ನವಲಗುಂದ: ಬೈಕ್​ನಿಂದ ಇಳಿಯುವಾಗ ಕಾಲು ತಗುಲಿದ್ದಕ್ಕೆ ಬರ್ಬರ ಕೊಲೆ; ಆರೋಪಿಗಳು ಅಂದರ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 04, 2022 | 5:10 PM

ಧಾರವಾಡ ಜಿಲ್ಲೆಯ ಅಮರಗೋಳ ಗ್ರಾಮದಲ್ಲಿ ಬೈಕ್​ನಿಂದ ಇಳಿಯುವಾಗ ಕಾಲು ತಗುಲಿದ್ದಕ್ಕೆ ಕೊಲೆಯೇ ನಡೆದು ಹೋಗಿದೆ. ಆರೋಪಿಗಳನ್ನು ನವಲಗುಂದ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನವಲಗುಂದ: ಬೈಕ್​ನಿಂದ ಇಳಿಯುವಾಗ ಕಾಲು ತಗುಲಿದ್ದಕ್ಕೆ ಬರ್ಬರ ಕೊಲೆ; ಆರೋಪಿಗಳು ಅಂದರ್​
ಕೊಲೆಗೈದ ಆರೋಪಿಗಳು
Follow us on

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಈರಪ್ಪ ಬೈಕ್ ನಿಲ್ಲಿಸಿ ಕೆಳಗಿಳಿಯುವ ಹೊತ್ತಿಗೆ ಸಂಗನಗೌಡನಿಗೆ  ಕಾಲು  ಬಡಿದಿದೆ. ಇದರಿಂದ ಸಿಟ್ಟಿಗೆದ್ದ ಸಂಗನಗೌಡ, ಈರಪ್ಪನೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಅದು ಕೈ ಎತ್ತೋ ಮಟ್ಟಿಗೆ ಬಂದಿದೆ. ಇದೇ ವೇಳೆ ಈರಪ್ಪನ ಅಣ್ಣ ಫಕೀರಪ್ಪ ಹಾಗೂ ಆತನ ಮಕ್ಕಳು, ಅಳಿಯ ಕೂಡ ಅಲ್ಲಿಗೆ ಬಂದಿದ್ದು, ಸಂಗನಗೌಡನ ಮೇಲೆ ಹಲ್ಲೆ ಮಾಡಿದ್ದಾರೆ. ಆರೂ ಜನ ಸೇರಿ ನೆಲಕ್ಕೆ ಹಾಕಿ ತುಳಿದಿದ್ದಾರೆ. ಕೊನೆಗೆ ಆರೂ ಜನರ ಹೊಡೆತಕ್ಕೆ ಸಂಗನಗೌಡ ಕುಸಿದು ಬಿದ್ದಿದ್ದಾನೆ.

ಅದೇ ಹೊತ್ತಿಗೆ ನೀರನ್ನು ತರಲು ಹೋಗಿದ್ದ ಸಂಗನಗೌಡನ ಸೊಸೆ ಮಲ್ಲವ್ವ ಅದೇ ಸ್ಥಳಕ್ಕೆ ಬಂದಿದ್ದಾಳೆ. ಕುಸಿದು ಬಿದ್ದಿದ್ದ ಸಂಗನಗೌಡನನ್ನು ನೋಡಿ ಓಡಿ ಹೋಗಿ ಪತ್ನಿ ಚೆನ್ನಬಸವ್ವನನ್ನು ಕರೆದಿದ್ದಾಳೆ. ಬಳಿಕ ಇಬ್ಬರೂ ಸೇರಿ ಮನೆಗೆ ಎತ್ತುಕೊಂಡು ಕರೆ ತಂದಿದ್ದಾರೆ. ಎಷ್ಟೇ ಮಾತನಾಡಿಸಿದರೂ ಸಂಗನಗೌಡ ಸ್ಪಂದಿಸದೇ ಇದ್ದಾಗ ಕೂಡಲೇ ನವಲಗುಂದ ತಾಲೂಕಾ ಆಸ್ಪತ್ರೆಗೆ ವಾಹನವೊಂದರಲ್ಲಿ ಕರೆ ತಂದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಸಂಗನಗೌಡನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಸಂಗನಗೌಡನಿಗೆ ಎಲ್ಲೆಂದರಲ್ಲಿ ಹೊಡೆದಿದ್ದಕ್ಕೆ ಆತ ಮೃತಪಟ್ಟಿದ್ದು, ಅದರಲ್ಲೂ ಹಲ್ಲೆ ಮಾಡುವಾಗ ಸಂಗನಗೌಡನ ಮರ್ಮಾಂಗಕ್ಕೂ ಹೊಡೆಯಲಾಗಿದೆಯಂತೆ. ಇನ್ನು ಹೃದಯಕ್ಕೆ ಬಲವಾದ ಹೊಡೆತ ಬೀಳುತ್ತಿದ್ದಂತೆಯೇ ಸಂಗನಗೌಡನಿಗೆ ಹೃದಯಾಗಾತವಾಗಿರಬಹುದು ಎನ್ನಲಾಗಿದೆ.

ಇದನ್ನೂ ಓದಿ:ಆನೇಕಲ್​ನಲ್ಲಿ ಭೀಕರ ಕೊಲೆ: ವೃದ್ಧೆಯನ್ನು ಹತ್ಯೆಗೈದು ಬೀರುವಿನಲ್ಲಿಟ್ಟು ಪರಾರಿಯಾದ ಮುಸ್ಲಿಂ ಮಹಿಳೆ

ಇದೀಗ ಈರಪ್ಪ ಕಿತ್ಲಿ ಸೇರಿದಂತೆ ಆರು ಜನರ ಮೇಲೆ ಕೇಸು ದಾಖಲಾಗಿದೆ. ಅದರಲ್ಲಿ ಬಸವರಾಜ ಕಿತ್ಲಿ, ನಾಗರಾಜ ಕಿತ್ಲಿ, ಮಂಜುನಾಥ ಕಿತ್ಲಿ, ಈರಪ್ಪ ಕಿತ್ಲಿ, ಬಸಪ್ಪ ಕುರುವಿನಕೊಪ್ಪನನ್ನು ನವಲಗುಂದ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ಧಾರೆ. ಇನ್ನು ಫಕೀರಪ್ಪನ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ಇದುವರೆಗೂ ಆತನನ್ನು ಬಂಧಿಸಿಲ್ಲ. ಒಟ್ಟಿನಲ್ಲಿ ಕಾಲು ತಾಕಿದಕ್ಕಾಗಿ ಶುರುವಾದ ಜಗಳ ಈ ರೀತಿ ಅಂತ್ಯ ಕಂಡಿದ್ದು ವಿಪರ್ಯಾಸದ ಸಂಗತಿಯೇ ಸರಿ.

ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ