ ಸರ್ಕಾರ ಹಾಗೂ ಆಯೋಗದ ವಿರುದ್ಧ ದಾಳಿ ತೀವ್ರಗೊಳಿಸಿದ್ದವು.
ನಮೂನೆ-6 (Form-6) ಮಹತ್ವ: ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ 18 ವರ್ಷ ತುಂಬಿದ ಹೊಸ ಮತದಾರರು ಅಥವಾ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟುಹೋಗಿರುವ ಅರ್ಹ ಪ್ರಜೆಗಳು ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ನಮೂನೆ-6 ಮೂಲಕವೇ ಅಧಿಕೃತವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
2027 ರ ಯುಪಿ ಚುನಾವಣೆಯ ರಾಜಕೀಯ ಕಾವು: 2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ಪಾರದರ್ಶಕತೆ ವಿಚಾರವು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ನಡುವೆ ದೊಡ್ಡ ಮಟ್ಟದ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




