ಅನುಕಂಪದ ನೌಕರಿಗಾಗಿ ಗಲಾಟೆ, ಅಣ್ಣನನ್ನು ಕೊಂದ ಪಾಪಿ ತಮ್ಮ..! ಕೈ ಜೋಡಿಸಿದಳಾ ತಾಯಿ..?

| Updated By: ವಿವೇಕ ಬಿರಾದಾರ

Updated on: Nov 07, 2022 | 10:55 PM

ಕೆಲಸದ ವಿಚಾರವಾಗಿ ಒಡಹುಟ್ಟಿದವರ ಮಧ್ಯೆ ಜಗಳ ನಡೆದು, ಜಗಳ ತಾರಕಕ್ಕೇರಿ ಪರಿಸ್ಥಿತಿ ಕೈ ಮೀರಿ ಘೋರ ಅಂತ್ಯ ಕಂಡಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದಿದೆ

ಅನುಕಂಪದ ನೌಕರಿಗಾಗಿ ಗಲಾಟೆ, ಅಣ್ಣನನ್ನು ಕೊಂದ ಪಾಪಿ ತಮ್ಮ..! ಕೈ ಜೋಡಿಸಿದಳಾ ತಾಯಿ..?
ಪ್ರಾತಿನಿಧಿಕ ಚಿತ್ರ
Follow us on

ಒಡಹುಟ್ಟಿದವರ ಜಗಳ ಇದ್ದದ್ದೇ. ಚಿಕ್ಕವರಿದ್ದಾಗಿನಿಂದ ಸಾಯುವವರೆಗೆ ಒಬ್ಬರಿಗೊಬ್ಬರು ಜಗಳವಾಡುತ್ತಾ, ಹಾಗೇ ಪ್ರೀತಿಯಿಂದ ಕೂಡಿ ಇರುತ್ತಾರೆ. ಆದರೆ ಇಲ್ಲಿ ಕೆಲಸದ ವಿಚಾರವಾಗಿ ಒಡಹುಟ್ಟಿದವರ ಮಧ್ಯೆ ಜಗಳ ನಡೆದು, ಜಗಳ ತಾರಕಕ್ಕೇರಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಈ ಪರಿಸ್ಥಿತಿಗೆ ತಾಯಿಯು ಕಾರಣವಾಗಿದ್ದಾಳೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಹೌದು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಚಿನ್ನದ ಮಣ್ಣು ಎಂದೇ ಪ್ರಸಿದ್ದಿಯಾದ ಹಟ್ಟಿ ಪಟ್ಟಣ. ಈ ಪಟ್ಟಣದಲ್ಲಿ ಇದೇ ನವೆಂಬರ್ ​3 ರಂದು ಅದೊಂದು ದುರಂತ ನಡೆದುಹೋಗಿದೆ. ಅದು ಹಟ್ಟಿ ಪಟ್ಟಣದ ನಿವಾಸಿ ಸಿದ್ದಣ್ಣ ಎಂಬುವರು ಮೃತಪಟ್ಟಿದ್ದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಊರಿಗೆ ಹರಡಿತ್ತು, ರಾತ್ರಿವರೆಗೂ ಚೆನ್ನಾಗಿಯೇ ಇದ್ದ ಸಿದ್ದಣ್ಣ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದನು. ಈ ಪ್ರಶ್ನೇ ಎಲ್ಲರಲ್ಲೂ ಮೂಡಲು ಶುವಾಯಿತು.

ಇದಕ್ಕೆ ಉತ್ತರವೆಂಬಂತೆ ಸಿದ್ದಣ್ಣ ರಾತ್ರಿ ಕುಡಿದ ಮತ್ತಲ್ಲಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ ಅನ್ನೊ ಸುದ್ದಿ ಹಬ್ಬಿತ್ತು. ಇದೇ ನಿಜವೆಂದು ನಂಬಿ, ಸಿದ್ದಣ್ಣ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆಂದು ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಮುಂದಾಗಿದ್ದರು. ಈ ವಿಚಾರ ತವರು ಮನೆಯಲ್ಲಿದ್ದ ಮೃತ ಸಿದ್ದಣ್ಣ ಪತ್ನಿ ರಂಗಮ್ಮಳಿಗೆ ತಿಳಿದಾಗ ಬರಸಿಡಿಲೇ ಬಡಿದಂತಾಯಿತು. ಕೂಡಲೆ ರಂಗಮ್ಮ ತವರುಮನೆಯವರೊಂದಿಗೆ ಗಂಡನ ಮನೆಗೆ ಬಂದಿದ್ದಳು.

ಪತ್ನಿ ಬಂದವಳೇ ಪತಿಯ ಮೃತದೇಹ, ಘಟನಾ ಸ್ಥಳ ನೋಡಿ ಹೌಹಾರಿ ಹೋಗಿದ್ದಳು. ಬಿದ್ದು ಪೆಟ್ಟಾಗಿದ್ದರೇ ತಲೆಗೆ ಮಾತ್ರ ಗಾಯವಾಗಿಬೇಕು. ಆದರೆ ಸಿದ್ದಣ್ಣನ ಕಾಲುಗಳು ಪುಡಿಪುಡಿಯಾಗುವಂತೆ ಮುರಿದಿದ್ದವು. ಎರಡು ಕೈಗಳು ಜೋತು ಬಿದ್ದಿದ್ದವು. ಮೈ ಮೇಲೆಲ್ಲಾ ಗಾಯಗಳಾಗಿದ್ದವು. ಇದನ್ನು ನೋಡಿದ ರಂಗಮ್ಮ ಅನುಮಾನಗೊಂಡು ನೇರ ಹಟ್ಟಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ ಪತಿ ಸಿದ್ದಣ್ಣ ಕೊಲೆಯಾಗಿದ್ದು, ಮೈದುನ ಗುಡದಪ್ಪ ಅಲಿಯಾಸ್​ ಮುದಿಯಪ್ಪ ಹಾಗೂ ಅತ್ತೆ ಯಂಕಮ್ಮ ಕೊಲೆ ಮಾಡಿದ್ದಾರೆ ಎಂದು ದಾಖಲಿಸಿದ್ದಳು.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಗಮನಿಸಿದಾಗ ಇದು ಆಕಸ್ಮಿಕ ಸಾವಲ್ಲ, ಇಟ್ ಇಸ್ ಡೆಡ್ಲಿ ಮರ್ಡರ್ ಅನ್ನೋದು ದೃಢಪಟ್ಟಿತ್ತು. ನಂತರ ಪೊಲೀಸರು ವಿಚಾರಣೆಗೆಂದು ರಂಗಮ್ಮಳನ್ನು ಕರೆಸಿದಾಗ ಮೈದುನ ಮತ್ತು ಅತ್ತೆ ಯಂಕಮ್ಮಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಅದೇನೆಂದರೇ ಮೃತ ಸಿದ್ದಣ್ಣನ ತಂದೆ ಶಿವಪ್ಪ ಈ ಹಿಂದೆ ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆಯ ಅಕಾಲಿಕ ಮರಣದ ಬಳಿಕ ಆ ನೌಕರಿ ಆತನ ಪತ್ನಿ ಯಂಕಮ್ಮಳಿಗೆ ಬಂದಿತ್ತು. ಸದ್ಯ ಯಂಕಮ್ಮ ಇದೇ ಹಟ್ಟಿ ಕಂಪನಿಗೆ ಸೇರಿದ ಆಸ್ಪತ್ರೆಯಲ್ಲಿ ಡಿ ದರ್ಜೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾಳೆ. ಈಗ ಯಂಕಮ್ಮ ನಿವೃತ್ತಿ ಅಂಚಿನಲ್ಲಿದ್ದು, ಈ ನೌಕರಿಯನ್ನು ಅನುಕಂಪದ ಆಧಾರದ ಮೇಲೆ ಹಿರಿಮಗ ಸಿದ್ದಣ್ಣನಿಗೆ ಕೊಡಿಸಲು ಮಾತುಕತೆಯಾಗಿತ್ತು.

ಆದರೆ ಸಿದ್ದಣ್ಣನಿಗೆ ಮದುವೆಯಾದ ಬಳಿಕ ತಾಯಿ ಯಂಕಮ್ಮ ಹಾಗೂ ಸಹೋದರ ಗುಡದಪ್ಪ ಉಲ್ಟಾ ಹೊಡೆದಿದ್ದರು. ಈ ವಿಚಾರವಾಗಿ ಮನೆಯಲ್ಲಿ ಗಲಾಟೆಯಾಗುತ್ತಿತ್ತು. ಹೀಗಾಗಿ ಇವರೇ ಕೊಲೆ ಮಾಡಿದ್ದಾರೆ ಎಂದು ರಂಗಮ್ಮ ಅತ್ತೆ ಮತ್ತು ಮೈದುನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು. ಅನುಮಾನದ ಆಧಾರದ ಮೇಲೆ ಪೊಲೀಸರು ಯಂಕಮ್ಮ ಮತ್ತು ಗುಡದಪ್ಪ ಅಲಿಯಾಸ್​ ಮುದಿಯಪ್ಪನನ್ನು ಕರೆಸಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯಿ ಬಿಟ್ಟಿದ್ದಾರೆ.

ಅಕ್ಟೋಬರ್ 31 ಕ್ಕೆ ಆರೋಪಿತರು ಮೃತ ಸಿದ್ದಣ್ಣನ ಪತ್ನಿ ರಂಗಮ್ಮಳನ್ನು ಆಕೆಯ ತವರಿಗೆ ಕಳುಹಿಸಿದ್ದರಂತೆ. ರಂಗಮ್ಮ ತವರು ಮನೆಗೆ ಹೋಗಲು ಕಥೆಯೊಂದು ಹೆಣದಿದ್ದರು. ಅದು ನಿನ್ನ ಗಂಡ ನಿನ್ನನ್ನು ಕೊಲ್ಲುತ್ತೇನೆ ಅಂತೆಲ್ಲಾ ಹೇಳುತ್ತಿದ್ದಾನೆ. ನೀನು ಸ್ವಲ್ಪ ದಿನ ತವರು ಮನೆಯಲ್ಲೇ ಇರು ಅಂತೆಲ್ಲಾ ಹೇಳಿ ಕಳುಹಿಸಿದರಂತೆ.

ಪತ್ನಿ ಆ ಕಡೆ ತವರು ಮನೆ ಸೇರಿದರೇ, ಈ ಕಡೆ ಸಿದ್ದಣ್ಣ ಕೊಲೆಗೆ ಮೂರ್ತ ಫಿಕ್ಸ್​ ಆಗಿತ್ತು. ಅದು ನವೆಂಬರ್ 3 ರ ರಾತ್ರಿ ಇಡೀ ಊರೇ ನಿದ್ರೆಗೆ ಜಾರಿತ್ತು. ಊರಲ್ಲಿ ನೀರವ ಮೌನ ಆವರಿಸುತ್ತು. ಈ ವೇಳೆ ಗುಡದಪ್ಪ ಅಲಿಯಾಸ್​ ಮುದಿಯಪ್ಪ, ಸಿದ್ದಣ್ಣನಿಗೆ ಒನಕೆಯಿಂದ ಹೊಡೆದು ಕೈಕಾಲು ಮುರಿದು ಮನಬಂದಂತೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಸದ್ಯ ಘಟನೆ ಸಂಬಂಧ ಹಟ್ಟಿ ಪೊಲೀಸರು ಆರೋಪಿ ತಮ್ಮ ಗುಡದಪ್ಪ ಅಲಿಯಾಸ್​ ಮುದಿಯಪ್ಪನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ತಾಯಿ ಯಂಕಮ್ಮ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ದೂರು ದಾಖಲಾದ ಹಿನ್ನೆಲೆ ಹಟ್ಟಿ ಪೊಲೀಸರು ಮೃತನ ತಾಯಿ ಯಂಕಮ್ಮಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅದೇನೆ ಇರಲಿ ಯಕಃಶ್ಚಿತ್​ ಒಂದು ಕೆಲಸಕ್ಕಾಗಿ ಒಡ ಹುಟ್ಟಿದ ಅಣ್ಣನನ್ನು ಕೊಲೆ ಮಾಡಿರುವ ಮಟ್ಟಿಗೆ ತಮ್ಮ ಕೈ ಹಾಕಿರುವುದು ಮಾತ್ರ ದುರದೃಷ್ಟಕರ ಸಂಗತಿ.

ಭೀಮೇಶ್ ಪೂಜಾರ್, ಟಿವಿ9 ರಾಯಚೂರು

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ