ಶಿವರಾತ್ರಿ ಪ್ರಯುಕ್ತ ಬಿಜೆಪಿ ಮುಖಂಡ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯ
ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಜೆಪಿ ಮುಖಂಡ ಆಯೋಜಿಸಿದ್ದ ಕ್ರಿಕೆಟ್ ಟೂರ್ನಾಮೆಂಟ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ದೊಡ್ಡಬಳ್ಳಾಪುರ: ಕ್ರಿಕೆಟ್ (Cricket) ಆಡುವಾಗ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ(bengaluru rural district) ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ(Doddabelavangala Village) ನಡೆದಿದೆ. ಭರತ್, ಪ್ರತೀಕ್ ಕೊಲೆಯಾದ ಯುವಕರು. ದೊಡ್ಡಬೆಳವಂಗಲ ಗ್ರಾಮದಲ್ಲಿ ಇಂದು (ಫೆ.17) ಕ್ರಿಕೆಟ್ ಆಡುವಾಗ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಭರತ್, ಪ್ರತೀಕ್ಗೆ ಚಾಕುವಿನಿಂದ ಇರಿಯಲಾಗಿದೆ. ಕೊಲೆ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಜೆಪಿ ಮುಖಂಡ ಧೀರಜ್ ಅವರು ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿದ್ದು, ಈ ವೇಳೆ ಮೈದಾನದಲ್ಲಿ ಕಾರು ನಿಲ್ಲಿಸಿದ್ದನ್ನು ಭರತ್ ಹಾಗೂ ಪ್ರತೀಕ್ ಪ್ರಶ್ನಿಸಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು 2 ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಗ್ರಾಮಸ್ಥರು, ಇತರೆ ಆಟಗಾರರು ಜಗಳ ಬಿಡಿಸಿ ಕಳುಹಿಸಿದ್ದರು. ಇನ್ನೇನು ಎಲ್ಲಾ ಮುಗಿತು ಎನ್ನುವಷ್ಟರಲ್ಲೇ ಭರತ್, ಪ್ರತೀಕ್ ಬಸ್ ಸ್ಟ್ಯಾಂಡ್ಗೆ ಬಂದಾಗ ಅಟ್ಟಾಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ, ಪರಿಶೀಲನೆ ನಡೆಸಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ
ಯಾದಗಿರಿ: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಇಂದು (ಶುಕ್ರವಾರ) ಯಾದಗಿರಿ ತಾಲೂಕಿನ ಸೈದಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 150 ಯಲ್ಲಿ ನಡೆದಿದೆ. ಕಾರಿನಲ್ಲಿದ್ದ ತೆಲಂಗಾಣದ ಗದ್ವಾಲ್ ಮೂಲದ ಸೈಫುಲ್ಲಾ (40) ಹಾಗೂ ಜ್ಞಾನೇಶ್ವರ (35) ಮೃತ ದುರ್ದೈವಿಗಳು.
ಲಾರಿ ಗುದ್ದಿರುವ ಪರಿಣಾಮ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಗದ್ವಾಲ್‌ನಿಂದ ಕಲಬುರಗಿಗೆ ಸೀರೆ ವ್ಯಾಪಾರಕ್ಕೆ ಹೊರಟಿದ್ದರು. ಇನ್ನು ಲಾರಿ ಕಲಬುರಗಿಯಿಂದ ತಮಿಳುನಾಡಿಗೆ ಹೋಗುತ್ತಿತ್ತು. ಸ್ಥಳಕ್ಕೆ ಸೈದಾಪುರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.